ಬೆಂಗಳೂರು : ಇಡೀ ಬೆಂಗಳೂರುನ್ನ ಹಸಿರುಮಯ ಮಾಡ್ತೇವೆ ಅಂತ ಬಿಲ್ಡ್ ಅಪ್ ಕೊಟ್ಟು ಓಡಾಡುತ್ತಿರುವ ಬಿಡಿಎ ಅಧಿಕಾರಿಗಳಿಗೆ ನಿಜಕ್ಕೂ ನಾಚಿಕೆಯಾಗಬೇಕು. ಯಾಕೆಂದರೆ ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಕಡಿದಿರುವ ಮರಗಳ ಸಂಖ್ಯೆ ಬರೋಬ್ಬರಿ 40 ಸಾವಿರ. ಆದರೆ ಕಡಿದಿರುವ ಮರಗಳಿಗೆ ಪ್ರತಿಯಾಗಿ ಗಿಡ ನೆಡದೆ ನಿರ್ಲಕ್ಷ್ಯ ವಹಿಸಿದೆ. ಹೌದು ನಾಲ್ಕೈದು ವರ್ಷದಿಂದ ಗಿಡ ನೆಡುವ ಮಹತ್ವಾಕಾಂಕ್ಷೆ ಯೋಜನೆಗೆ ಪ್ರಾಧಿಕಾರದಲ್ಲಿ ಗ್ರಹಣ ಹಿಡಿದಿದೆ.. ಗಿಡ ನೆಡುವ ಹಸಿರುಮಾಲೆ ಯೋಜನೆಗೆ ಆರಂಭದಲ್ಲಿ ನೀಡಿದ ಕಾಳಜಿ ಇದೀಗ ತೋರಿಸುತ್ತಿಲ್ಲ. ಸಸಿ ನೆಡುವ ಕಾರ್ಯಕ್ರಮದ ಗುತ್ತಿಗೆಯನ್ನು ಕಟ್ಟಡ ನಿರ್ಮಾಣ ಕ್ಷೇತ್ರದ ನಿರ್ಮಿತಿ ಕೇಂದ್ರಕ್ಕೆ ನೀಡಿದ್ದರಿಂದ ಯೋಜನೆ ಪ್ರಗತಿ ಕಾಣೋದಕ್ಕೆ ಆಗುತ್ತಿಲ್ಲ. ಹಣ ಮಾತ್ರ ನೀರಿನಂತೆ ಖರ್ಚಾಗಿದೆ ಎಂಬ ಆರೋಪ ಪ್ರಾಧಿಕಾರದ ಅಧಿಕಾರಿಗಳತ್ತ ಬೊಟ್ಟು ಮಾಡಲಾಗ್ತಿದೆ.
ಬಿಡಿಎ ಬಡಾವಣೆಗಳಲ್ಲಿ ಗಿಡ ನೆಡಲು ಪ್ರತಿ ವರ್ಷ ಕ್ರಿಯಾಯೋಜನೆ ತಯಾರಿಸಿ ಹಣ ಬಿಡುಗಡೆಗೆ ಸರ್ಕಾರಕ್ಕೆ ಸಲ್ಲಿಸುತ್ತಲೇ ಬಂದಿದೆ. ಆದರೆ, 2017ರಿಂದ ಇಲ್ಲಿಯವರೆಗೂ ಈ ಕಾರ್ಯಕ್ಕೆ ನಯಾ ಪೈಸೆ ಬಿಡುಗಡೆಯಾಗಿಲ್ವಾಂತೆ. ಹೀಗಾಗಿ ಬಿಡಿಎ ತನ್ನ ಬಡಾವಣೆಗಳಲ್ಲಿ ಗಿಡ ನೆಡುವಿಕೆ ನಿಲ್ಲಿಸಿದೆ. ಬಟಾಬಯಲಿನಲ್ಲಿ ನಿವೇಶನ ಅಭಿವೃದ್ಧಿಪಡಿಸಿ ಹಂಚಿಕೆ ಮಾಡುತ್ತೆ.. ವಿಶ್ವೇಶ್ವರಯ್ಯ ಲೇಔಟ್ನ ಕೆಲವು ಹಂತಗಳು, ಬನಶಂಕರಿ 6ನೇ ಹಂತ, ಅಂಜನಾಪುರ ಹಾಗೂ ಅರ್ಕಾವತಿ ಬಡಾವಣೆ ಹಾಗೂ ಕೆಂಪೇಗೌಡ ಬಡಾವಣೆಯಲ್ಲಿ ಒಂದೇ ಒಂದು ಗಿಡ ನೆಟ್ಟಿಲ್ಲ. ಇದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಹಣದ ಕೊರತೆಯಿಂದ ನಾಲ್ಕೈದು ವರ್ಷದಿಂದ ಯಾವುದೇ ಸಸಿಗಳನ್ನ ಸೆಡುವುದಕ್ಕೆ ಆಗಲಿಲ್ಲ. ಆದರೆ ಪ್ರಾಧಿಕಾರದಲ್ಲಿ ಅರಣ್ಯ ಸಂರಕ್ಷಣೆ ಸಿಬ್ಬಂದಿ ಕೆಲಸ ಇಲ್ಲದೆ ಸುಮ್ಮನೆ ಕುಳಿತು ಮನೆಗೆ ಹೋಗುವ ಸ್ಥಿತಿ ಎದುರಾಗಿದೆ. ಯಾವುದೇ ಒಂದು ವಸತಿ ಬಡಾವಣೆಯನ್ನು ಜಾರಿಗೊಳಿಸುವಾಗ ಇಂತಿಷ್ಟು ಗಿಡಗಳನ್ನು ನೆಡಬೇಕು ಎಂದು 2016ರಲ್ಲಿ ಹಸಿರು ನ್ಯಾಯಾಧಿಕರಣ ತೀರ್ಪು ನೀಡಿದೆ. ಆದರೆ ಬಿಡಿಎ ಈ ತೀರ್ಪನ್ನು ಉಲ್ಲಂಘಿಸಿ, ಗಿಡ ನೆಡುವುದನ್ನೇ ನಿಲ್ಲಿಸಿದೆ. ಈ ಬಗ್ಗೆ ಬಿಡಿಎ ಕಮಿಷನರ್ ರಾಜೇಶ್ ಗೌಡರನ್ನ ಪ್ರಶ್ನೆ ಮಾಡಿದರೆ, ಹೊಸ ಲೇಔಟ್ ಶಿವರಾಮ ಕಾರಂತ ಬಡಾವಣೆಯಲ್ಲಿ ಗಿಡ ನೆಡ್ತೀವಿ. ಬೇರೆ ಲೇಔಟ್ಗಳ ಬಗ್ಗೆ ಪರಿಶೀಲನೆ ಮಾಡ್ತೀವಿ ಅಂತಾರೆ.
ಒಟ್ಟಿನಲ್ಲಿ ಬಿಡಿಎ ಗಿಡ ನೆಡುವ ಯೋಜನೆಯನ್ನ ನಿರ್ಲಕ್ಷ್ಯ ಮಾಡಿರೋದರಿಂದ ನಗರದಲ್ಲಿ ಹಸಿರು ಮಾಯವಾಗ್ತಿದೆ. ಲೇಔಟ್ಗಳನ್ನ ಮಾಡುವಂತಹ ಸಂದರ್ಭದಲ್ಲಿ ಪ್ರಾಧಿಕಾರ ಹಲವು ಮರಗಳನ್ನ ಕೆಡವಿದೆ. ಇದಕ್ಕೆ ಪರ್ಯಾಯವಾಗಿ ಮತ್ತೊಂದು ಗಿಡ ನೆಡುವ ಪ್ರಯತ್ನ ಪ್ರಾಧಿಕಾರದಿಂದ ಆಗಿಲ್ಲ. ಹೀಗಾಗಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗಿಡ ನೆಡುವ ಯೋಜನೆ ಪೂರ್ಣಗೊಳ್ಳುವುದು ಅನುಮಾನ ಮೂಡಿಸಿದೆ.
ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು