Wednesday, January 22, 2025

ಬಿಲ್ ಕೇಳಿದ್ದಕ್ಕೆ ಡಾಬಾ ಧ್ವಂಸಗೊಳಿಸಿ ಮಾಲೀಕನ ಮೇಲೆ ಹಲ್ಲೆ ಮಾಡಿದ PSI

ಗದಗ : ಅವರೆಲ್ಲಾ ಗೌರವಾನ್ವಿತ ಹುದ್ದೆಯಲ್ಲಿ ಕೆಲಸ ಮಾಡುವವರು. ಅಧಿಕಾರದ ಮದ ಹಾಗೂ ಮದ್ಯದ ಕಿಕ್ಕೇರಿದಾಗ ಏನು ಮಾಡೋದಕ್ಕು ಹಿಂಜರಿಯಲ್ಲ ಅನ್ನೊದಕ್ಕೆ ಇದೊಂದು ಸಾಕ್ಷಿ. ಊಟದ ಬಿಲ್ ಕೇಳಿದ್ದೆ ತಪ್ಪಾಯಿತು ಅನಿಸುತ್ತೆ. ಸಿನಿಮೀಯ ರೂಪದಲ್ಲಿ ಡಾಬಾ ಪೀಸ್ ಪೀಸ್ ಆಗಿದೆ.

ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಬೆವಿನಕಟ್ಟಿ ಬಳಿ ರಾತ್ರಿ ಪ್ರೊಫೆಷ್​ನರಿ ಪಿಎಸ್ಐ ಅರವಿಂದ ಅಂಗಡಿ, ಆರ್ಮಿ ಯುವಕ ಹನುಮಂತ ರೆವರಣ್ಣವರ್ ಹಾಗೂ ನಾಲ್ಕು ಜನ ಸ್ನೇಹಿತರು ಒಟ್ಟಾಗಿ ಡಾಬಾಗೆ ಊಟಕ್ಕೆ ತೆರಳಿದ್ದಾರೆ. ಶ್ರೀಶೈಲ ಕಳ್ಳಿಮಠ ಎಂಬುವರ ಡಾಬಾದಲ್ಲಿ ಕಂಠ ಪೂರ್ತಿ ಕುಡಿದು, ಹೊಟ್ಟೆ ಬಿರಿಯುವಂತೆ ಊಟ ಮಾಡಿದ್ದಾರೆ. ನಂತರ ಊಟದ ಬಿಲ್ ಕೇಳಿದ್ದಕ್ಕೆ ನಾವು ಯಾರು ಅಂತ ತಿಳಿದಿಯಾ? ನಮ್ಮನ್ನೆ ಬಿಲ್ ಕೇಳ್ತಿಯಾ? ಅಂತ ಅಧಿಕಾರದ ಮದ ಹಾಗೂ ಕುಡಿದ ಅಮಲಿನಲ್ಲಿ ಗಲಾಟೆ ಮಾಡಿದ್ದಾರೆ. ನೂರು ರೂಪಾಯಿ ಕಡಿಮೆ ಕೊಡಿ. ಆದ್ರೆ ಸ್ವಲ್ಪನಾದ್ರೂ ಬಿಲ್ ಕೊಡಿ ಎಂದಿದ್ದಕ್ಕೆ ಬಾಟಲ್​ನಿಂದ ಮಾಲೀಕ ಶ್ರೀಶೈಲ ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆ. ಗಲಾಟೆ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅರವಿಂದ ಅಂಗಡಿ ಬಾಗಲಕೋಟೆ ನವನಗರ ಠಾಣೆಯಲ್ಲಿ ಪ್ರೊಫೆಷನರಿ ಪಿಎಸ್ಐ ಕೆಲಸ ಮಾಡ್ತಿದ್ದಾರೆ. ಇವರ ಜೊತೆ ಆರ್ಮಿ ಯುವಕ ಹಾಗೂ ಸ್ನೇಹಿತರು ಒಟ್ಟಾಗಿ ಇಂತಹ ಕೃತ್ಯ ಎಸಗಿದ್ದಾರೆ. ಡಾಬಾದಲ್ಲಿರುವ ಎಲ್ಲಾ ಪೀಠೋಪಕರಣಗಳನ್ನು ಒಡೆದುಹಾಕಿದ್ದಾರೆ. ಇದರಲ್ಲಿ ಓರ್ವ ಅಡುಗೆ ಮನೆಗೆ ನುಗ್ಗಿ ಗ್ಯಾಸ್ ಆನ್ ಮಾಡಿ ಬೆಂಕಿ ಹಚ್ಚಲು ಮುಂದಾಗಿದ್ದಾನೆ‌. ನಂತರ ಮತ್ತೊಬ್ಬ ಬಂದು ಅವನನ್ನು ಎಳೆದುಕೊಂಡು ಬಾರಿ ಅನಾಹುತ ತಪ್ಪಿಸಿದ್ದಾನೆ. ಇವರ ಅಟ್ಟಹಾಸಕ್ಕೆ ಅಂಗಡಿ ಮಾಲೀಕರು ಹಾಗೂ ಕಾರ್ಮಿಕರು ನಲುಗಿಹೋಗಿದ್ದಾರೆ.

ಪ್ರೊಫೆಷನಲ್ ಪಿಎಸ್ಐ ಅರವಿಂದ ಈ ಹಿಂದೆ ಕೂಡಾ 2 ಬಾರಿ ಇದೇ ರೀತಿ ಗಲಾಟೆ ಮಾಡಿ ಹೋಗಿದ್ದನಂತೆ. ಈಗ 6 ಜನ ಸ್ನೇಹಿತರೊಂದಿಗೆ ಮತ್ತೆ ದರ್ಪ ತೋರಿದ್ದಾನೆ. ಈ ಎಲ್ಲಾ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ನಲ್ಲಿ ಅಧಿಕಾರದ ಅಮಲಿನಲ್ಲಿ ಹುಚ್ಚಾಟ ಮಾಡುವ ಇಂತವರಿಗೆ ತಕ್ಕ ಶಿಕ್ಷೆ ಆಗಲಿ ಅನ್ನೋದು ಸಾರ್ವಜನಿಕರ ಆಶಯವಾಗಿದೆ.

ಮಹಲಿಂಗೇಶ್ ಹಿರೇಮಠ, ಪವರ್ ಟಿವಿ, ಗದಗ

RELATED ARTICLES

Related Articles

TRENDING ARTICLES