ಹಾಸನ: ಜಿಲ್ಲೆಯ ಹೊಳೆನರಸೀಪುರದಲ್ಲಿ ಮದುವೆಯಾಗಿ 10 ವರ್ಷವಾಗಿದ್ದ ಗೃಹಿಣಿ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮುದ್ದಾದ ಅವಳಿ ಮಕ್ಕಳು ತಾಯಿಯನ್ನು ಕಳೆದುಕೊಂಡು ಅನಾಥವಾಗಿವೆ. ರೇಖಾ ಸಾವಿನ ಸುತ್ತ ಅನುಮಾನ ಹುಟ್ಟಿದ್ದು, ಗಂಡ ಹಾಗೂ ಬಾವನ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ. ಮೂಲತಃ ಶಿವಮೊಗ್ಗ ಜಿಲ್ಲೆ ಸೋಮಿನಕೊಪ್ಪ ಗ್ರಾಮದ ರೇಖಾಳನ್ನ ಹೊಳೆನರಸೀಪುರದ ಮೋಹನ್ ಎಂಬಾತನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆಯಾದ 8 ವರ್ಷಗಳು ದಂಪತಿಗೆ ಮಕ್ಕಳಾಗಿರಲಿಲ್ಲ. ಎರಡು ವರ್ಷಗಳ ಹಿಂದಷ್ಟೇ ಅವಳಿ ಗಂಡು ಮಕ್ಕಳಿಗೆ ರೇಖಾ ಜನ್ಮ ನೀಡಿದ್ದಳು. ಇದೇ ಕಾರಣಕ್ಕೆ ಗಂಡನ ಮನೆಯವರು ಕಿರುಕುಳ ನೀಡಿದ್ದಾರಂತೆ.
ರೇಖಾಳ ಪತಿ ಮೋಹನ್ ಹಾಗೂ ಆತನ ಅವಿವಾಹಿತ ಅಣ್ಣ ಗಿರೀಶ್ ಚಿತ್ರಹಿಂಸೆ ಕೊಟ್ಟಿದ್ದಾರಂತೆ.ಮೋಹನ್ ಮನೆಯಿಂದ ಹೊರ ಹೋದ ಬಳಿಕ ಗಿರೀಶ್, ರೇಖಾಳಿಗೆ ಲೈಂಗಿಕ ಕಿರುಕುಳ ನೀಡ್ತಿದ್ದ. ಇದನ್ನು ಪ್ರತಿರೋಧಿಸಿದ್ದಕ್ಕೆ ರೇಖಾಳನ್ನು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ರೇಖಾ ತಾಯಿ ಮಂಜುಳಾ ಗಂಭೀರವಾಗಿ ಆರೋಪಿಸಿದ್ದಾರೆ. ಗಿರೀಶ್ ಕೃತ್ಯಕ್ಕೆ ಪತಿ ಮೋಹನ್ ಹಾಗೂ ಆತನ ಸಹೋದರಿಯರಾದ ಮಮತಾ, ವಿನುತಾ ಅವರ ಕುಮ್ಮಕ್ಕು ಇದೆ ಎಂದು ಹೊಳೆನರಸೀಪುರ ನಗರ ಠಾಣೆಗೆ ದೂರು ನೀಡಿದ್ದಾರೆ.
ಡೇರಿಯಲ್ಲಿ ನೌಕರನಾಗಿದ್ದ ಮೋಹನ್, ಮಗಳನ್ನು ಚೆನ್ನಾಗಿ ನೋಡಿಕೊಳ್ತಾನೆ ಎಂದು ವರದಕ್ಷಿಣೆ ಕೊಟ್ಟು ರೇಖಾ ಪೋಷಕರು ಮದುವೆ ಮಾಡಿಸಿದ್ದರು. ಆದ್ರೆ ಮದುವೆ ಆದಾಗಿನಿಂದಲೂ ಪತಿ ಮೋಹನ್ ಕಾಟ ಕೊಡೋಕೆ ಶುರು ಮಾಡಿದ್ದ. ಗಂಡ ಮನೆಯವರ ಕಿರುಕುಳದ ಬಗ್ಗೆ ರೇಖಾ ತನ್ನ ಮನೆಯವರ ಬಳಿಯೂ ಹಲವಾರು ಬಾರಿ ಹೇಳಿಕೊಂಡಿದ್ದಳು.ಬಿಎ ಬಿಡ್ ಜತೆಗೆ ಎಂಎ ಮಾಡಿದ್ದ ರೇಖಾ ಇನ್ನೊಬ್ಬರಿಗೆ ಬುದ್ಧಿ ಹೇಳುವಂತಿದ್ದಳು. ಹೀಗಾಗಿ ಯಾವತ್ತೂ ಆತ್ಮಹತ್ಯೆಯ ಯೋಚನೆನೇ ಮಾಡಿದವಳಲ್ಲ, ಗಂಡ, ಆತನ ಮನೆಯವರೇ ಕೊಂದಿದ್ದಾರೆ. ಎಲ್ಲರನ್ನೂ ಬಂಧಿಸಿ ಕಠಿಣ ಶಿಕ್ಷೆ ಕೊಡಬೇಕೆಂದು ರೇಖಾಳ ಸಹೋದರಿ ತ್ರಿವೇಣಿ ಒತ್ತಾಯಿಸಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಹೊಳೆನರಸೀಪುರ ನಗರ ಪೊಲೀಸರು ರೇಖಾ ಗಂಡನ ಅಣ್ಣ ಗಿರೀಶ್ನನ್ನು ಬಂಧಿಸಿದ್ದಾರೆ. ಒಟ್ಟಿನಲ್ಲಿ ಮದುವೆಯಾದ 8 ವರ್ಷಗಳ ಬಳಿಕ ಮನೆಯಲ್ಲಿ ಮಕ್ಕಳಾಗಿದ್ದು, ಚೆನ್ನಾಗಿದ್ದ ಸಂಸಾರದಲ್ಲಿ ವಿರಸ ಶುರುವಾಗಿದ್ದು ಏಕೆ, ರೇಖಾ ಮನೆಯವರು ಮಾಡುತ್ತಿರೋ ಆರೋಪದ ಅಸಲಿಯತ್ತೇನು, ರೇಖಾಳದ್ದು ಕೊಲೆಯೋ ಆತ್ಮಹತ್ಯೆಯೋ ಎಂಬುದು ಪೊಲೀಸರ ತನಿಖೆಯಿಂದಷ್ಟೇ ಬಯಲಾಗಬೇಕಿದೆ.