Wednesday, January 22, 2025

ಕರ್ನಾಟಕದ 100ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸುರಕ್ಷಿತ: ಸಿಎಂ ಬೊಮ್ಮಾಯಿ

ಜಮ್ಮು&ಕಾಶ್ಮೀರ: ಅಮರನಾಥ ಗುಹೆಯ ಸಮೀಪದಲ್ಲಿ ಸಂಭವಿಸಿದ ಮೇಘಸ್ಪೋಟದಲ್ಲಿ ಈವರೆಗೂ ಹದಿನಾರು ಮಂದಿ ಸಾವನ್ನಪ್ಪಿದ್ದಾರೆ. ಮೇಘಸ್ಫೋಟದಿಂದ ದಿಢೀರ್ ಪ್ರವಾಹ ಉಂಟಾಗಿದ್ದರ ಪರಿಣಾಮ ಟೆಂಟ್​ಗಳಲ್ಲಿದ್ದ ನಲವತ್ತೈದು ಯಾತ್ರಾರ್ಥಿಗಳು ನಾಪತ್ತೆಯಾಗಿದ್ದಾರೆ. ಸುಮಾರು ಏಳು ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳು ಅಮರನಾಥ ಯಾತ್ರೆ ಹಮ್ಮಿಕೊಂಡಿದ್ದು ಯಾತ್ರಾರ್ಥಿಗಳ ಸಂಬಂಧಿಕರಿಗೆ ಮಾಹಿತಿ‌ ಪಡೆಯಲು ಸಹಾಯವಾಣಿ ಆರಂಭಿಸಲಾಗಿದೆ.

ಮೇಘಸ್ಪೋಟ ಸಂಭವಿಸುವುದಕ್ಕೂ ಮುನ್ನವೇ ಭಾರೀ ಮಳೆಯ ಮುನ್ಸೂಚನೆ ಬಗ್ಗೆ ಹವಾಮಾನ ಇಲಾಖೆ ಸರಕಾರಕ್ಕೆ ಎಚ್ಚರಿಕೆ ನೀಡಿತ್ತು. ಅದರ ಅನ್ವಯ ಎರಡು ದಿನಗಳ ಹಿಂದೆಯೇ ಅಮರನಾಥ ಯಾತ್ರೆ ನಿಲ್ಲಿಸುವಂತೆ ಸರಕಾರ ತಾಕೀತು ಮಾಡಿತ್ತು. ಹಾಗಾಗಿ ಈಗಾಗಲೇ ಯಾತ್ರೆಯಲ್ಲಿದ್ದ ಯಾತ್ರಾರ್ಥಿಗಳಿಗೆ ಆದಷ್ಟು ವೇಗವಾಗಿ ದರ್ಶನ ಮುಗಿಸಲು ಆದೇಶವನ್ನು ಕೂಡ ಹೊರಡಿಸಲಾಗಿತ್ತು. ಆದ್ರೆ, ಅನಾಹುತ ಸಂಭವಿಸಿ ಸಾವು -ನೋವು ಉಂಟಾಗಿದೆ.

ಪ್ರವಾಹದಿಂದಾಗಿ ಟೆಂಟ್‌ಗಳು ಮತ್ತು ಅಡುಗೆ ಕೋಣೆಗಳಲ್ಲಿ ಮಣ್ಣು ಮತ್ತು ಕಲ್ಲುಗಳು ಬಿದ್ದಿವೆ. ದುರಂತದ ನಂತರ ಜೂನ್ ಮೂವತ್ತರಂದು ಆರಂಭವಾಗಿದ್ದ ಅಮರನಾಥ ಯಾತ್ರೆಯನ್ನು ಮುಂದೂಡಲಾಗಿದೆ. ಮೇಘಸ್ಫೋಟದಿಂದ ಸಂತ್ರಸ್ತರಾದ ಯಾತ್ರಾರ್ಥಿಗಳ ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ಯಾತ್ರೆ ಪುನರಾರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರಾಡಳಿತ ಪ್ರದೇಶದ ಆಡಳಿತ ಅಧಿಕಾರಿ ತಿಳಿಸಿದ್ದಾರೆ.

ಈ ಮೇಘಸ್ಪೋಟದಿಂದ ಇದುವರೆಗೆ ಹದಿನಾರಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನಲವತ್ತಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಐಟಿಬಿಪಿ ಮತ್ತು ಎನ್‌ಡಿಆರ್‌ಎಫ್‌ ತಂಡಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯ ಮುಂದುವರಿದಿದೆ. ರಾತ್ರಿ ಹಗಲೆನ್ನದೆ ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಿರುವ ಭಾರತೀಯ ಸೇನೆ, ರಕ್ಷಣೆಗಾಗಿ ಎಂಟು ಸೇನಾ ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡಲಾಗಿದೆ.

