ಬೆಂಗಳೂರು: ಎಡಿಜಿಪಿ ಅಮೃತ್ ಪೌಲ್ ಬಂಧನದ ನಂತ್ರ ರಾಜಕಾರಣಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ಈಗಾಗಲೇ ಸಚಿವರೊಬ್ಬರ ಮೇಲೆ ಆರೋಪ ಎದುರಾಗಿತ್ತು. ಆದ್ರೆ, ಇದೇ ಮೊದಲ ಬಾರಿಗೆ ಮಾಜಿ ಸಿಎಂ ಪುತ್ರನ ಮೇಲೆ ಕಾಂಗ್ರೆಸ್ ಬೆರಳು ತೋರಿಸಿದೆ. ಹಾಗಾದ್ರೆ ಆ ಮಾಜಿ ಸಿಎಂ ಪುತ್ರ ಯಾರು..? ಈ ಪ್ರಕರಣದಲ್ಲಿ ಸಚಿವರಿಗೂ ಸಂಕಷ್ಟ ಶುರುವಾಗುತ್ತಾ..?
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯ ವೇಗ ತಟ್ಹಸ್ಥವಾಗಿತ್ತು. ಯಾವಾಗ ಹೈಕೋರ್ಟ್ ಚಾಟಿ ಬೀಸ್ತೋ ಆಗ ಸಿಐಡಿ ತಂಡ ಮತ್ತೆ ಎಚ್ಚೆತ್ತುಕೊಳ್ತು. ಇಲ್ಲಿಯವರೆಗೆ ಕೇವಲ ಮರದ ರೆಂಬೆಕೊಂಬೆಗಳನ್ನಷ್ಟೇ ಜಾಲಾಡಿ ಸುಮ್ಮನಾಗಿದ್ದ ಸಿಐಡಿ ಟೀಂ ಸೋಮವಾರ ಅಕ್ರಮ ಮರದ ಬುಡಕ್ಕೆ ಕೈ ಹಾಕಿತ್ತು. ಸೂತ್ರದಾರ ಎಡಿಜಿಪಿ ಅಮೃತ್ ಪೌಲ್‌ರನ್ನು ಅರೆಸ್ಟ್ ಮಾಡಿತ್ತು. ಇದ್ರ ನಂತರ ನಾವು ಸಿಕ್ಕಿಬೀಳ್ತೇವೇನೋ ಎಂಬ ಭಯ ಕೆಲವರಲ್ಲಿ ಶುರುವಾಗಿದೆ. ಅದಕ್ಕೆ ಪೂರಕವಾಗಿ ಇದೇ ಮೊದಲ ಬಾರಿಗೆ ಅಕ್ರಮದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿದ್ದಾರೆ.
ಅಕ್ರಮದಲ್ಲಿ ಮಾಜಿ ಸಿಎಂ ಪುತ್ರ ವಿಜಯೇಂದ್ರರ ಹೆಸರು ಕೇಳಿಬರ್ತಿದೆ.. ಕೆಪಿಸಿಸಿ ಕಚೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಪ್ರಕರಣದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ಸಿದ್ದರಾಮಯ್ಯ, ಅಕ್ರಮ ನೇಮಕಾತಿಯಲ್ಲಿ ಮಾಜಿ ಸಿಎಂ ಪುತ್ರ ವಿಜಯೇಂದ್ರ ಪಾತ್ರವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.ಇದಕ್ಕೆ ಬೇಕಾದ ಮಾಹಿತಿ ತಮ್ಮಲ್ಲಿರುವ ಬಗ್ಗೆ ತಿಳಿಸಿದ್ದಾರೆ.. ‘ಕೈ’ ನಾಯಕರ ಈ ಸ್ಫೋಟಕ ಹೇಳಿಕೆಯಿಂದ ಬಿಜೆಪಿ ನಾಯಕರಲ್ಲಿ ಢವಢವ ಶುರುವಾಗಿದೆ.
ಹಗರಣದಲ್ಲಿ ಬಿ.ವೈ.ವಿಜಯೇಂದ್ರ ಪಾತ್ರವಿದ್ಯಾ..? :
ಇನ್ನು ಹಗರಣದಲ್ಲಿ ಉನ್ನತ ಶಿಕ್ಷಣ ಸಚಿವರ ಹೆಸರು ಕೇಳಿ ಬಂದಿತ್ತು.. ಮೊದಲ ರ್ಯಾಂಕ್ ಅಭ್ಯರ್ಥಿಗಳಿಂದ ಸಚಿವ ಅಶ್ವತ್ಥನಾರಾಯಣ್ ಸಹೋದರ ಹಣ ಪಡೆದಿರುವ ಆರೋಪ ಎದುರಾಗಿತ್ತು.. ಆದ್ರೆ, ಸಣ್ಣಪುಟ್ಟವರನ್ನು ಹಿಡಿದು ದೊಡ್ಡವರನ್ನು ರಕ್ಷಣೆ ಮಾಡ್ತಿದ್ದಾರೆಂಬ ಅನುಮಾನಗಳು ವ್ಯಕ್ತವಾಗಿದ್ವು..ಆದ್ರೆ, ಎಡಿಜಿಪಿ ಬಂಧನದಿಂದ ಇದೀಗ ದೊಡ್ಡವರ ಕೈವಾಡದ ಬಗ್ಗೆಯೂ ಮಾಹಿತಿ ಜಾಲಾಡಲಾಗ್ತಿದೆ. ಅಶ್ವತ್ಥನಾರಾಯಣ್ ಹಾಗೂ ವಿಜಯೇಂದ್ರರ ಹೆಸರನ್ನು ಬಹಿರಂಗವಾಗಿಯೇ ಕೈ ನಾಯಕರು ಮುನ್ನೆಲೆಗೆ ತಂದಿದ್ದಾರೆ. ತನಿಖೆಯನ್ನು ವಸ್ತುನಿಷ್ಠವಾಗಿ ನಡೆಸಿದ್ರೆ ಇಬ್ಬರೂ ಸಿಕ್ಕಿಬೀಳ್ತಾರೆಂದು ಸಿದ್ದು, ಡಿಕೆಶಿ ಹೇಳ್ತಿದ್ದಾರೆ.
ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶವೇನು..? :
ಇನ್ನು ದೊಡ್ಡದೊಡ್ಡವರೇ ಪ್ರಕರಣದಲ್ಲಿ ಭಾಗಿಯಾಗಿರೋದು ಹೊರ ಬೀಳ್ತಿರೋದ್ರಿಂದ ನ್ಯಾಯಾಧೀಶರಿಗೂ ಥ್ರೆಟ್ ಶುರುವಾಗಿದೆಯಂತೆ.. ಈ ಬಗ್ಗೆ ನಿಷ್ಪಕ್ಷಪಾತವಾಗಿ ನ್ಯಾಯ ನೀಡುವ ನ್ಯಾಯಾಧೀಶರಿಗೂ ಇವರು ಬೆದರಿಕೆ ಹಾಕ್ತಾರೆ. ಪ್ರಕರಣವನ್ನ ಮುಚ್ಚೋಕೆ ನೋಡ್ತಾರೆ. ಆದ್ರೆ, ನ್ಯಾಯಾಧೀಶರು ಇದಕ್ಕೆಲ್ಲಾ ಹೆದರದೆ ಧೈರ್ಯವಾಗಿ ನ್ಯಾಯ ತೀರ್ಮಾನ ಮಾಡಿದ್ದಾರೆ. ಹಾಗಾಗಿ ನ್ಯಾಯಾಧೀಶರಿಗೆ ರಕ್ಷಣೆಯನ್ನು ಒದಗಿಸಬೇಕು ಅಂತ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ನಾಯಕರ ಆರೋಪಕ್ಕೆ ಬಿಜೆಪಿ ತಿರುಗೇಟು :
ಕೈನಾಯಕರ ಆರೋಪಕ್ಕೆ ಸಿಎಂ ಹಾಗೂ ಗೃಹ ಸಚಿವರು ತಿರುಗೇಟು ನೀಡಿದ್ರು.. ಅವರ ಕಾಲದಲ್ಲೂ ಸಾಕಷ್ಟು ಅಪಾದನೆಗಳು ಬಂದಿದ್ವು ಆಗ ಯಾಕೆ ಅವರು ಮುಚ್ಚಿಹಾಕಿದ್ರು.. ನಾವು ನ್ಯಾಯ ಸಮ್ಮತವಾಗಿರೋದ್ರಿಂದ ಪ್ರಕರಣದ ತನಿಖೆಯನ್ನ ಮಾಡಿಸ್ತಿದ್ದೇವೆ ಅಂತ ಸಮರ್ಥಿಸಿಕೊಂಡಿದ್ದಾರೆ.. ಟೀಕೆ ಮಾಡುವುದನ್ನು ಬಿಟ್ಟು ದಾಖಲೆಗಳಿದ್ದರೆ ಕೊಡಲಿ. ನಾವು ಕ್ರಮ ಜರುಗಿಸ್ತೇವೆ. ಆದ್ರೆ, ಚಾರಿತ್ರ್ಯ ಹರಣ ಮಾಡಿ ರಾಜಕಾರಣ ಮಾಡಲು ಹೀಗೆ ಆರೋಪ ಮಾಡ್ತಿದ್ದಾರೆ ಎಂದು ಸಚಿವರು ಹೇಳಿದ್ರು..
ಒಟ್ನಲ್ಲಿ ಪಿಎಸ್ಐ ಪ್ರಕರಣ ಇದೀಗ ರಾಜಕೀಯ ಸ್ವರೂಪ ಪಡೆದಿದ್ದು, ಇದು ಇನ್ನು ಯಾವ ಯಾವ ಅಯಾಮ ಪಡೆಯುತ್ತೆ ಅನ್ನೋದನ್ನ ಕಾದು ನೋಡಬೇಕು..
ರಾಘವೇಂದ್ರ ವಿಎನ್ ಜೊತೆ ಬಸವರಾಜು ಹಾಗೂ ರೂಪೇಶ್ ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು.