ವಿಜಯಪುರ : ಆತ ಟೈರ್ಸ ಅಂಗಡಿಯಲ್ಲಿ ವಾಹನಗಳ ವ್ಹೀಲ್ ಅಲೈನ್ ಮೆಂಟ್ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಅವರ ಅಂಗಡಿಗೆ ಬಂದಿದ್ದ ಪಿಎಸ್ಐ, ಕಾರಿನಲ್ಲಿದ್ದ 1 ಲಕ್ಷ ಹಣ ಕಳ್ಳತನವಾಗಿದೆ. ಕದ್ದಿದ್ದು ಈತನೇ ಅಂತ ಆರೋಪ ಮಾಡಿದ್ದ. ಇದರಿಂದ ಮನನೊಂದ ಯುವಕ ಮಾಡಿದ್ದೇನು ಗೊತ್ತಾ ಈ ಸ್ಟೋರಿ ನೋಡಿ.
ಮೂಲತಃ ಬಸವನ ಬಾಗೇವಾಡಿ ತಾಲೂಕಿನ ಡೊಣೂರ ಗ್ರಾಮದ ಯುವಕ ಸೋಮನಾಥ ಎಂಬಾತ ಕಳೆದ ಕೆಲ ವರ್ಷಗಳಿಂದ ವಿಜಯಪುರ ನಗರದಲ್ಲಿ ನೆಲೆಸಿದ್ದರು. ಆದರೆ ಜುಲೈ 8 ರಂದು ಕಾಣೆಯಾಗಿದ್ದ ಯುವಕ ಇದೀಗ ಶವವಾಗಿ ಪತ್ತೆಯಾಗಿದ್ದಾನೆ. ಹೌದು, ಈತ ವಿಜಯಪುರ ನಗರದ ಶಿವಗಿರಿ ಟೈರ್ಸ ಎಂಬ ಅಂಗಡಿಯಲ್ಲಿ ವಾಹನಗಳ ವ್ಹೀಲ್ ಅಲೈನ್ ಮೆಂಟ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಕಳೆದ ಕೆಲ ದಿನಗಳ ಹಿಂದೆ ಎಪಿಎಂಸಿ ಠಾಣೆಯ ಪಿಎಸ್ಐ ಸೋಮೇಶ ಸಹೋದರ ಸಚಿನ್ ಕಾರ್ ವ್ಹೀಲ್ ಅಲೈನ್ಮೆಂಟ್ಗೆ ನೀಡಿದ್ದರಂತೆ. ಕಾರಿನಲ್ಲಿ 7.5 ಲಕ್ಷ ರೂಪಾಯಿ ಇಟ್ಟಿದ್ದು, ಅದರಲ್ಲಿ 1 ಲಕ್ಷ ರೂಪಾಯಿ ಕಾಣೆಯಾಗಿತ್ತಂತೆ. ಹಣವನ್ನು ಸೋಮನಾಥನೇ ಕಳ್ಳತನ ಮಾಡಿದ್ದಾನೆಂದು ಆರೋಪಿಸಿ, ಠಾಣೆಗೆ ಕರೆಯಿಸಿ ವಿಚಾರಣೆ ಮಾಡಿದ್ದಾರೆ. ಇದರಿಂದ ಮನನೊಂದು ವಿಡಿಯೋ ಮಾಡಿ ಫೇಸ್ ಬುಕ್ನಲ್ಲಿ ಹಾಕಿರೋ ಸೋಮನಾಥ, ನಾನು ಕಳ್ಳ ಅಲ್ಲ ಅಂತ ಡೆತ್‌ನೋಟ್ ಕೂಡ ಬರೆದಿಟ್ಟು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸೋಮನಾಥ ಕಾಣೆಯಾಗಿದ್ದ ಬಳಿಕ ಆತನ ಪತ್ನಿ ಭಾಗ್ಯಶ್ರೀ ಕಳೆದ ಜುಲೈ 9 ರಂದು ಗಾಂಧಿಚೌಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಕಳೆದ ಐದು ದಿನಗಳ ಹಿಂದೆ ಕಾಣೆಯಾಗಿದ್ದ ಸೋಮನಾಥ್ ನಾಗಮೋತಿ ಶವವಾಗಿ ಪತ್ತೆಯಾಗಿದ್ದಾನೆ. ಒಂದೂವರೆ ವರ್ಷದ ಹಿಂದಷ್ಟೇ ಭಾಗ್ಯಶ್ರೀ ಎಂಬ ಯುವತಿಯನ್ನ ಲವ್ ಮಾಡಿ ಸೋಮನಾಥ ಮದುವೆಯಾಗಿದ್ದ. ಸೋಮನಾಥ ಮನೆಯಲ್ಲಿ ಸಹಿತ ಯಾವುದೇ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ವಂತೆ. ಹೀಗಾಗಿ ಆತನ ಸಾವಿಗೆ ನಿಖರ ಕಾರಣ ನಮಗೂ ಗೊತ್ತಿಲ್ಲ ಎಂಬುದು ಮೃತನ ತಾಯಿ ಹಾಗೂ ಪತ್ನಿಯ ಮಾತು.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ್, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾರು ಅಪರಾಧಿಯೋ ಅವರಿಗೆ ಶಿಕ್ಷೆಯಾಗುತ್ತದೆ. ತನಿಖೆ ಆಗಲಾರದೇ ನಾವು ಏನು ಹೇಳಲು ಸಾಧ್ಯವಿಲ್ಲ ಎಂದರು.
ಒಟ್ಟಿನಲ್ಲಿ ಸೋಮನಾಥ ಫೇಸ್ಬುಕ್ನಲ್ಲಿ ಡೆತ್ ನೋಟ್ ಹಾಗೂ ವಿಡಿಯೋ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತನ ತಾಯಿ ಹಾಗೂ ಹೆಂಡತಿ ಯಾರ ಮೇಲೂ ಆರೋಪಿಸಿಲ್ಲ. ಅಲ್ಲದೆ ಪಿಎಸ್ಐ ಸೋಮೇಶ ಅವರ ಕಿರುಕುಳಕ್ಕೇ ಯುವಕ ಬಲಿಯಾಗಿರೋ ಆರೋಪ ಕೇಳಿಬಂದಿದ್ದು, ಹಾಗಾದರೆ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಹೇಗೆ ಪರಿಗಣಿಸಿ, ಯಾರನ್ನು ಶಿಕ್ಷೆಗೆ ಗುರಿಪಡಿಸುತ್ತೆ ಕಾದು ನೋಡಬೇಕಿದೆ.
ಸುನೀಲ್ ಭಾಸ್ಕರ ಪವರ ಟಿವಿ ವಿಜಯಪುರ