Sunday, December 22, 2024

ನಾನು ಲಕ್ಕಿಡಿಪ್‌ ಸಿಎಂ, ಏನೀಗ? : ಬಿಜೆಪಿ ವಿರುದ್ಧ ಹೆಚ್ಡಿಕೆ ಆಕ್ರೋಶ

ಬೆಂಗಳೂರು: ಜೆಡಿಎಸ್​​ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಲಕ್ಕಿಡಿಪ್ ಸಿಎಂ ಅಂತ ಬಿಜೆಪಿ ಲೇವಡಿ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮೂಲಕ ರಾಜ್ಯ ಬಿಜೆಪಿ ನಾಯಕರನ್ನ ಹೆಚ್ಡಿಕೆ ಕುಟುಕಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿರುವ ಅವರು, ಹೌದು ನಾನು ಲಕ್ಕಿಡಿಪ್‌ ಸಿಎಂ, ಏನೀಗ? ಈಗ ಪಟ್ಟದಲ್ಲಿ ಕೂತಿರುವ ನಿಮ್ಮ ಸಿಎಂ ಅವರೇನು ಚುನಾವಣೆಯಲ್ಲಿ ಜನಾದೇಶ ಪಡೆದ ಘೋಷಿತ ಮುಖ್ಯಮಂತ್ರಿಯಾ? ಅವರೂ ಲಕ್ಕಿಡಿಪ್​​​​​ ಎಂಬುದನ್ನು ಮರೆತರೆ ಹೇಗೆ? ಅಧಿಕಾರದ ನೆರಳೂ ಕಾಣದೆ ಕಂಗೆಟ್ಟಿದ್ದ ಬಿಜೆಪಿಗೆ ರಾಜ್ಯದಲ್ಲಿ ಖುರ್ಚಿ ರುಚಿ ತೋರಿಸಿದ ಅಂದಿನ 20:20 ಸರಕಾರದ ಡಿಸಿಎಂ ಆಗಿದ್ದ ನಿಮ್ಮವರನ್ನೇ ಕೇಳಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ನಿಮ್ಮಲ್ಲೆಷ್ಟು ಲಕ್ಕಿಡಿಪ್‌ಗಳಿದ್ದಾರೆ ಎಂಬುದನ್ನು ಅವರೇ ಹೇಳುತ್ತಾರೆ, ಸತ್ಯ ಸಾಕ್ಷಾತ್ಕಾರ ಮಾಡಿಸುತ್ತಾರೆ. ಲಕ್ಕಿಡಿಪ್‌ ಸಿಎಂ ಎಂದರೆ ಅಪಮಾನವೇನೂ ಅಲ್ಲ ನನಗೆ. ಆಕಸ್ಮಿಕ ಮುಖ್ಯಮಂತ್ರಿ ಎಂದು ಅನೇಕ ಸಲ ಹೇಳಿದ್ದೇನೆ. ಆದರೆ, ʼಆಪರೇಷನ್‌ ಕಮಲದ ಸಿಎಂʼ ಎನ್ನುವುದಕ್ಕಿಂತಾ ಕೀಳಾ ಅದು? ಯಾವುದು ಮೇಲು? ಯಾವುದು ಕೀಳು? ಸ್ವಲ್ಪ ಹೇಳಿ? ಇನ್ನು, ಜಗತ್ತಿನ ಅಂಕುಡೊಂಕಿನ ಮಾತು ಹಾಗಿರಲಿ. ಪ್ರಧಾನಿಮಂತ್ರಿ ಸಂಚರಿಸಿದ ರಸ್ತೆಯನ್ನೇ ನೋಡಿದರೆ ಸಾಕು, ಅರಿವಾಗುತ್ತದೆ ನಿಮ್ಮ ಅಂಕೆಷ್ಟು, ಡೊಂಕೆಷ್ಟು!! ಎಂದು ಹೆಚ್.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್​ ಮಾಡಿ ಬಿಜೆಪಿ ನಾಯಕರ ಕಾಲೆಳಿದಿದ್ದಾರೆ.

RELATED ARTICLES

Related Articles

TRENDING ARTICLES