Sunday, December 22, 2024

ಹೊಸಪೇಟೆಯಲ್ಲಿ ಕಲುಷಿತ ನೀರು ಪೂರೈಕೆ

ಬಳ್ಳಾರಿ : ನೂತನ ಜಿಲ್ಲೆ ವಿಜಯನಗರದ ಜಿಲ್ಲಾ ಕೇಂದ್ರ ಹೊಸಪೇಟೆಯ ನಗರಸಭೆಯಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. 35 ವಾರ್ಡ್​​ಗಳ ಪೈಕಿ ಅನೇಕ ವಾರ್ಡ್​​ಗಳಲ್ಲಿ ಪಾಚಿಗಟ್ಟಿದ ನೀರು ಸರಬರಾಜು ಮಾಡಲಾಗ್ತಿದೆ. ಈ ವಿಚಾರವನ್ನು ಹಲವಾರು ಬಾರಿ ನಗರಸಭೆ ಆಡಳಿತದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳ ಬೇಜವಾಬ್ದಾರಿ ವಿರುದ್ಧ ಸದಸ್ಯೆ ಲಕ್ಷ್ಮೀ ಪರಗಂಟಿ ಸಿಡಿದೆದ್ದಿದ್ದು, ಕಲುಷಿತ ನೀರು ತುಂಬಿದ್ದ ಬಾಟಲ್ ಸಹಿತ ನಗರಸಭೆಯ ಸಭೆಗೆ ಆಗಮಿಸಿ ಆಕ್ರೋಶ ಹೊರಹಾಕಿದ್ರು. ನಾವು ಅಧಿಕಾರಿಗಳಿಗೆ ಹೇಳಿ, ಹೇಳಿ ಸಾಕಾಯ್ತು, ನಮ್ಮ ವಾರ್ಡ್​​ನಲ್ಲಿ ಜನ ಪ್ರಶ್ನೆ ಮಾಡ್ತಾರೆ. ನಮಗೆ ಶುದ್ಧ ಕುಡಿವ ನೀರು ಸರಬರಾಜು ಯಾವಾಗ ಮಾಡ್ತಿರಾ ಅಂತ ಹೇಳಿ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರಿಗೆ ತರಾಟೆಗೆ ತೆಗೆದುಕೊಂಡರು.

ವಾರ್ಡ್​​​ ಸದಸ್ಯರ ಆರೋಪಕ್ಕೆ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಪೌರಾಯುಕ್ತ ಮನೋಹರ್ ಸಮಜಾಯಿಸಿ ನೀಡಲು ಮುಂದಾದ್ರು. ಈ ವೇಳೆ ಕ್ಲಾಸ್ ತೆಗೆದುಕೊಂಡ ಸದಸ್ಯರು, ನಾವು ಮಹಿಳಾ ಸದಸ್ಯೆಯರು ಅಂತ ಅಸಡ್ಡೆ ತೋರಬೇಡಿ ಅಂತ ಖಡಕ್ ಎಚ್ಚರಿಕೆ ನೀಡಿದ್ರು. ನಗರಸಭೆಯ ನಿರ್ಲಕ್ಷ್ಯದ ಆಡಳಿತದ ವಿರುದ್ಧ ಸ್ಥಳೀಯ ನಿವಾಸಿಗಳು ಕೂಡ ಅಸಮಾಧಾನ ವ್ಯಕ್ತಪಡಿಸಿದ್ರು.

ವಿಜಯನಗರ ಜಿಲ್ಲೆಯಾಗಿ ಘೋಷಣೆಯಾದ ನಂತರ ನಾನಾ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ. ಆದ್ರೆ ಕೆಲ ವಾರ್ಡ್ ಗಳಲ್ಲಿ ಸಮರ್ಪಕ ಶುದ್ಧ ಕುಡಿಯುವ ನೀರಿಲ್ಲ. ನಮಗೆ ಸಮರ್ಪಕ ಕುಡಿಯುವ ನೀರನ್ನು ನೀಡಿ, ಇಲ್ಲವಾದರೆ ಆಗೋ ಸಮಸ್ಯೆಗಳಿಗೆ ನೀವೇ ಜವಾಬ್ದಾರಿ ಅಂತ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ. ಕೂಡಲೇ ನಗರಸಭೆ ಎಚ್ಚೆತ್ತು ಶುದ್ಧ ಕುಡಿಯುವ ನೀರು ಒದಗಿಸಬೇಕಿದೆ.

RELATED ARTICLES

Related Articles

TRENDING ARTICLES