ಮೈಸೂರು: ಸಾಹಿತಿ ದೇವನೂರ ಮಹಾದೇವ ಆರ್‌ಎಸ್‌ಎಸ್ ಕುರಿತು ರಚಿಸಿರುವ ಆಳ ಮತ್ತು ಅಗಲ ಕೃತಿ, ಕೃತಿಯಲ್ಲ, ಅದು ವಿಕೃತಿ’ ಎಂದು ಸಂಸದ ಪ್ರತಾಪ ಸಿಂಹ ಕಿಡಿಕಾರಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಸುಮಬಾಲೆ ಕೃತಿಯ ನಂತರ ದೇವನೂರ ಅವರಲ್ಲಿ ಒಂದಷ್ಟು ಸೃಜನಶೀಲತೆ ಉಳಿದುಕೊಂಡಿದೆ ಎಂದುಕೊಂಡಿದ್ದೆ. ಆದರೆ, ಆರ್‌ಎಸ್‌ಎಸ್ ಆಳ-ಅಗಲ ಪುಸ್ತಕ ಬರೆಯಲು ಹೋಗಿ ಅವರ ಘನತೆಯನ್ನು ಕಳೆದುಕೊಂಡಿದ್ದಾರೆ. ಚಾತುರ್ವರ್ಣ ಪದ್ಧತಿ ಬಗ್ಗೆ ಬರೆಯಲು ಹೋಗಿದ್ದಾರೆ. ಒಂದು ಧರ್ಮ, ಒಬ್ಬ ನಾಯಕ, ಒಂದು ದೇಶವನ್ನು ಆರ್‌ಎಸ್‌ಎಸ್ ಪ್ರತಿಪಾದಿಸುತ್ತದೆ ಎಂದು ಬರೆದಿದ್ದಾರೆ. ಆದರೆ, ಒಬ್ಬ ವ್ಯಕ್ತಿ, ಒಂದು ಪುಸ್ತಕ, ಒಂದು ದೇಶದಿಂದ, ಇಡೀ ಪ್ರಪಂಚದಲ್ಲಿ ಭಯೋತ್ಪಾದನೆ ಹೆಚ್ಚಾಗಿದೆ. ಈ ಬಗ್ಗೆ ಮಹಾದೇವ ಮಾತನಾಡುವುದಿಲ್ಲ ಏಕೆ?’ ಎಂದು ಪ್ರಶ್ನೆ ಮಾಡಿದರು.
ಇನ್ನು ಚಾತುರ್ವರ್ಣ ಪದ್ಧತಿ ಹಿಂದೂ ಧರ್ಮದಲ್ಲಷ್ಟೆ ಇಲ್ಲ. ಕ್ರೈಸ್ತ ಧರ್ಮದಲ್ಲೂ ಪಂಥಗಳಿವೆ. ಇಸ್ಲಾಂ ಧರ್ಮದಲ್ಲೂ ಜಾತಿಗಳಿವೆ. ಚಾತುರ್ವರ್ಣ ವಿರೋಧಿಸುವುದಾದರೆ ಎಲ್ಲಾ ಧರ್ಮಗಳ ಬಗ್ಗೆಯೂ ಅವರು ಮಾತನಾಡಲಿ. ಮಹಾದೇವ ಅವರು ಅಂಬಾನಿ, ಅದಾನಿ ಆದಾಯ ಜಾಸ್ತಿಯಾಗಿದೆ, ಬ್ಯಾಂಕ್‌ಗಳ ಸಾಲ ಎಂಬಿತ್ಯಾದಿಯಾಗಿ ಏನೇನೋ ಬರೆದಿದ್ದಾರೆ. ಇವೆಲ್ಲವನ್ನೂ ಗಮನಿಸಿದರೆ ಒಬ್ಬ ಕಾಂಗ್ರೆಸ್‌ನ ಕಾರ್ಯಕರ್ತ, ರಾಹುಲ್ ಗಾಂಧಿ ಭಾಷಣದಿಂದ ಪ್ರೇರಿತನಾಗಿ ಬರೆದಂತಿದೆ. ಸಿದ್ದರಾಮಯ್ಯ ಅವರು ದೇವನೂರ ಮಹದೇವ ಜೊತೆ ಮಾತನಾಡಿ ಅವರ ಹೆಸರನ್ನು ಹಾಕಿಸಿದ್ದಾರೆ’ ಎಂದು ಆರೋಪಿಸಿದರು.