ಮೈಸೂರು : ಆಷಾಢಮಾಸದ ಮೂರನೇ ಶುಕ್ರವಾರ ಹಿನ್ನೆಲೆಯಲ್ಲಿ ನಾಡಿನ ಅಧಿದೇವತೆಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿತು.
ಚಾಮುಂಡೇಶ್ವರಿಗೆ ಬೆಳಗಿನ ಜಾವದಿಂದಲೇ ವಿಶೇಷ ಪೂಜೆ ಆರಂಭಿಸಿದ್ದು, ಮೂರನೇ ವಾರವೂ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ. ಬೆಟ್ಟದ ತಾಯಿ ಚಾಮುಂಡೇಶ್ವರಿ ದೇವಿಗೆ ಲಕ್ಷ್ಮೀ ಅಲಂಕಾರ ಹಾಗೆನೇ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರ ನಾಮಾರ್ಚನೆ ಮಹಾಮಂಗಳಾರತಿ ವಿಷೇಶ ಪೂಜೆ ನಡೆದವು.
ಇನ್ನು, ಬೆಳಗಿನ ಜಾವ 5:30 ರಿಂದ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ವಿವಿಧ ಬಗೆಯ ಹೂವಿನ ಅಲಂಕಾರದಿಂದ ದೇವಾಲಯ ಕಂಗೊಳಿಸುತ್ತಿತ್ತು. ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಪಾಸ್‌ಗಳಿಂದಾಗಿ ಬೆಟ್ಟದಲ್ಲಿ ಖಾಸಗಿ ವಾಹನಗಳ ದರ್ಬಾರ್ ಹೆಚ್ಚಾದ್ದರಿಂದ ಚಾಮುಂಡಿ ಬೆಟ್ಟಕ್ಕೆ ಸಂಚರಿಸುವುದನ್ನು ತಪ್ಪಿಸಲು ಪಾಸ್ ರದ್ದು ಮಾಡಲಾಯಿತು.