Friday, May 17, 2024

ಗುಂಪು ಘರ್ಷಣೆ : ಮೂವರಿಗೆ ಚಾಕು ಇರಿತ

ಬಾಗಲಕೋಟೆ: ಸದಾ ಜನ ಜಂಗುಳಿಯಿಂದ ತುಂಬಿರುತ್ತಿದ್ದ ಪಟ್ಟಣವಿದು. ಆದ್ರೆ ಆ ಒಂದು ಘಟನೆಯಿಂದ ಇಡೀ ಪಟ್ಟಣವೇ ಪ್ರಕ್ಷುಬ್ಧ ವಾತಾವರಣಕ್ಕೆ ತಿರುಗಿತ್ತು. ಎರಡು ಗುಂಪುಗಳ ಮಧ್ಯೆ ಗಲಾಟೆ ತಾರಕಕ್ಕೇರಿ ಚಾಕು ಇರಿತವಾಗಿದೆ

ಒಂದೆಡೆ ಹೊತ್ತಿ ಉರಿಯುತ್ತಿರುವ ತಳ್ಳೋ ಗಾಡಿಗಳು.. ಮತ್ತೊಂದೆಡೆ ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು.. ಇನ್ನೊಂದೆಡೆ ಸ್ಥಳದಲ್ಲಿ ಬೀಡುಬಿಟ್ಟ ಪೊಲೀಸರು.. ಈ ಗಲಾಟೆಗೆ ಸಾಕ್ಷಿಯಾಗಿದ್ದು ಬಾಗಲಕೋಟೆ ಜಿಲ್ಲೆಯ ಕೆರೂರು ಪಟ್ಟಣ. ಹೌದು ನಿನ್ನೆ ಸಂಜೆ ಕೆರೂರು ಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ ನಡೆದ ಸಂಘರ್ಷ ರಕ್ತಪಾತಕ್ಕೆ ಸಾಕ್ಷಿಯಾಯ್ತು. ಗಲಾಟೆಯಲ್ಲಿ ನಾಲ್ವರಿಗೆ ಗಾಯವಾಗಿದ್ದು, ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅರುಣ್, ಲಕ್ಷ್ಮಣ್ ಹಾಗೂ ಯಮನೂರ ಎಂಬುವವರಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ.

ಕೆರೂರು ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಆಗ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಹರಸಾಹ ನಡೆಸಿದ್ರು.ಕೆರೂರು ಪಟ್ಟಣದಲ್ಲಿ ನಿನ್ನೆ ರಾತ್ರಿಯಿಂದಲೇ ಶಾಂತಿ ಪಾಲನೆಗಾಗಿ ೧೪೪ ಕಲಂ ಜಾರಿ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ರು. ನಾಳೆ ರಾತ್ರಿ ೮ ಗಂಟೆ ವರೆಗೂ ನಿಷೇಧಾಜ್ಞೆ ಜಾರಿಯಲ್ಲಿದೆ.ಇಂದು ಶಾಲಾ-ಕಾಲೇಜುಗಳಿಗೂ ರಜೆ ಘೋಷಣೆ ಮಾಡಲಾಗಿದೆ.

ಯುವತಿಯರನ್ನ ಚುಡಾಯಿಸುತ್ತಿದ್ದ ವಿಚಾರಕ್ಕೆ ಈ ಗಲಾಟೆಯಾಗಿದೆ. ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಬಾಗಲಕೋಟೆ ಎಸ್.ಪಿ.ಜಯಪ್ರಕಾಶ್ ತಿಳಿಸಿದ್ರು. ಈಗಾಗಲೇ ಆರೋಪಿಗಳನ್ನ ಬಂಧಿಸಿದ್ದು, ಉಳಿದ ಕಿಡಿಗೇಡಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ. ಘರ್ಷಣೆಯಲ್ಲಿ ಬೈಕ್ ಮತ್ತು ತಳ್ಳುವ ಗಾಡಿ ಸುಟ್ಟಿದ್ದಾರೆ. 6 ಬೈಕ್​ಗಳು ಜಖಂಗೊಂಡಿವೆ. ಭದ್ರತೆಗಾಗಿ ಪೊಲೀಸರನ್ನ ನಿಯೋಜಿಸಲಾಗಿದೆ ಎಂದು ಎಸ್​​ಪಿ ಮಾಹಿತಿ ನೀಡಿದ್ರು.

ಒಟ್ಟಿನಲ್ಲಿ ಎರಡು ಗುಂಪುಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ಕೆರೂರು ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ತಿಳಿಗೊಂಡಿದೆ. ಕೆರೂರು ಪಟ್ಟಣದಲ್ಲಿ ಜನತೆ ಶಾಂತಿ ಕಾಪಾಡಲು ಸ್ಪಂದಿಸುತ್ತಿದ್ದು, ಪರಿಸ್ಥಿತಿ ಪೊಲೀಸರ ಹತೋಟಿಗೆ ಬಂದಿದೆ.

ನಿಜಗುಣ ಮಠಪತಿ,ಪವರ್ ಟಿವಿ ಬಾಗಲಕೋಟೆ

RELATED ARTICLES

Related Articles

TRENDING ARTICLES