ಮಂಗಳೂರು : ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದೆ.
ಎರಡೂ ಜಿಲ್ಲೆಗಳಲ್ಲಿ ಜುಲೈ 8 ಮತ್ತು 9 ರಂದು ಶಾಲೆ, ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಹವಾಮಾನ ಇಲಾಖೆಯಿಂದ ಕರಾವಳಿಯ 3 ಜಿಲ್ಲೆಗಳಲ್ಲಿ ಜುಲೈ 9ರ ಬೆಳಗ್ಗಿನ ವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, 48 ಗಂಟೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಕಾಲೇಜಿಗೆ ರಜೆಯನ್ನೂ ಎರಡು ದಿನಕ್ಕೆ ಘೋಷಣೆ ಮಾಡಿವೆ.
ಈಗಾಗಲೇ ಕಳೆದ ಮೂರು ದಿನಗಳಿಂದ ಮಳೆಯ ಕಾರಣಕ್ಕೆ ಎರಡೂ ಜಿಲ್ಲೆಗಳಲ್ಲಿ ರಜೆ ನೀಡಲಾಗಿತ್ತು. ಈಗ ಇನ್ನೂ ಎರಡು ದಿನಕ್ಕೆ ರಜೆಯನ್ನು ವಿಸ್ತರಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಳೆಯ ಕಾರಣ ಒಂದು ವಾರ ಕಾಲ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ, ಕಾಲೇಜಿಗೆ ರಜೆ ನೀಡಿರುವ ದಾಖಲೆಯೂ ಸೇರಿದೆ.
ಇನ್ನು, ಈ ಹಿಂದೆಯೂ ಮಳೆಗಾಲದಲ್ಲಿ ಕೆಲವೊಮ್ಮೆ ವಿಪರೀತ ಮಳೆ ಬಿದ್ದ ದಿವಸ ರಜೆ ನೀಡಿದ್ದುಂಟು. ಆದರೆ ಒಂದೇ ಬಾರಿಗೆ ನಿರಂತರ ವಾರ ಪೂರ್ತಿ ರಜೆ ನೀಡಿದ್ದು ಕಡಿಮೆ. ಇದು ಇಪ್ಪತ್ತು ವರ್ಷಗಳ ಇತಿಹಾಸದಲ್ಲಿ ಅಪರೂಪದ ದಾಖಲೆ ಸೇರಿದೆ. ಆರ್ದ್ರಾ ನಕ್ಷತ್ರದಲ್ಲಿ ಕಳೆದ ಹತ್ತು ವರ್ಷದಲ್ಲಿ ಮಳೆ ಕಡಿಮೆಯಾಗಿರುತ್ತಿತ್ತು. ಈ ಬಾರಿಯೇ ಆರ್ದ್ರಾ ಮಳೆ ರೌದ್ರಾವತಾರ ತೋರಿದೆ.