ಮೇಘಸ್ಪೋಟದಲ್ಲಿ ತೀವ್ರವಾಗಿ ಗಾಯಗೊಂಡ ಹನ್ನೊಂದು ಮಂದಿಯನ್ನು ಸೇನಾ ಹೆಲಿಕಾಪ್ಟರ್‌ಗಳ ಮೂಲಕ ಪವಿತ್ರ ಗುಹೆಯಿಂದ ನೀಲಗರ್ ಹೆಲಿಪ್ಯಾಡ್‌ಗೆ ರವಾನಿಸಲಾಗಿದೆ. ಮತ್ತೆ ಗುಹೆಯ ಬಳಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಎರಡು ಶ್ವಾನದಳ, ಎರಡು ವಾಲ್ ರಾಡಾರ್ ಮತ್ತು ಇತರ ವಿಶೇಷ ದಳಗಳು ಪವಿತ್ರ ಗುಹೆಯನ್ನು ತಲುಪಿ ತಮ್ಮ ಕೆಲಸ ನಿರ್ವಹಿಸ್ತಿವೆ. ಇನ್ನೂ, ಜಾರುತ್ತಿರುವ ರಸ್ತೆಯಿಂದಾಗಿ ಪವಿತ್ರ ಗುಹೆಗೆ ಹೋಗುವ ಕಣಿವೆಯಲ್ಲಿ ಚಾಲನೆ ಕಡಿಮೆಯಾಗಿದೆ. ನಡೆದುಕೊಂಡು ಅಮರನಾಥ ಗುಹೆಗೆ ಹೋಗುವುದನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.

ಕರ್ನಾಟಕದ 100ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸುರಕ್ಷಿತ :

ಪವಿತ್ರ ಹಿಮಲಿಂಗ ಇರುವ ಅಮರನಾಥ ಗುಹೆ ಪ್ರದೇಶದಲ್ಲಿ ಮೇಘಸ್ಪೋಟ ಸಂಭವಿಸಿದ್ದರಿಂದ ಈ ಅವಘಡ ಸಂಭವಿಸಿದೆ. ಇದರಿಂದ ಸಹಜವಾಗಿ ಅಮರನಾಥ ಯಾತ್ರೆಗೆ ತೆರಳಿದ ಯಾತ್ರಾರ್ಥಿಗಳ ಬಗ್ಗೆ ಅವರ ಕುಟುಂಬಸ್ಥರು ಆತಂಕಕ್ಕಿಡಾಗಿದ್ದಾರೆ ಅಮರನಾಥ ಯಾತ್ರೆಗೆ ರಾಜ್ಯದಿಂದಲ್ಲೂ ಹಲವಾರು ಜನ ತೆರಳಿದ್ದಾರೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಅಮರನಾಥ ಯಾತ್ರೆಗೆ ಪ್ರಾಥಮಿಕ ಮಾಹಿತಿ ಪ್ರಕಾರ ನಮ್ಮ ರಾಜ್ಯದ 100 ಕ್ಕೂ ಹೆಚ್ಚು ಯಾತ್ರಾರ್ಥಿಗಳು ತೆರಳಿದ್ದಾರೆ. ಆ ಯಾತ್ರಾರ್ಥಿಗಳೆಲ್ಲರೂ ಸೇಫ್ ಆಗಿದ್ದಾರೆ ಎಂದರು.

ಅಮರನಾಥ ಯಾತ್ರೆ ವೇಳೆ ಪ್ರವಾಹದಲ್ಲಿ ಸಿಲುಕಿರುವವರ ಸಹಾಯಕ್ಕೆಂದು ಜಮ್ಮು ಮತ್ತು ಕಾಶ್ಮೀರ ಆಡಳಿತವು ಶುಕ್ರವಾರ ಸಹಾಯವಾಣಿಯನ್ನು ಸ್ಥಾಪಿಸಿದೆ. ಹಲವಾರು ಯಾತ್ರಿಕರು ನಾಪತ್ತೆಯಾಗುತ್ತಲೇ ಇದ್ದಾರೆ. ಹೀಗಾಗಿ, ಲೆಫ್ಟಿನೆಂಟ್ ಗವರ್ನರ್ ಆಡಳಿತ ಮತ್ತು ಅಮರನಾಥ ದೇಗುಲ ಮಂಡಳಿ ನಾಲ್ಕು ದೂರವಾಣಿ ಸಂಖ್ಯೆಗಳನ್ನು ನೀಡಿದೆ. ಇದರ ಮೂಲಕ ಮೇಘಸ್ಫೋಟದ ಘಟನೆಯ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಜೊತೆಗೆ ಕರ್ನಾಟಕ ಸರ್ಕಾರ ಕೂಡ ದೆಹಲಿಯ ಕರ್ನಾಟಕ ಭವನದ ಅಧಿಕಾರಿಗಳ ತಂಡ ನೇಮಿಸುವುದರ ಮೂಲಕ ಕನ್ನಡಿಗ ಯಾತ್ರಾರ್ಥಿಗಳ ರಕ್ಷಣೆಗೆ ಮುಂದಾಗಿದೆ.

ಸಂತೋಷ್ ಹೊಸಹಳ್ಳಿ, ಪವರ್ ಟಿವಿ, ನವದೆಹಲಿ.

RELATED ARTICLES

Related Articles

TRENDING ARTICLES