ಚಾಮರಾಜನಗರ: ಸಿದ್ದರಾಮೋತ್ಸವದ ನಂತರ ಸಿದ್ದರಾಮಯ್ಯ ಕೇವಲ ಉತ್ಸವಮೂರ್ತಿಯಾಗಿಯೇ ಉಳಿಯಬೇಕಾಗುತ್ತೆ ಎಂದು ಹೇಳುವ ಮೂಲಕ ಸಚಿವ ಶ್ರೀರಾಮುಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಉತ್ಸವಮೂರ್ತಿ ಪರಿಸ್ಥಿತಿ ಬರುತ್ತೆ. ಜಾತ್ರೆ ಮುಗಿದ ತಕ್ಷಣ ಉತ್ಸವ ಮೂರ್ತಿ ಹೇಗೆ ಹೊರಗೆ ಇರುತ್ತೋ ಹಾಗೆ ಸಿದ್ದರಾಮಯ್ಯ ಕೂಡ ಹೊರಗೆ ಇರುವ ಪರಿಸ್ಥಿತಿ ಬರುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.
ಎಸ್‌ಸಿ- ಎಸ್‌ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೊಟ್ಟ ಮಾತು ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಕಾನೂನು ತೊಡಕು ಹಾಗೂ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಆದಷ್ಟು ಶೀಘ್ರದಲ್ಲೇ ಸಿಹಿ ಸುದ್ದಿ ಕೊಡುತ್ತೇವೆ ಎಂದರು.
ಅಧಿಕಾರಕ್ಜೆ ಬಂದ 24 ಗಂಟೆಯೊಳಗೆ SC 17%, SCಗೆ 7.5% ಕೊಡ್ತೀವಿ ಅಂತ ಭರವಸೆ ಕೊಟ್ಟಿದ್ದು ನಿಜ. ಕಾನೂನು ತೊಡಕಿನಿಂದ ವಿಳಂಬವಾಗಿದೆ. ಈಗ ಸುಭಾಷ್ ಅಡಿ ಅವರ ವರದಿ ಸಲ್ಲಿಕೆಯಾಗಿದೆ. ಶೀಘ್ರದಲ್ಲೇ ಕ್ಯಾಬಿನೆಟ್ ಮುಂದೆ ಬರುತ್ತೆ. ಎಸ್‍ಸಿ, ಎಸ್‍ಟಿ ಜನಾಂಗವನ್ನು ವೋಟ್ ಬ್ಯಾಂಕ್ ಮಾಡಿಕೊಂಡು 70 ವರ್ಷ ಆಳಿದ ಕಾಂಗ್ರೆಸ್ ಸರ್ಕಾರ ನಮ್ಮ ಜನಕ್ಕೆ ಏನು ಮಾಡಿದೆ ಎಂದು ಪ್ರಶ್ನಿಸಿದರು.