ಬೆಂಗಳೂರು: ರಾಜ್ಯಾದ್ಯಂತ ಮಳೆಯ ಅಬ್ಬರ ಹೆಚ್ಚಾಗಿದ್ದು, ಇನ್ನೂ ಮೂರು ದಿನ ರಾಜ್ಯಾದ್ಯಂತ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬಿಸಿಲು ನಾಡು ಉತ್ತರ ಕರ್ನಾಟಕ ಅಕ್ಷರಶಃ ಮಲೆನಾಡು ಆಗಿ ಬದಲಾಗಿದೆ. ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಗೆ ಎಲ್ಲೆಡೆ ಹಸಿರ ವಾತಾವರಣ ಕಾಣಿಸುತ್ತಿದೆ. ತುಂತುರು ಮಳೆಯ ಜೊತೆಗೆ ಗಾಳಿಯ ವೇಗ ಸಹ ಸ್ವಲ್ಪ ಹೆಚ್ಚಿದೆ. ವಿಜಯಪುರ, ಬಾಗಲಕೋಟೆ, ಬೆಳಗಾವಿ, ಗದಗ, ಕೊಪ್ಪಳ, ಯಾದಗಿರಿಯಲ್ಲಿ ಬೆಳಗಿನ ಜಾವ ಮಂಜು ಹಿತ ನೀಡುತ್ತಿದೆ. ಹವಾಮಾನದಲ್ಲಿ ವೈಪರಿತ್ಯದಿಂದಾಗಿ ಜನರಲ್ಲಿ ಜ್ವರ, ಶೀತ ಸಂಬಂಧಿತ ರೋಗ ಲಕ್ಷಣಗಳು ಕಾಣಿಸುತ್ತಿವೆ.
ಮಹಾರಾಷ್ಟ್ರದ ಮಹಾಮಳೆಗೆ ಕೃಷ್ಣಾ ಹಾಗೂ ಭೀಮಾನದಿಗೆ ಒಳಹರಿವು ಹೆಚ್ಚಳವಾಗಿದೆ. ಕೊಡಗು ಭಾಗದಲ್ಲಿ ಮಳೆ ಕೊಂಚ ಇಳಿಕೆಯಾಗಿದ್ದು, ಆದ್ರೆ ಪ್ರವಾಹದ ಆತಂಕ ಜನರಲ್ಲಿದೆ. ಮಳೆಯಿಂದಾಗಿ ಕೆಲ ಮನೆಗಳಿಗೆ ಹಾನಿಯುಂಟಾಗಿದೆ. ಕೊಡಗು ಜಿಲ್ಲೆಯ ನದಿ, ಉಪನದಿಗಳು ತುಂಬಿ ಹರಿಯುತ್ತಿವೆ.
ಇನ್ನು ನದಿ ತೀರದ ದೇವಸ್ಥಾನಗಳಲ್ಲಿ ಬ್ಯಾರಿಕೇಡ್ ಹಾಕಿ ಭಕ್ತರು ನೀರಿಗೆ ಇಳಿಯದಂತೆ ನಿರ್ಬಂಧ ಹಾಕಲಾಗ್ತಿದೆ. ನದಿಯ ಮಟ್ಟ ಇಳಿಕೆಯಾಗುವರೆಗೂ ಭಕ್ತರ ಪುಣ್ಯ ಸ್ನಾನಕ್ಕೆ ಬ್ರೇಕ್ ಹಾಕಲಾಗಿದೆ.