ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಸೂರ್ಯಕಾಂತಿ ಫಸಲು ನಳನಳಿಸುತ್ತಿದ್ದು ಹೂವಿನ ಚಂದಕ್ಕೆ ಪ್ರವಾಸಿಗರು ಮಾರು ಹೋಗಿ ಸೆಲ್ಫಿ ಸುರಿಮಳೆ ಸುರಿಸುತ್ತಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಹಂಗಳ ಮತ್ತು ಭೀಮನಭೀಡು, ಕಣ್ಣೇಗಾಲ ಹಾದು ಹೋಗುವ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕೇರಳ, ತಮಿಳುನಾಡಿನ ಪ್ರವಾಸಿಗರರ ಸೂರ್ಯಕಾಂತಿ ಜಮೀನಿನಲ್ಲಿ ಸೆಲ್ಪಿಗಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಗುಂಡ್ಲುಪೇಟೆ ತಾಲೂಕಿನ ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬರುತ್ತಿರುವ ಪ್ರವಾಸಿಗರ ದಂಡು ರಾಷ್ಟ್ರೀಯ ಹೆದ್ದಾರಿಯಲ್ಲಿನ ಸೂರ್ಯಕಾಂತಿ ಜಮೀನುಗಳಿಗೆ ಲಗ್ಗೆ ಇಟ್ಟು ಫೋಟೋ ಕ್ಲಿಕ್ಕಿಸುತ್ತಿದ್ದಾರೆ.
ಶಿಂಡನಪುರ, ಬೇಗೂರು, ರಾಘವಾಪುರ, ಮಾಡ್ರಹಳ್ಳಿ, ಹಂಗಳ ಗ್ರಾಮಗಳ ರಸ್ತೆಬದಿ ಜಮೀನುಗಳಲ್ಲಿ ಬೆಳೆದಿರುವ ಸೂರ್ಯಕಾಂತಿ ಫಸಲು ನಳನಳಿಸುತ್ತಿದೆ. ಹೀಗಾಗಿ, ಪ್ರವಾಸಿಗರು ತಮ್ಮ ಮಕ್ಕಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಜಮೀನನ್ನೇ ಕಾಣದ ಸಿಟಿ ಮಕ್ಕಳು ಆಟ ಆಡುತ್ತಾ, ಹೂವು ನೋಡುತ್ತಾ ಕಾಲ ಕಳೆಯುತ್ತಿದ್ದಾರೆ.
ಪ್ರವಾಸಿಗರ ಸೆಲ್ಫಿ ಸಂಭ್ರಮಕ್ಕೆ ಕೆಲ ಜಮೀನು ಮಾಲೀಕರು ಕಿರಿಕಿರಿ ಅನುಭವಿಸಿದರೇ ಮತ್ತೆ ಕೆಲವರು ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ, ಗಿಡಗಳನ್ನು ತುಳಿದು ಹಾಳು ಮಾಡಬೇಡಿ. ಹೂವುಗಳನ್ನು ಕೀಳಬೇಡಿ ಎಂದಷ್ಟೇ ಕಿವಿಮಾತು ಹೇಳುತ್ತಾರೆ, ಸಿಟಿ ಮಂದಿಗೆ ಜಮೀನುಗಳೆಂದರೆ ಅಚ್ಚರಿ. ಹೀಗಾಗಿ ಜನರು ಖುಷಿ ಪಟ್ಟರೇ ಸಾಕು. ಆದಷ್ಟು ಎಲ್ಲರೂ ಕೃಷಿಕರಾಗಬೇಕೆಂಬುದೇ ಕೃಷಿಕರ ಬಯಕೆಯಾಗಿದೆ.
ಪ್ರವಾಸಿ ತಾಣಗಳು ಮತ್ತೆ ಜನರಿಂದ ಗಿಜಿಗಿಜಿ ಎನ್ನುವ ಜೊತೆಗೆ ಸೂರ್ಯಕಾಂತಿ ಜಮೀನುಗಳಲ್ಲಿ ಸೆಲ್ಫಿ ಕ್ಲಿಕ್ ಸದ್ದು ಜೋರಾಗಿದೆ. ಕೆಲ ಪ್ರವಾಸಿಗರು ಸ್ವಯಂ ಪ್ರೇರಣೆಯಿಂದ ರೈತರಿಗೆ ಹಣ ಸಹ ಕೊಡುತ್ತಿದ್ದಾರೆ.
ಸಾಮಾನ್ಯವಾಗಿ ಸೂರ್ಯಕಾಂತಿ ಬಿತ್ತನೆಯನ್ನು ಗುಂಡ್ಲುಪೇಟೆಯಲ್ಲಿ ಹೆಚ್ಚಾಗಿ ಬೆಳೆಯುವುದರಿಂದ ನೆರೆ ರಾಜ್ಯದ ಪ್ರವಾಸಿಗರಿಗೆ ಇದು ವಿಶೇಷವಾಗಿದೆ. ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಸೂರ್ಯಕಾಂತಿ ಬೆಳೆಯನ್ನು ಬೆಳೆಯುವುದಿಲ್ಲ ಈ ನಿಟ್ಟಿನಲ್ಲಿ ರೈತರ ಜಮೀನುಗಳು ಪ್ರವಾಸಿಗರ ಆಕರ್ಷಣೆ ಕೇಂದ್ರಬಿಂದುವಾಗಿ ಮಾರ್ಪಟ್ಟಿವೆ.