ಹಾಸನ: ಯಾವುದೇ ಕಾರಣಕ್ಕೂ ಶಿರಾಡಿ ಘಾಟ್ ರಸ್ತೆ ಬಂದ್ ಆಗುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ಅವರು ಸಕಲೇಶಪುರದ ದೋಣಿಗಲ್ ಬಳಿ ಸ್ಪಷ್ಟನೆ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75 ರ ಹೆಸರಿನಲ್ಲಿ ಮರಳು ಜಲ್ಲಿ ಬೇರೆ ಕಡೆ ಸಾಗಾಟವಾಗುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ನಮ್ಮ ಸಚಿವ ಮಿತ್ರ ಹಾಲಪ್ಪ ಆಚಾರ್ ಜೊತೆ ಚರ್ಚಿಸುತ್ತೇನೆ. ಆ ರೀತಿ ಕೆಲಸಗಳು ನಡೆಯುತ್ತಿದ್ದರೆ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ. ನಮ್ಮ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ರಸ್ತೆ ವಿಚಾರದಲ್ಲಿ ಒಂದು ಕ್ರಾಂತಿ ಮಾಡಿದ್ದಾರೆ. ಇಲ್ಲಿನ ಎಲ್ಲಾ ಬೆಳವಣಿಗೆಗಳ ಬಗ್ಗೆ ಕೇಂದ್ರ ಸಚಿವರ ಗಮನಕ್ಕೆ ತರುತ್ತೇನೆ ಇದು ನನ್ನ ಕರ್ತವ್ಯ, ಧರ್ಮ ಎಂದರು.
ಇನ್ನು ಕಳೆದ ಏಳು ದಿನಗಳಿಂದ ಈ ಭಾಗದಲ್ಲಿ ಮಳೆ ಹೆಚ್ಚಾಗಿ ಬೀಳುತ್ತಿದೆ. ಅಲ್ಲದೇ ಕಳೆದ ಇಪ್ಪತ್ತನಾಲ್ಕು ಗಂಟೆಯಲ್ಲಿ ಶೇ. 114 ಹೆಚ್ಚಾಗಿದೆ. ಇದರಿಂದ ಕೆಲವು ಭಾಗದಲ್ಲಿ ಭೂಕುಸಿತ ಆಗುತ್ತಿದೆ. ಈ ಎಲ್ಲದರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಅಷ್ಟೇಅಲ್ಲದೇ 2017 ರಲ್ಲಿ ಚತುಷ್ಪತ ಕಾಮಗಾರಿಯನ್ನ ಆರಂಭ ಮಾಡಿದ್ದು, ಗುತ್ತಿಗೆದಾರರ ಸಮಸ್ಯೆ, ಕೋವಿಡ್ ಸಮಸ್ಯೆ ಹಾಗೂ ಮೂರು ಮಳೆಗಾಲ ಬಂದಿದ್ದರಿಂದ ಕಾಮಗಾರಿ ವಿಳಂಬವಾಗಿದೆ. ಕಾಮಗಾರಿ ಗುಣಮಟ್ಟವನ್ನ ಪರೀಕ್ಷಿಸಿ, ಕಾಮಾಗಾರಿಯ ವೇಗವನ್ನ ಹೆಚ್ಚಿಸುವ ಸಂಬಂಧ ನಾನು ಸ್ಥಳೀಯ ಶಾಸಕರು ಅಧಿಕಾರಿಗಳೊಂದಿಗೆ ಬಂದಿದ್ದೇನೆ.ಹಾಸನದಿಂದ ಸಕಲೇಶಪುರದವರೆಗೂ ಕೆಲವು ಕಡೆ ಕಳಪೆ ಕಾಮಗಾರಿ ಆಗಿದೆ. ಸುಮಾರು ಎಂಟು ಹತ್ತು ಕಡೆ ಕಾರಿನಿಂದ ಇಳಿದು ಗುರುತಿಸಿದ್ದೇನೆ. ಸ್ವಲ್ಪ ಮಳೆ ನಿಂತ ತಕ್ಷಣ ಅದನ್ನ ಸರಿಪಡಿಸುವಂತೆ ಸೂಚಿಸಿದ್ದೇನೆ ಎಂದರು.
ಇನ್ನು ಶಿರಾಢಿಘಾಟ್ನಲ್ಲಿ ಎರಡು ಪಥದ ರಸ್ತೆ ನಿರ್ಮಾಣವಾಗುತ್ತಿದೆ. ಏನೂ ತೊಂದರೆಯಾಗದ ಹಾಗೆ, ಟೆಕ್ನಾಲಜಿಯನ್ನ ಬಳಸಿ ಮಾಡುತ್ತೇವೆ ಎಂದು ಹೇಳಿದ್ದಾರೆ. ರಸ್ತೆಯನ್ನು ಬಂದ್ ಮಾಡಿದರೆ ಸಾರ್ವಜನಿಕರಿಗೆ ತೀವ್ರ ಅನಾನುಕೂಲವಾಗುತ್ತದೆ. ಬೇರೆ ರಸ್ತೆಯಿಲ್ಲ, ಅತಿಯಾದ ವಾಹನ ಸಂಚಾರದಿಂದ ಚಾರ್ಮಾಡಿ ಘಾಟ್ ಕೂಡಾ ಕುಸಿಯುತ್ತಿದೆ. ಹೀಗಾಗಿ ರಸ್ತೆಯನ್ನ ಬಂದ್ ಮಾಡೋ ಪ್ರಮೇಯ, ಪ್ರಶ್ನೆ ಸರ್ಕಾರದ ಮುಂದೆ ಇಲ್ಲ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ಶಿರಾಡಿಘಾಟ್ ಅಭಿವೃದ್ದಿ ಪಡಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.