Wednesday, January 22, 2025

ಚಾಮರಾಜಪೇಟೆ ಸ್ವಯಂ ಪ್ರೇರಿತ ಬಂದ್ ಯಶಸ್ವಿ..!

ಬೆಂಗಳೂರು : ಚಾಮರಾಜಪೇಟೆ ಮೈದಾನದ ಜಟಾಪಟಿ ವಿಚಾರ ಇದೀಗ ಇಡೀ ಚಾಮರಾಜಪೇಟೆಯನ್ನೇ ಬಂದ್ ಮಾಡುವ ಹಂತಕ್ಕೆ ತಲುಪಿದೆ. ಮೈದಾನದಲ್ಲಿ ಎಲ್ಲರಿಗೂ ಕಾರ್ಯಕ್ರಮ ಮಾಡಲು ಅವಕಾಶ ಕೊಡಬೇಕೆಂದು ಒತ್ತಾಯಿಸಿ ನಾಗರೀಕರ ಒಕ್ಕೂಟ ಸ್ವಯಂ ಪ್ರೇರಿತ ಬಂದ್​ಗೆ ಕರೆ ನೀಡಿತ್ತು. ಹಾಗಾದ್ರೆ ಚಾಮರಾಜಪೇಟೆಯ ಬಂದ್ ಯಶಸ್ವಿಯಾಯ್ತಾ..? ಇಲ್ವಾ..?

ಆಟದ ಮೈದಾನ ಅಸ್ತಿತ್ವದ ಕೂಗು ಇಡೀ ಚಾಮರಾಜಪೇಟೆಯ ಬಂದ್ ಮಾಡುವಂತೆ ಮಾಡಿದೆ. ಮೈದಾನ ಕೇವಲ ಒಂದು ವರ್ಗದ ಸ್ವತ್ತಲ್ಲ ಅದು ಎಲ್ಲರಿಗೂ ಸೇರಿರುವ ಸ್ವತ್ತಾಗಿದ್ದು, ಮೈದಾನವನ್ನ ಬಿಬಿಎಂಪಿ ಸ್ವತ್ತೆಂದು ಘೋಷಿಸಿ, ಅಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಲು ಅನುವು ಮಾಡಿಕೊಡಬೇಕೆಂದು ನಾಗರೀಕ ಒಕ್ಕೂಟ ಬಂದ್​ಗೆ ಕರೆನೀಡಿತ್ತು. ಅದರಂತೆ ಚಾಮರಾಜಪೇಟೆ ಸಂಪೂರ್ಣ ಸ್ತಬ್ಧವಾಗಿತ್ತು. ಕ್ಷೇತ್ರದಲ್ಲಿ ಒಂದೇ ಒಂದು ಅಂಗಡಿ ಆಗಲಿ, ಹೋಟೆಲ್​​​ ಆಗಲಿ ಓಪನ್ ಆಗಿರಲಿಲ್ಲ. ಬದಲಿಗೆ ಚಾಮರಾಜಪೇಟೆಯ ನಾಗರೀಕ ಒಕ್ಕೂಟದ ಸದಸ್ಯರು ಮೈದಾನ ಬಳಿ ಜಮಾಯಿಸಿ ಪ್ರತಿಭಟನೆ ಮಾಡಿದ್ರು.

ಚಾಮರಾಜಪೇಟೆ ಬಂದ್​​ಗೆ ಹಲವು ಹಿಂದೂಪರ ಸಂಘಟನೆಗಳು ಸಾಥ್ ನೀಡಿದ್ದವು.. ಇದು ಈದ್ಗಾ ಮೈದಾನವಲ್ಲ. ಇದಕ್ಕೆ ಜಯಚಾಮರಾಜೇಂದ್ರ ಮೈದಾನವೆಂದು ಮರುನಾಮಕರಣ ಮಾಡಿ ಎಂದು ಒತ್ತಾಯಿಸಿದರು. ಇದೇ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಚಾಮರಾಜಪೇಟೆಯಲ್ಲಿ 600ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿತ್ತು.. ಪಶ್ಚಿಮ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಚಾಮರಾಜಪೇಟೆ 15 ಸೆಕ್ಟರ್​​ಗಳಾಗಿ ವಿಭಜಿಸಿ ಬಿಗಿ ಭದ್ರೆ ಕೈಗೊಳ್ಳಲಾಗಿತ್ತು. ಮೈದಾನ ಬಳಿ ಪ್ರತಿಭಟನೆ ಪ್ರಾರಂಭವಾಗುತ್ತಿದ್ದಂತೆ ಪೊಲೀಸರು ಪ್ರತಿಭಟನಕಾರರನ್ನ ವಶಕ್ಕೆ ಪಡೆದ್ರು.

