ಗದಗ : ಜಿಲ್ಲೆಯ ಕಪ್ಪತ್ತಗುಡ್ಡ ಉತ್ತರ ಕರ್ನಾಟಕ ಸಹ್ಯಾದ್ರಿ ಎಂದು ಹೆಗ್ಗಳಿಕೆ ಪಡೆದಿದೆ. ಅಷ್ಟೇ ಅಲ್ಲಾ, ಆಯುರ್ವೇದ ಗಿಡಮೂಲಿಕೆಗಳು ಹೇರಳವಾಗಿ ದೊರೆಯುವದರಿಂದ ಔಷಧೀಯ ಸಸ್ಯಕಾಶಿ ಎನ್ನಲಾಗಿದೆ. ವಿಂಡ್ ಫ್ಯಾನ್ ಹಾಗೂ ಮೈನಿಂಗ್ನಿಂದ ರಕ್ಷಿಸಲು ಅನೇಕ ವರ್ಷಗಳ ಹೋರಾಟದ ಫಲವಾಗಿ ವನ್ಯಜೀವಿ ಧಾಮವಾಗಿದೆ. ಆದ್ರೆ ಕಪ್ಪತ್ತಗುಡ್ಡದಲ್ಲಿ ಖಾಸಗಿ ಗಾಳಿ ಯಂತ್ರ ಸ್ಥಾಪನೆಯಿಂದ ಪರಿಸರ ನಾಶವಾಗ್ತಿದೆ. ಇವುಗಳ ಶಬ್ಧ, ವಾಹನಗಳ ಓಡಾಟ, ಸಿಬ್ಬಂದಿಗಳ ಹಾವಳಿ, ಅರಣ್ಯ ಒತ್ತುವರಿಯಿಂದ ಇಲ್ಲಿರುವ ಪ್ರಾಣಿ, ಪಕ್ಷಿಗಳು ಕಾಡಿನಿಂದ ನಾಡಿಗೆ ಬರಲಾರಂಭಿಸಿವೆ. ಜೊತೆಗೆ ರೈತರಿಗೆ ತೊಂದರೆ ಆಗ್ತಿದೆ. ಕಪ್ಪತ್ತಗುಡ್ಡ ವ್ಯಾಪ್ತಿಯಲ್ಲಿ ಬರುವ ವಿಂಡ್ ಫ್ಯಾನ್ಗಳನ್ನು ತೆರವುಗೊಳಿಸಿ ಪರಿಸರ ಹಾಗೂ ವನ್ಯಜೀವಿಗಳನ್ನು ರಕ್ಷಿಸಬೇಕು ಅಂತಿದ್ದಾರೆ ಪರಿಸರ ಪ್ರೇಮಿಗಳು.
ಕಪ್ಪತ್ತಗುಡ್ಡದ ಹಸಿರು ಈ ಭಾಗದ ಉಸಿರಾಗಿದೆ. ಆ ಉಸಿರಿಗೆ ಈಗ ಸಂಚಕಾರ ಬರ್ತಿದೆ. ಈ ಭಾಗದಲ್ಲಿ ಮತ್ತೆ 300ಕ್ಕೂ ಅಧಿಕ ಫ್ಯಾನ್ಗಳ ಅಳವಡಿಕೆಗೆ ಸರ್ವೇಕಾರ್ಯ ಆರಂಭಿಸಿದ್ದಾರಂತೆ. ಕಂಗೊಳಿಸುವ ಉಸಿರಿನ ಮಡಿಲಿನ ಒಡಲನ್ನು ಆಗಾಗ ಹಾಳು ಮಾಡುವ ಕುತಂತ್ರ ಕೆಲಸ ನಿಲ್ಲುತ್ತಿಲ್ಲ. ಈಗಾಗಲೇ ಅಳವಡಿಸಿದ ಅನೇಕ ಕಂಪನಿಗಳ ವಿಂಡ್ ಫ್ಯಾನ್ ಗಳು ಕಪ್ಪತ್ತಗುಡ್ಡ ನಾಶ ಮಾಡಲಾರಂಭಿಸಿವೆ. ಏಷಿಯಾ ಖಂಡದಲ್ಲೆ ಉತ್ತಮ ಗಾಳಿ ದೊರೆಯುವ ಸ್ಥಳಕ್ಕೆ ಹೆಸರಾದ ಜಿಲ್ಲೆ, ಇದೀಗ ಇವುಗಳ ಹಾವಳಿಯಿಂದ ಮುಂದೊಂದು ದಿನ ಎಲ್ಲಿ ಕೊನೆ ಸ್ಥಾನಕ್ಕೆ ಬರುತ್ತೋ ಎಂಬ ಆತಂಕ ಜನರನ್ನು ಕಾಡ್ತಿದೆ.
ಕಪ್ಪತ್ತಗುಡ್ಡ ಭಾಗದಲ್ಲಿ ಹೆಚ್ಚು ಗಾಳಿ ಬೀಸುತ್ತೆ ಎಂಬ ಕಾರಣಕ್ಕೆ ಅನೇಕ ವಿಂಡ್ ಕಂಪನಿಗಳು ಅರಣ್ಯ ಕನ್ನ ಹೊಡೆಯಲು ಸಂಚು ರೂಪಿಸ್ತಿವೆ. ಔಷಧಿಯ ಸಸ್ಯಕಾಶಿಯ ಶುದ್ಧ ಗಾಳಿಗೇನೆ ಕನ್ನಹಾಕಿ ಕಿಸೆ ತುಂಬಿಸಿಕೊಳ್ಳಲು ಹೊರಟ ಖಾಸಗಿ ಕಂಪನಿ, ಪ್ರಭಾವಿಗಳು ಹಾಗೂ ಜನಪ್ರತಿನಿಧಿಗಳಿಗೆ ಜನ ತಕ್ಕ ಪಾಠ ಕಲಿಸುವುದಂತೂ ಗ್ಯಾರಂಟಿ.
ಮಹಲಿಂಗೇಶ್ ಹಿರೇಮಠ. ಪವರ್ ಟಿವಿ.ಗದಗ