Monday, December 23, 2024

ಎಲ್ಲರೂ ಗೃಹ ಸಚಿವರ ರಾಜೀನಾಮೆ ಕೇಳೋದೆ : ಆರಗ ಜ್ಞಾನೇಂದ್ರ

ಶಿವಮೊಗ್ಗ: ಅತಿವೃಷ್ಟಿಗೆ ಸಿಲುಕಿರುವ ಅಮರನಾಥದಲ್ಲಿನ ಕರ್ನಾಟಕದ ಯಾತ್ರಿಗಳು ಸುರಕ್ಷಿತವಾಗಿದ್ದಾರೆ. ಅವರನ್ನು ಕರೆತರಲು ರಾಜ್ಯದಿಂದ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳು ಪ್ರಯತ್ನ ಆರಂಭಿಸಿದ್ದಾರೆ. ಒಬ್ಬರನ್ನೂ ಬಿಡದೇ ಸುರಕ್ಷಿತವಾಗಿ ಕರೆತರಲಿದ್ದೇವೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಜೊತೆ ಮಾತನಾಡಲಿದ್ದೇವೆ ಎಂದರು.

ರಾಜ್ಯದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಮುಖ್ಯಮಂತ್ರಿ ಅವರು ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ಅವಲೋಕಿಸಬೇಕು ಎಂದು ಸೂಚನೆ ನೀಡಿದ್ದಾರೆ. ಮಳೆಯಿಂದ ತೀವ್ರ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಹಾರ ನೀಡುವ ಪ್ರಯತ್ನ ಮಾಡಿದ್ದೇವೆ. ಪರಿಹಾರ ವಿತರಣೆಗೆ ಜಿಲ್ಲಾಧಿಕಾರಿ, ತಹಶಿಲ್ದಾರ್ ಬಳಿ ಹಣ ಇದೆ. ಅದನ್ನು ಖರ್ಚು ಮಾಡಲು ಸೂಚಿಸಿದ್ದೇವೆ ಎಂದರು.

‘ಕೊಲೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷನ ಸಹೋದರಿಯ ಆರೋಪಗಳ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಆ ಕುಟುಂಬದ ಬಗ್ಗೆ ನನಗೆ ಗೌರವ ಇದೆ. ನಾನು ಕೂಡ ತಕ್ಷಣ ಹೋಗಿ ಸಾಂತ್ವನ ಹೇಳಿದ್ದೇನೆ. ಎಲ್ಲವನ್ನು ಮಾಡಿದ್ದೇನೆ‘ ಎಂದು ಪ್ರಶ್ನೆಯೊಂದಕ್ಕೆ ಜ್ಞಾನೇಂದ್ರ ಪ್ರತಿಕ್ರಿಯಿಸಿದರು.

ಜೈಲಿನಲ್ಲಿ ಏನೋ ನಡೆಯಿತು. ಮೊಬೈಲ್ ಸಿಕ್ತು ಅಂತಾ ಇಷ್ಟೆಲ್ಲಾ ಮಾಡ್ತಿದ್ದಾರೆ. ಅವರಿಗೆ ನಾನೊಬ್ಬ ಗೃಹ ಸಚಿವನಾಗಿ ಏನು ಮಾಹಿತಿ ಕೊಡಬಹುದಿತ್ತೋ ಅದನ್ನು ಕೊಟ್ಟಿದ್ದೇನೆ. ಆದರೆ ಅವರಿಗೆ ಯಾಕೋ ಸಮಾಧಾನ ಇಲ್ಲ. ಎಂದರು.

‘ನಾನು ಯಾರ ಬಗ್ಗೆಯೂ ಅಗೌರವ ತೋರುವುದಿಲ್ಲ. ಅವರು ನನ್ನ ಬಳಿ ಬಂದಿದ್ದರು. ನನ್ನ ಬಳಿ ಸಮಾಧಾನದಿಂದ ಮಾತನಾಡಲಿಲ್ಲ. ಶ್ರೀರಾಮಸೇನೆಯ 20 ಜನರ ಅವರ ಜೊತೆ ಬಂದಿದ್ದರು. ಅವರ ಈ ರೀತಿಯ ವರ್ತನೆಯಿಂದ ಜೊತೆಗೆ ಬಂದಿದ್ದ ಶ್ರೀರಾಮಸೇನೆಯವರಿಗೂ ಬೇಸರ ಆಗಿದೆ ಎಂದು ಹೇಳಿದರು.

ತಮ್ಮ ರಾಜೀನಾಮೆಗೆ ಹಿಂದು ಜಾಗರಣ ವೇದಿಕೆ ಆಗ್ರಹಿಸಿರುವ ವಿಚಾರದ ಬಗ್ಗೆ ಮಾತನಾಡಿ. ಗೃಹ ಸಚಿವರನ್ನು ರಾಜೀನಾಮೆ ಕೇಳದೇ ಇನ್ನು ಯಾರನ್ನು ಕೇಳುತ್ತಾರೆ. ಎಲ್ಲರೂ ಗೃಹ ಸಚಿವರನ್ನೇ ರಾಜೀನಾಮೆ ಕೇಳೋದು ಎಂದು ನಗುತ್ತಲೇ ಉತ್ತರಿಸಿದರು.

RELATED ARTICLES

Related Articles

TRENDING ARTICLES