ನವದೆಹಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಮತ್ತೆ ಜಾರಿ ನಿರ್ದೇಶನಾಲಯದ ಟೆನ್ಷನ್ ಶುರುವಾಗಿದೆ.
ಜಾರಿ ನಿರ್ದೇಶನಾಲಯವು ಜುಲೈ 21ರಂದು ತನಿಖೆಗೆ ಹಾಜರಾಗುವಂತೆ ಸೋನಿಯಾ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ಈಗಾಗಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನ ವಿಚಾರಣೆಗೆ ಒಳಪಡಿಸಿದೆ.
ಕಳೆದ ತಿಂಗಳಿನಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ಇ.ಡಿ ವಿಚಾರಣೆಗೆ ಕರೆದಿತ್ತು. ಇದೇ ವೇಳೆ ಸೋನಿಯಾರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿತ್ತು. 75 ವರ್ಷ ವಯಸ್ಸಿನ ಸೋನಿಯಾರಿಗೆ ಕೊವಿಡ್‌ನಿಂದಾಗಿ ವೈದ್ಯರು ಮನೆಯಲ್ಲಿ ಕಡ್ಡಾಯ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು. ಶ್ವಾಸಕೋಶ ಸೋಂಕಿಗೆ ತುತ್ತಾಗಿದ್ದ ಸೋನಿಯಾ ಗಾಂಧಿ ಅವರು ಹಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಈ ಬೆನ್ನಲ್ಲೇ ಸೋನಿಯಾ ಗಾಂಧಿ ಅವರಿಗೆ ಮತ್ತೆ ಜಾರಿ ನಿರ್ದೇಶನಾಲಯದ ಟೆನ್ಷನ್ ಶುರುವಾಗಿದೆ.