ಆಟದ ಮೈದಾನ ವಿವಾದ ಬಗ್ಗೆ ಕರೆದಿದ್ದ ಚಾಮರಾಜಪೇಟೆ ಬಂದ್​​ ಕೇವಲ ಒಂದು ವಾರ್ಡ್​​ಗೆ ಮಾತ್ರ ಸೀಮಿತವಾದಂತಿತ್ತು. ಸದ್ಯ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 7 ವಾರ್ಡ್​​ಗಳು ಇದ್ದು, ಚಾಮರಾಜಪೇಟೆ ವಾರ್ಡ್ ಹೊರತುಪಡಿಸಿ ಬೇರೆ ಯಾವುದೇ ವಾರ್ಡ್​​ನಲ್ಲಿ ಬಂದ್​​ಗೆ ಬೆಂಬಲ ನೀಡಿಲ್ಲ. ಗೌರಿಪಾಳ್ಯ, ಜೆ.ಜೆ ನಗರ, ಕೆ ಆರ್ ಮಾರುಕಟ್ಟೆ, ರಾಯಪುರ, ಪಾದರಾಯನಪುರಪಕ್ಷಿ ಗಾರ್ಡನ್, ಆಜಾದ್ ನಗರ ವಾರ್ಡ್​​ಗಳು ಎಂದಿನಂತಿದ್ದವು.

ಬೆಳಗ್ಗೆ 8 ಗಂಟೆಯಿಂದ ಕ್ಲೋಸ್ ಆಗಿದ್ದ ಚಾಮರಾಜಪೇಟೆ ಸಂಜೆ 5 ಗಂಟೆಗೆಯಾಗುತ್ತಿದ್ದಂತೆ ಎಂದಿನಂತೆ ಸಹಜ ಸ್ಥಿತಿಗೆ ಮರಳಿತ್ತು. ಇದ್ರಿಂದ ಬಂದ್​ಗೆ ಸ್ವಯಂ ಪ್ರೇರಿತರಾಗಿ ಬೆಂಬಲ ನೀಡಿದ್ದ ಕೆಲ ಅಂಗಡಿ ಮಾಲೀಕರಿಗೆ, ಚಾಮರಾಜಪೇಟೆ ನಾಗರೀಕರ ವೇದಿಕೆಯಿಂದ ಗುಲಾಬಿ ನೀಡಿ ಅಭಿನಂದನೆ ಸಲ್ಲಿಸಿದ್ರು. ನಂತರ ಮಾತನಾಡಿದ ನಾಗರೀಕರ ವೇದಿಕೆ ಮುಖಂಡರು, ನಮ್ಮ ಹೋರಾಟ ನಿರಂತರವಾಗಿತ್ತೆ ಎಂದರು.

ಒಟ್ನಲ್ಲಿ ಚಾಮರಾಜಪೇಟೆ ಆಟದ ಮೈದಾನಕ್ಕಾಗಿ ಹೋರಾಟ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿ ಇದು ಮತ್ಯಾವ ಸ್ವರೂಪ ಪಡೆದುಕೊಳ್ಳುತ್ತೋ ಗೊತ್ತಿಲ್ಲ. ಹೀಗಾಗಿ ಸದ್ಯ ಬೆಂಗಳೂರು ಉಸ್ತುವಾರಿ ಸ್ವತಃ ಸಿಎಂ ಬೊಮ್ಮಾಯಿ ಅವರ ಬಳಿಯೇ ಇರೋದ್ರಿಂದ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಂಡ್ರೆ ಒಳ್ಳೆಯದು.

ಮಲ್ಲಾಂಡಹಳ್ಳಿ ಶಶಿಧರ್ ಜೊತೆ ಕ್ರಿಷ್ಣಮೂರ್ತಿ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES