ಹುಬ್ಬಳ್ಳಿ : ಕರ್ನಾಟಕ ಮಾತ್ರವಲ್ಲದೆ, ವಿವಿಧೆಡೆ ಅಜಾತಶತ್ರುವೆಂದೇ ಪ್ರಖ್ಯಾತರಾಗಿದ್ದ ಚಂದ್ರಶೇಖರ್ ಗುರೂಜಿಯ ಬರ್ಬರ ಹತ್ಯೆಗೆ ಕಾರಣವಾಗಿದ್ದೇನು…? ಅದರಲ್ಲೂ ಅವರಿಗೆ ಅತ್ಯಾಪ್ತರಾಗಿದ್ದವರೇ ಗುರೂಜಿಯನ್ನು ಬರ್ಬರವಾಗಿ ಕೊಲೆಗೈಯ್ಯಲು ಕಾರಣಗಳಾದ್ರೂ ಏನು..?
ಇನ್ನು ಚಂದ್ರಶೇಖರ ಗುರೂಜಿ ಕೊಲೆಯಾಗಿದ್ದು ಅವರ ಅಪಾರ ಅಭಿಮಾನಿಗಳನ್ನು ಆತಂಕಕ್ಕೀಡು ಮಾಡಿತ್ತು. ಯಾಕಂದ್ರೆ, ಅವರಿಗೆ ಎಲ್ಲೂ ಕೂಡ ಶತ್ರುಗಳೇ ಇಲ್ಲ ಎಂದೇ ನಂಬಲಾಗಿತ್ತು. ಆದರೆ, ಚಿಕ್ಕಂದಿನಿಂದಲೇ ಅಜಾತಶತ್ರುವಾಗಿ ನಿಶ್ವಾರ್ಥ ಸೇವೆಗಳಲ್ಲಿ ತೊಡಗುವ ಮೂಲಕ ಅಪಾರ ಜನಮನ್ನಣೆ ಗಳಿಸಿದ್ದರು. ಸರಳ ಜೀವನ, ಸರಳ ಅಕಾಡೆಮಿ, ಸರಳ ವಾಸ್ತು, ವಾಸ್ತು ಪರಿಹಾರ ಸಲಹೆ ಮೂಲಕ ಖ್ಯಾತಿಯಾಗಿದ್ದ ಗುರೂಜಿ ಕರ್ನಾಟಕದ್ಯಾಂತ ಫೇಮಸ್ ಆಗಿದ್ದರು. ಆದರೆ, ಗುರೂಜಿಗೆ ಅತ್ಯಾಪ್ತರಾಗಿದ್ದವರೇ ಅವರ ಶತ್ರುಗಳಾಗಿ ಬೆಳೆದಿದ್ದರು. ಯಾವುದೇ ಗುಮಾನಿಯೂ ಬಾರದಂತೆ ಗುರೂಜಿ ಹತ್ಯೆಗಾಗಿ ಕಾದು ಕುಳಿತಿದ್ದರು.
ವನಜಾಕ್ಷಿ ಹೆಸರಿನಲ್ಲಿ ಫ್ಲ್ಯಾಟ್ ಕೂಡ ಖರೀದಿಸಿದ್ದ ಗುರೂಜಿ..! ? :
ಇನ್ನು ಗುರೂಜಿಯ ಕಗ್ಗೊಲೆ ಪ್ರಕರಣ ಪೊಲೀಸರಿಗೆ ತಲೆನೋವು ತಂದೊಡ್ಡಿದೆ. ಚಂದ್ರಶೇಖರ ಗುರೂಜಿ ಹತ್ಯೆಗೆ ಬೇನಾಮಿ ಆಸ್ತಿ ವ್ಯವಹಾರವೇ ಪ್ರಮುಖ ಕಾರಣವಾಯ್ತಾ ಎಂಬ ಪ್ರಶ್ನೆಗೆ ಪುಷ್ಠಿ ಸಿಕ್ಕಿದೆ. ಬಂಧಿತ ಆರೋಪಿಗಳ ಮಾಸ್ಟರ್ ಮೈಂಡ್ ಎಂದೇ ಹೇಳಲಾಗುತ್ತಿರುವ ಸರಳ ವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿ ವನಜಾಕ್ಷಿ ಹೆಸರಿನಲ್ಲಿ ಗುರೂಜಿ ಫ್ಲ್ಯಾಟ್ ಕೂಡ ಖರೀದಿಸಿದ್ದರು ಎನ್ನಲಾಗಿದೆ. 2019ರಿಂದಲೇ ವನಜಾಕ್ಷಿ ಹೆಸರಿನಲ್ಲಿ ಗುರೂಜಿ ಬೇನಾಮಿ ಆಸ್ತಿ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಆಗಾಗ ಹಣಕಾಸು ಹಾಗೂ ಆಸ್ತಿ ವಿಚಾರವಾಗಿ ಗುರೂಜಿ ಹಾಗೂ ಈಕೆ ಮಧ್ಯೆ ಜಗಳವಾಗುತ್ತಿತ್ತು ಎನ್ನಲಾಗಿದೆ.
ಜಗಳ ಅತಿರೇಕಕ್ಕೆ ಹೋದಾಗ ಆ ಎಲ್ಲಾ ಆಸ್ತಿ ಮರಳಿಸುವಂತೆ ಚಂದ್ರಶೇಖರ್ ಒತ್ತಡ ಹೇರುತ್ತಿದ್ದರುಎನ್ನಲಾಗಿದೆ. ಇಲ್ಲವಾದಲ್ಲಿ ಬಲವಂತವಾಗಿ ಆಸ್ತಿ ಕಿತ್ತುಕೊಳ್ಳುವುದಾಗಿಯೂ ಎಚ್ಚರಿಸಿದ್ದರು ಎನ್ನಲಾಗಿದೆ. ಹೀಗಾಗಿ ಗುರೂಜಿಯನ್ನು ಮುಗಿಸಲು ಅಂದಿನಿಂದಲೇ ಈಕೆ ಮುಹೂರ್ತವಿಟ್ರಾ ಎಂಬ ಪ್ರಶ್ನೆಗಳಿಗೆ ಪುಷ್ಠಿ ಸಿಕ್ಕಿದೆ. ಇನ್ನು ಈಕೆ ಹಾಗೂ ಮತ್ತೊಬ್ಬ ಆರೋಪಿ ಮಹಾಂತೇಶ್‌ಗೆ ಗುರೂಜಿಯೇ ಮುಂದೆ ನಿಂತು ಮದುವೆ ಮಾಡಿಸಿದ್ದರು ಎನ್ನಲಾಗಿದೆ. ಅಲ್ಲದೆ, ಈಕೆ ಗುರೂಜಿಯ ಮನೆಯಲ್ಲೇ ಕೆಲಸಕ್ಕಿದ್ದಳು ಎಂದು ಗುರೂಜಿಯ ಆಪ್ತ ಮೂಲಗಳು ತಿಳಿಸಿವೆ.
ಇನ್ನು ಮತ್ತೊಬ್ಬ ಆರೋಪಿ ವನಜಾಕ್ಷಿ ಪತಿ ಮಹಾಂತೇಶ್ ಎಂಬಾತ ಗುರೂಜಿಯ ಸರಳ ವಾಸ್ತು ಸಂಸ್ಥೆಯಲ್ಲಿ 900ಕ್ಕೂ ಹೆಚ್ಚು ಮಂದಿಗೆ ಟೀಂ ಲೀಡರ್ ಆಗಿದ್ದ ಎನ್ನಲಾಗಿದೆ.ಆದರೆ, ಭಿನ್ನಾಭಿಪ್ರಾಯಗಳಿಂದಾಗಿ ಮಹಾಂತೇಶ್ ಮೂಲಕ ಆ ಎಲ್ಲಾ 900 ಜನರಿಗೂ ಗುರೂಜಿ ಗೇಟ್ ಪಾಸ್ ಕೊಡಿಸಿದ್ದರು ಎನ್ನಲಾಗಿದೆ. ಅಲ್ಲದೆ, ಮೂರು ತಿಂಗಳ ಸಂಬಳ ಕೊಡಬೇಕಿದ್ದರೂ ಕೇವಲ ಒಂದು ತಿಂಗಳ ಸಂಬಳಕ್ಕೆ ಒಪ್ಪಿಸಿದ್ದರು ಎಂದು ಹೇಳಲಾಗುತ್ತಿದೆ. ಇದು ಕೂಡ ಗುರೂಜಿಯ ಕಗ್ಗೊಲೆಗೆ ಕಾರಣವಾಯ್ತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಸರಳ ವಾಸ್ತು ಮಾಜಿ ನೌಕರರೇ ಗುರೂಜಿ ಹಂತಕರಾಗಿದ್ದೇಕೆ ಎಂಬ ಪ್ರಶ್ನೆಗೆ ಮತ್ತೊಂದು ಉತ್ತರ ಸಿಕ್ಕಿದೆ. ಬಂಧಿತ ಆರೋಪಿಗಳು ಗುರೂಜಿ ಗಮನಕ್ಕೆ ಬಾರದಂತೆ ವಾಸ್ತು ಕನ್ಸಲ್ಟ್ ಮಾಡುತ್ತಿದ್ದರು ಎನ್ನಲಾಗಿದೆ. ಗ್ರಾಹಕರಿಂದ ಹಣ ವಸೂಲಿ ಮಾಡಿ ಗುರೂಜಿಗೆ ಕೊಡದೆ ತಮ್ಮ ಜೇಬಿಗಿಳಿಸುತ್ತಿದ್ದರು. ಇದರಿಂದ ಕೆರಳಿದ ಗುರೂಜಿ 15 ಮಂದಿಯನ್ನು ಕೆಲಸದಿಂದ ವಜಾ ಮಾಡಿದ್ದರು. ಬಳಿಕ ಗುರೂಜಿ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ದುಂಬಾಲು ಬಿದ್ದಿದ್ದರು. ಆದರೆ, ಸಂಸ್ಥೆಗೆ ಮೋಸ ಮಾಡಿದವರನ್ನು ಮತ್ತೆ ಸೇರಿಸಿಕೊಳ್ಳುವುದಿಲ್ಲ ಎಂದು ಚಂದ್ರಶೇಖರ್ ಗುರೂಜಿ ಹೇಳಿದ್ದರು ಎನ್ನಲಾಗಿದೆ. ಇದೇ ದ್ವೇಷಕ್ಕೆ ಚಂದ್ರಶೇಖರ್ ಗುರೂಜಿಯ ಹತ್ಯೆಗೆ ಸ್ಕೆಚ್ ಹಾಕಿದ್ದ ಹಂತಕರು, ಅನೇಕ ದಿನಗಳಿಂದ ಪ್ಲ್ಯಾನ್ ಮಾಡಿಯೇ ಚಂದ್ರಶೇಖರ್ ಗುರೂಜಿಯನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆರೋಪಿಗಳ ಕಣ್ಣು ತಿರುಗಿಸಿತ್ತಾ ಗುರೂಜಿ ಆಸ್ತಿ, ಆದಾಯ..? :
ಇನ್ನು ಆರೋಪಿ ವನಜಾಕ್ಷಿ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿದ್ದ ಗುರೂಜಿ, ವಾಸ್ತು ಹೇಳಿಯೇ ಸಾವಿರ ಕೋಟಿ ಒಡೆಯನಾಗಿದ್ದ. ಮುಂಬೈ, ಪುಣೆಯಲ್ಲಿ ಟೆಕ್‌ಪಾರ್ಕ್ ಕೂಡ ಹೊಂದಿದ್ದರು.ಅಲ್ಲದೆ, ವಾರ್ಷಿಕ 200 ಕೋಟಿ ವಹಿವಾಟು ನಡೆಸುತ್ತಿದ್ದರು ಎನ್ನಲಾಗಿದೆ. ಇದು ಆರೋಪಿಗಳನ್ನು ದುರಾಸೆಗೆ ಬೀಳಿಸಿತ್ತಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
ಹಂತಕರನ್ನು ಹಿಡಿದಿದ್ದೇ ರೋಚಕ:
ಇನ್ನು ಸಾವಿರ ಕೋಟಿ ಒಡೆಯನ ಹತ್ಯೆ ಮಾಡಿದ ಹಂತಕರನ್ನು ಪೊಲೀಸರು ಹಿಡಿದಿದ್ದೇ ರೋಚಕ.ಬಾಗಲಕೋಟೆ ಮೂಲಕ ಕೊಲೆಗಡುಕರಿಗೆ ಬಲೆ ಬೀಸಿದ ಖಾಕಿಪಡೆ, ಚೇಸ್ ಮಾಡಿ ಆರೋಪಿಗಳನ್ನು ಬಂಧಿಸಿತು. ಅಲ್ಲದೆ, ಗೃಹ ಸಚಿವ ಆರಗ ಜ್ಞಾನೇಂದ್ರ ಘಟನೆಯ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ಒಟ್ಟಾರೆ, ಅಜಾತಶತ್ರುವಾಗಿ ಸರಳ ವಾಸ್ತುವಿನಿಂದಲೇ ಸಾವಿರ ಕೋಟಿ ಒಡೆಯನಾಗಿದ್ದ ಗುರೂಜಿ ಕೊಲೆಯ ಸುತ್ತ ನಾನಾ ಅನುಮಾನಗಳು ಹುಟ್ಟಿಕೊಂಡಿದ್ದು ಪೊಲೀಸರ ತನಿಖೆಯಿಂದಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ.
ಬ್ಯೂರೋ ರಿಪೋರ್ಟ್ ಪವರ್ ಟಿವಿ