ಬಳ್ಳಾರಿ: ಪಡಿತರ ಹಂಚಿಕೆಗೆ ಸರಕಾರಿ ಗೋದಾಮಿನಲ್ಲಿ ದಾಸ್ತಾನು ಮಾಡಿದ್ದ ಸಾವಿರಾರು ಕ್ವಿಂಟಾಲ್ ಜೋಳವೇ ಮಾಯವಾಗಿದೆ. ಇದು ಜಿಲ್ಲೆಯಲ್ಲಿ ದಿಗ್ಭ್ರಮೆ ಮೂಡಿಸಿ, ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಎಫ್ ಸಿಎಸ್ ಸಿಯ ಮೂವರು ಜನ ಅಧಿಕಾರಿಗಳ ಮೇಲೆಯೇ ಪ್ರಕರಣ ದಾಖಲಾಗಿದೆ.
ಗಣಿನಾಡಿನಲ್ಲಿ ಸರ್ಕಾರಿ ಗೋದಾಮುವಿನಲ್ಲಿದ್ದ ಪಡಿತರ ಜೋಳ ರಾತ್ರೋರಾತ್ರಿ ನಾಪತ್ತೆಯಾಗಿದೆ. ಮೂವರು ಅಧಿಕಾರಿಗಳ ವಿರುದ್ದ ಎಫ್‌ಐಆರ್ ದಾಖಲಾಗಿದೆ. ಬರೋಬ್ಬರಿ 8 ಸಾವಿರ ಕ್ವಿಂಟಾಲ್ ಜೋಳ ಕಾಣೆಯಾಗಿರುವುದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ಆಶ್ಚರ್ಯಕ್ಕೆ ಕಾರಣವಾಗಿದೆ. ಬಳ್ಳಾರಿ ಮತ್ತು ಸಿರಗುಪ್ಪ ತಾಲೂಕಿನ ಗೋದಾಮಿನಲ್ಲಿ ದಾಸ್ತಾನು ಮಾಡಿರುವ ಜೋಳ ಕಾಣೆಯಾಗಿದೆ. ಸಿರಗುಪ್ಪ ಮತ್ತು ಬಳ್ಳಾರಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ 2021-22ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ ಜೋಳಕ್ಕೆ ರೂ.2738ರಂತೆ ಬಳ್ಳಾರಿ ತಾಲೂಕಿನಲ್ಲಿ 109986.85 ಕ್ವಿಂಟಾಲ್ ಜೋಳ ಹಾಗೂ ಸಿರಗುಪ್ಪ ತಾಲೂಕಿನಲ್ಲಿ 130978.00 ಕ್ವಿಂಟಾಲ್ ಜೋಳ ಖರೀದಿಸಲಾಗಿತ್ತು. ಬಳ್ಳಾರಿ ತಾಲೂಕಿನ ಎಸ್‍ಡಬ್ಲ್ಯೂಸಿ (SWC) ಗೋಡೌನ್‍ಲ್ಲಿ 2267.87 ಕ್ವಿಂಟಾಲ್ ಹಾಗೂ ಸಿರಗುಪ್ಪ ತಾಲೂಕಿನ ಸಂಗ್ರಹಣಾ ಕೇಂದ್ರವಾದ ಕೆ.ಎಫ್.ಸಿ.ಎಸ್.ಸಿ. ಸಗಟು ಗೋದಾಮು ಹಾಗೂ ಬಾಲಾಜಿ ಗೋಡೌನ್ (ಸಿಂಧನೂರು ರಸ್ತೆ) ರಲ್ಲಿ 9846.45 ಕ್ವಿಂಟಾಲ್ ಜೋಳ ಇರಬೇಕಾಗಿತ್ತು. ಆದರೆ, ಸ್ಥಳ ಪರಿಶೀಲನೆ ಮಾಡಿದಾಗ ಬಳ್ಳಾರಿಯ ಎಸ್‍ಡಬ್ಲ್ಯೂಸಿ (SWC) ಗೋಡೌನ್‍ಲ್ಲಿ 1030ಕ್ವಿಂಟಾಲ್ ಹಾಗೂ ಸಿರಗುಪ್ಪ ತಾಲೂಕಿನ ಗೋದಾಮು ಹಾಗೂ ಬಾಲಾಜಿ ಗೋಡೌನ್ (ಸಿಂಧನೂರು ರಸ್ತೆ) ರಲ್ಲಿ 2548.50 ಕ್ವಿಂಟಾಲ್ ಜೋಳ ಇರುತ್ತದೆ. ಆದರೆ, ಇನ್ನು ಬಳ್ಳಾರಿ ಎಸ್‍ಡಬ್ಲ್ಯೂಸಿ (SWC) ಗೋಡೌನ್‍ಲ್ಲಿ 1237.87 ಕ್ವಿಂಟಾಲ್ ಜೋಳ ಹಾಗೂ ಸಿರಗುಪ್ಪ ಬಾಲಾಜಿ ಗೋಡಾನ್ ಹಾಗೂ ಕೆ.ಎಫ್.ಸಿ.ಎಸ್.ಸಿ ಗೋಡೌನ್‍ನಲ್ಲಿ 7282.42 ಕ್ವಿಂಟಾಲ್ ಜೋಳ ದಾಸ್ತಾನು ಕಡಿಮೆ ಇರುವುದು ಕಂಡು ಬಂದಿದೆ.
ಜುಲೈ-2022 ತಿಂಗಳಿಗೆ ಪಡಿತರ ಹಂಚಿಕೆಯಲ್ಲಿ ಅಡಚಣೆ ಉಂಟಾಗಿದೆ ಎಂದು ಬಳ್ಳಾರಿ ಕೆ.ಎಫ್.ಸಿ.ಎಸ್.ಸಿಯ ಜಿಲ್ಲಾ ವ್ಯವಸ್ಥಾಪಕ ನಾರಾಯಣಸ್ವಾಮಿ.ಎಮ್, ಬಳ್ಳಾರಿ ತಾಲೂಕಿನ ಖರೀದಿ ಅಧಿಕಾರಿಯಾದ ಕೆ.ಎಫ್.ಸಿ.ಎಸ್.ಸಿಯ ಕಿರಿಯ ಸಹಾಯಕರು/ಖರೀದಿ ಅಧಿಕಾರಿ ಶಿವೇಗೌಡ, ಸಿರಗುಪ್ಪ ಗೋದಾಮು ವ್ಯವಸ್ಥಾಪಕರು/ಖರೀದಿ ಅಧಿಕಾರಿ ಬಸವರಾಜ ಮೇಲೆ ಜಿಲ್ಲಾಧಿಕಾರಿಗಳ ನಿರ್ದೇಶನದ ಅನುಸಾರ ಬಳ್ಳಾರಿ ಗ್ರಾಮೀಣ ಮತ್ತು ಸಿರಗುಪ್ಪ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸರ್ಕಾರಿ ಗೋದಾಮಿನಲ್ಲಿ ಸಂಗ್ರಹಿಸಿರುವ ಪಡಿತರ ಧಾನ್ಯವೇ ಕಾಣೆಯಾಗಿರುವುದು ಬೇಲಿಯೇ ಎದ್ದು ಹೊಲ ಮೆಯ್ದಂತಾಗಿದೆ.
ಕ್ಯಾಮರಾ ಮ್ಯಾನ್ ಶಿವು ಜೊತೆ ಬಸವರಾಜ್ ಹರನಹಳ್ಳಿ ಪವರ್ ಟಿವಿ, ಬಳ್ಳಾರಿ