Friday, January 24, 2025

ಮುಂದುವರೆದ ಮಳೆ; ಜನಜೀವನ ಅಸ್ತವ್ಯಸ್ತ: 13 DCಗಳ ಜತೆ ಸಿಎಂ ಸಭೆ

ರಾಜ್ಯದ ಹಲವೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅನೇಕ ಕಡೆ ಮರಗಳು ಧರೆಗುರುಳಿದ್ರೆ, ಹಲವು ಕಡೆ ಭೂಕುಸಿತಗಳು ಉಂಟಾಗ್ತಿವೆ. ಸಾಕಷ್ಟು ಡ್ಯಾಂಗಳು ಭರ್ತಿ ಹಂತಕ್ಕೆ ತಲುಪಿದ್ದು, ಮುಂಜಾಗ್ರತಾ ಕ್ರಮವಾಗಿ ಭಾರಿ ಪ್ರಮಾಣದ ನೀರನ್ನು ಹೊರ ಬಿಡಲು ನಿರ್ಧರಿಸಲಾಗಿದೆ.

ರಾಜ್ಯದಲ್ಲಿ ಮಳೆ ರಗಳೆ ಮುಂದುವರಿದಿದೆ.ವಿವಿಧೆಡೆ ವರುಣನಬ್ಬರದಿಂದ ಭಾರಿ ಅವಾಂತರಗಳು ಸೃಷ್ಟಿಯಾಗಿವೆ.ಜನಜೀವನ ಅಸ್ತವ್ಯಸ್ತವಾಗಿದ್ದು, ಭಾರಿ ಪ್ರಮಾಣದ ಬೆಳೆ ಹಾನಿಯಾಗಿದೆ. ರೈತರು ಸರ್ಕಾರದಿಂದ ನಷ್ಟ ಪರಿಹಾರಕ್ಕೆ ಆಗ್ರಹಿಸಿದ್ದಾರೆ.

ಕರಾವಳಿಯಲ್ಲಿ ಮಳೆರಾಯ ಭಾರಿ ಅವಾಂತರ ಸೃಷ್ಟಿಸಿದ್ದಾನೆ. ಉಡುಪಿ, ದ‌ಕ್ಷಿಣಕನ್ನಡ ಜಿಲ್ಲೆಯಲ್ಲಿ ವರುಣನಬ್ಬರ ಮುಂದುವರಿದ ಹಿನ್ನೆಲೆಯಲ್ಲಿ ಇನ್ನೆರಡು ದಿನ ರಜೆ ವಿಸ್ತರಣೆ ಮಾಡಲಾಗಿದೆ. ಎರಡು ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದ್ದು,ಜನಜೀವನ ಅಸ್ತವ್ಯಸ್ತವಾಗಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಇಂಗ್ಲಾದಿ ಗ್ರಾಮದಲ್ಲಿ ಮನೆ ಗೋಡೆ ಕುಸಿತವಾಗಿದೆ. ನಳಿನಿ ಹಾಗೂ ರಮೇಶ್ ದಂಪತಿಗೆ ಸೇರಿದ ಮನೆ ಮೇಲೆ ಗುಡ್ಡ ಕುಸಿದಿದ್ದು ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ.

ಮೋಡಕವಿದ ವಾತಾವರಣದಿಂದಾಗಿ ಜೋಗ ಜಲಪಾತದಲ್ಲಿ ಮತ್ತೆ ಕಳೆಗಟ್ಟಿದೆ.ಧುಮ್ಮಿಕ್ಕಿ ಹರಿಯುತ್ತಿರುವ ಹಾಲ್ನೊರೆಯಂತಹ ನೀರಿನ ಸೊಬಗಿನ ನಡುವೆ ರಾಜ, ರಾಣಿ, ರೋರರ್, ರಾಕೆಟ್ ಕವಲುಗಳಲ್ಲಿ ಮತ್ತೆ ಜೀವಕಳೆ ಬಂದಿದೆ.ವಿಶ್ವವಿಖ್ಯಾತ ಜೋಗ ಜಲಪಾತ ಕಣ್ತುಂಬಿಕೊಳ್ಳುವುದೇ ಹಬ್ಬವಾಗಿದೆ.
ಉತ್ತರ ಕನ್ನಡದಲ್ಲೂ ಮಳೆಯಬ್ಬರ ಜೋರಾಗಿದ್ದು, ಜನ ಹೈರಾಣಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಳೆ ನೀರು ತುಂಬಿ ನಿಂತಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಇನ್ನೊಂದೆಡೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿಗೌಡ ಅವರ ಮನೆಗೂ ಜಲದಿಗ್ಬಂಧನ ವಿಧಿಸಲಾಗಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.ಕುಮಟ ತಾಲೂಕಿನ ಊರಕೇರಿ,ಬಡಗಣಿ, ಹೆಗಡೆ, ಹೊನ್ನಾವರ ತಾಲೂಕಿನ ಗುಂಡಬಾಳ,ಹಡಿನಬಾಳ, ಸೇರಿ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ.

ಬೆಳಗಾವಿ ಜಿಲ್ಲೆಯಲ್ಲೂ ಮಳೆರಗಳೆ ಮುಂದುವರಿದಿದೆ.ಕೃಷ್ಣಾ, ದೂದಗಂಗಾ, ವೇಸಗಂಗಾ, ಘಟಪ್ರಭಾ ನದಿ ಮೈದುಂಬಿ ಹರಿಯುತ್ತಿದೆ.ಕೃಷ್ಣಾ ನದಿ ಒಳಹರಿವಿನ ಪ್ರಮಾಣದಲ್ಲಿ ಭಾರಿ ಹೆಚ್ಚಳವಾಗಿದ್ದು, ಸುಮಾರು 70 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಈಗಾಗಲೇ ಕೆಳಹಂತದ ಮೂರು ಸಂಪರ್ಕ ಸೇತುವೆಗಳಾದ ಯಡೂರು – ಕಲ್ಲೋಳ, ಮಲಿಕವಾಡ – ದತ್ತವಾಡ, ಕಾರದಗಾ – ಭೋಜ ಮುಳುಗಡೆಯಾಗಿದೆ.

ಬೆಳಗಾವಿಗೆ ಸಮೀಪ ಇರುವ ಜಲಪಾತಗಳು ಮೈದುಂಬಿ ಧುಮ್ಮುಕ್ಕುತ್ತಿವೆ. ನಯನಮನೋಹರ ಜಲಪಾತಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.ಗೋಕಾಕ್ ಫಾಲ್ಸ್‌ಗೂ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇನ್ನೂ ನದಿ ಪಾತ್ರದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ.

ಕೊಪ್ಪಳದ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು.. T.B ಡ್ಯಾಮ್ ಭರ್ತಿಯಾಗಲು ಇನ್ನೂ 9 ಅಡಿಗಳಷ್ಟೇ ಬಾಕಿ ಇದೆ.ಜಲಾಶಯಕ್ಕೆ ಈಗ 82.103 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಒಂದೇ ದಿನ 5 ಟಿಎಂಸಿ ನೀರು ಸಂಗ್ರಹವಾಗಿದೆ.

ಹಾಸನ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ನದಿ ತೊರೆಗಳು ಉಕ್ಕಿ ಹರಿಯುತ್ತಿವೆ. ಕಾವೇರಿ ನದಿ ಉಕ್ಕಿ ಹರಿದು ನೂರಾರು ಎಕರೆ ಬೆಳೆ ಜಲಾವೃತವಾಗಿದೆ.ಈಶ್ವರ ದೇವಾಲಯ ಸಂಪೂರ್ಣ ಜಲಾವೃತವಾಗಿದ್ದು, ಬೆಳೆ ಹಾನಿ ಪ್ರದೇಶಗಳನ್ನು ಕಂದಾಯ ಅಧಿಕಾರಿಗಳು ಪರಿಶೀಲಿಸಿದ್ದಾರೆ.

13 DCಗಳ ಸಭೆ ನಡೆಸಿದ ಸಿಎಂ ಬೊಮ್ಮಾಯಿ :

ಇನ್ನು ಮಳೆ ರಗಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪರಿಸ್ಥಿತಿ ನಿಯಂತ್ರಿಸಲು ಸರ್ಕಾರ ಸರ್ಕಸ್ ಮಾಡುತ್ತಿದೆ.ಸಿಎಂ ಬಸವರಾಜ ಬೊಮ್ಮಾಯಿ ಗೃಹಕಚೇರಿಯಲ್ಲಿ 13 ಮಳೆ ಹಾನಿ ಜಿಲ್ಲೆಗಳ DC ಗಳೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮಕ್ಕೆ ಸೂಚಿಸಿದರು.ವಿವಿಧ ಸಚಿವರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ರು.

ಒಟ್ಟಾರೆ ಎಲ್ಲೆಲ್ಲಿ ಬೆಳೆಹಾನಿ‌, ಮನೆಹಾನಿ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಜನರಿಗೆ ಸ್ಪಂದಿಸುತ್ತಿದ್ದಾರೆ. ಈಗಾಗಲೇ ಬಹುತೇಕ ಡ್ಯಾಂಗಳು ಭರ್ತಿಯ ಹಂತಕ್ಕೆ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ನೀರನ್ನು ಹೊರ ಬಿಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಮಳೆ ರಗಳೆ ಮುಂದುವರಿದಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

ಬ್ಯೂರೋ ರಿಪೋರ್ಟ್ ಪವರ್ ಟಿವಿ

RELATED ARTICLES

Related Articles

TRENDING ARTICLES