Thursday, December 26, 2024

ಶಿವಮೊಗ್ಗದಲ್ಲಿ ಮತ್ತೊಂದು ಮರ್ಡರ್; ಹಂತಕರು ಎಸ್ಕೇಪ್

ಶಿವಮೊಗ್ಗ : ನಗರದಲ್ಲಿ ಮತ್ತೆ ನೆತ್ತರು ಹರಿದಿದೆ. ಮತ್ತೊಂದು ಮರ್ಡರ್ ಆಗುವ ಮೂಲಕ ತಣ್ಣಗಿದ್ದ ಜಿಲ್ಲೆಯಲ್ಲಿ ಆತಂಕ ಉಂಟಾಗುವಂತೆ ಮಾಡಿದೆ. ನಟೋರಿಯಸ್ ರೌಡಿಶೀಟರ್​ವೊಬ್ಬನ ಮರ್ಡರ್ ಆಗಿದ್ದು, ರೌಡಿ ಪಾಳಯದಲ್ಲಿ ಮತ್ತೆ ಸಂಚಲನ ಮೂಡಿಸಿದಂತಾಗಿದೆ.

ಕೊತ್ವಾಲ್ ರಾಮಚಂದ್ರ-ಜಯರಾಜ್ ಕಾಲದಿಂದಲೂ ಶಿವಮೊಗ್ಗದಲ್ಲಿ ರೌಡಿಗಳ ಸಾಮ್ರಾಜ್ಯದಲ್ಲಿ ಹಲವಾರು ರೌಡಿ ಶೀಟರ್​ಗಳು ಬಂದಿದ್ದಾರೆ ಹೋಗಿದ್ದಾರೆ. ಇದೀಗ, ಶಾಂತವಾಗಿದ್ದ ಶಿವಮೊಗ್ಗದಲ್ಲಿ ರೌಡಿಯೊಬ್ಬನ ನೆತ್ತರು ಹರಿದಿದೆ. ನಗರದ ಪೊಲೀಸ್ ಚೌಕಿ ವೃತ್ತದಲ್ಲಿದ್ದ ಕ್ಯಾಂಟಿನ್​ವೊಂದರಲ್ಲಿ ಟೀ ಕುಡಿದು ನಿಂತಿದ್ದ ಪಾತಕಿ ರೌಡಿಶೀಟರ್ ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪ ನಡು ರಸ್ತೆಯಲ್ಲೇ ಭೀಕರವಾಗಿ ಮರ್ಡರ್ ಆಗಿದ್ದಾನೆ. ಇದರಿಂದ ಶಿವಮೊಗ್ಗ ಜಿಲ್ಲೆಯ ಜನತೆ ಮತ್ತೆ ಬೆಚ್ಚಿಬೀಳುವಂತಾಗಿದೆ.

ಅಂದಹಾಗೆ, ಕೆ.ಎ. 19 ರಿಜಿಸ್ಟ್ರೇಷನಿನ ಇನ್ನೋವಾ ಕಾರಿನಲ್ಲಿ ಬಂದಿದ್ದ 7 ಜನ ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಬಂದು ಮಚ್ಚು ಲಾಂಗುಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಹಂತಕರು ಪರಾರಿಯಾಗಿದ್ದಾರೆ. ಇದು ಸ್ಥಳೀಯ ಸಿಸಿಟಿವಿಗಳಲ್ಲಿ ರೆಕಾರ್ಡ್ ಆಗಿದ್ದು, ಹಾಡಹಗಲೇ ಈ ಘಟನೆ ನಡೆದಿರೋದು ಜನರ ಆತಂಕಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪ ಮೇಲೆ 9 ಕೇಸುಗಳಿದ್ದು, ಇದರಲ್ಲಿ ಎರಡು ಕೊಲೆ ಕೇಸುಗಳು ಸೇರಿದಂತೆ, ಹಫ್ತಾ ವಸೂಲಿ, ಡಕಾಯಿತಿ, ದೊಂಬಿ, ಬೆದರಿಕೆ ಹೀಗೆ ಹಲವಾರು ಕೇಸುಗಳಿವೆ.

ಇನ್ನು ದುಷ್ಕರ್ಮಿಗಳು ಬೆಂಗಳೂರಿನಿಂದ ಬಂದಿದ್ದರು ಎಂದು ಹೇಳಲಾಗಿದ್ದು, ಈ ಹಿಂದೆ ನಟೋರಿಯಸ್ ರೌಡಿ ಶೀಟರ್​ಗಳಾಗಿದ್ದ ಲವ-ಕುಶ ಮರ್ಡರ್ ಕೇಸಿನಲ್ಲಿ ಹಂದಿ ಅಣ್ಣಿ ಪ್ರಮುಖ ಆರೋಪಿಯಾಗಿದ್ದ ಎಂಬುದು ಇಲ್ಲಿ ಪ್ರಮುಖ ಅಂಶವಾಗಿದೆ. ಅಷ್ಟೇಅಲ್ಲದೇ, ನನ್ನ ಯಾರು ಕೂಡ ತುಳಿಯೋಕೆ ಆಗಲ್ಲಾ ಎಂಬ ವಾಟ್ಸಪ್ ಸ್ಟೇಟಸ್ ಹಾಕಿಕೊಂಡ ಕೇವಲ 15 ನಿಮಿಷಗಳಲ್ಲಿಯೇ, ರೌಡಿ ಶೀಟರ್​​ನ ಹತ್ಯೆ ನಡೆದಿದೆ.

ಒಟ್ಟಿನಲ್ಲಿ, ರೌಡಿಗಳ ಸಾಮ್ರಾಜ್ಯ ಎಂದೇ ಕರೆಸಿಕೊಳ್ಳುತ್ತಿದ್ದ ಶಿವಮೊಗ್ಗದಲ್ಲಿ ಮತ್ತೊಬ್ಬ ರೌಡಿಶೀಟರ್​​ನ ಕೊಲೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಳೆದ 4-5 ವರ್ಷಗಳಿಂದ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗದೇ, ಮರಳು ಸಾಗಾಣಿಕೆ, ರಿಯಲ್ ಎಸ್ಟೇಟ್​ನಲ್ಲಿ ತೊಡಗಿಕೊಂಡಿದ್ದ ಹಂದಿ ಅಣ್ಣಿಯ ಹತ್ಯೆ ಯಾವ ಕಾರಣಕ್ಕೆ ಅನ್ನೋದು ತನಿಖೆಯಿಂದಷ್ಟೇ ಬಯಲಾಗಬೇಕಿದೆ.

ಗೋ.ವ. ಮೋಹನಕೃಷ್ಣ, ಪವರ್ ಟಿ.ವಿ., ಶಿವಮೊಗ್ಗ

RELATED ARTICLES

Related Articles

TRENDING ARTICLES