Wednesday, January 22, 2025

ಜೆಡಿಎಸ್ ಹಾಲಿ, ಮಾಜಿ ಶಾಸಕರಿಗೆ ಕಾಂಗ್ರೆಸ್ ಗಾಳ..?

ಬೆಂಗಳೂರು : ಸದ್ಯ ರಾಜ್ಯದಲ್ಲಿ ಅಧಿಕಾರ ಇಲ್ಲದೆ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯವಾಗಿ ಅಧಿಕಾರದ ಗದ್ದುಗೆ ಹಿಡಿಯಬೇಕು ಅಂತ ಹಲವು ರಣತಂತ್ರಗಳನ್ನು ಹೆಣೆಯುತ್ತಿದೆ. ಬೇರೆ ಪಕ್ಷಗಳ ಶಾಸಕರು ಮತ್ತು‌ ಮಾಜಿ ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ತಂತ್ರ ಮಾಡ್ತಿದೆ ಎನ್ನಲಾಗಿದೆ. ಈ ಮಧ್ಯೆ, ಹಳೆ ಮೈಸೂರು ಭಾಗದ ಅರ್ಧ ಡಜನ್‌ಗೂ ಹೆಚ್ಚು ಶಾಸಕರು ಕಾಂಗ್ರೆಸ್ ಪಡೆ ಸೇರಲೂ ತುದಿಗಾಲಲ್ಲಿ ನಿಂತಿದ್ದಾರೆ ಎನ್ನಲಾಗ್ತಿದೆ. ಇದರ ಜೊತೆಗೆ ಮಾಜಿ ಶಾಸಕರನ್ನು ಸೆಳೆದು ಪಕ್ಷ ಸಂಘಟನೆ ಬಲ ಪಡಿಸುವ ಕೆಲಸ ಆರಂಭವಾಗಿದೆ. ದೆಹಲಿಯಿಂದ ಸಿದ್ದರಾಮಯ್ಯ ಮತ್ತು ಡಿಕೆಶಿ ವಾಪಸ್‌ ಬಂದ ಬಳಿಕ ಪಕ್ಷಕ್ಕೆ ಸೆಳೆಯುವ ಕೆಲಸ ಭರ್ಜರಿ ಆರಂಭ ಪಡೆದಿದೆ. ಆದ್ರೆ, ಇದರ ಜೊತೆಗೆ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನಮಾನ ಸಿಗದೆ ಅನ್ಯಪಕ್ಷಗಳತ್ತ ಹೆಜ್ಜೆಹಾಕುತ್ತಿರುವ ನಾಯಕರ ಪಟ್ಟಿ ಕೂಡ ದೊಡ್ಡದಾಗುತ್ತಿದೆ.

ಇನ್ನೂ ಕಾಂಗ್ರೆಸ್ ಪಕ್ಷದತ್ತ ಹಾಲಿ ಮಾಜಿ ಶಾಸಕರು ಬರ್ತಾ ಇದ್ರೆ, ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಅನ್ಯ ಪಕ್ಷಗಳತ್ತ‌ ಮುಖ ಮಾಡಿದ್ದಾರೆ. ಅದರಲ್ಲೂ ಏಳು ಬಾರಿ ಕಾಂಗ್ರೆಸ್‌ನಿಂದ ಸಂಸದರಾಗಿ, ಕೇಂದ್ರದಲ್ಲಿ ಮಂತ್ರಿಯಾಗಿದ್ದ ಕೆ.ಹೆಚ್.ಮುನಿಯಪ್ಪ ಅಸಮಧಾನಗೊಂಡಿದ್ದಾರೆ. ಕಳದೆ ಬಾರಿ ಲೋಕಸಭಾ ಚುನಾವಣೆ ಸೋಲಿಗೆ ಕಾರಣವಾದ ಕೊತ್ತನೂರು ಮಂಜುನಾಥ್ ಮತ್ತು ಎಂ.ಸಿ ಸುಧಾಕರ್ ಅವರನ್ನು ಒಂದು ಮಾತು ಕೇಳದೆ ಸೇರಿಸಿಕೊಂಡಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಲ್ಲದೆ ಜೆಡಿಎಸ್ ಪಕ್ಷದ ಕಡೆ ಕೂಡ ಮುಖ‌ ಮಾಡಿ, ದೇವೇಗೌಡರ ಜೊತೆಗೂ‌ ಮಾತುಕತೆ ನಡೆಸಿದ್ದಾರೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಇದರ ಜೊತೆಗೆ ಪರಿಷತ್ ಸ್ಥಾನ ಸಿಗದೆ ಅಸಮಧಾನಗೊಂಡಿರುವ ಎಂ.ಆರ್ ಸೀತಾರಾಂ ಕೂಡ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವ ಪ್ರಯತ್ನ ನಡೆಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಉಳಿಸಿಕೊಳ್ಳುವಂತೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ರು.

ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎರಡು ತರಹದ ಬೆಳವಣಿಗೆಗಳು ನಡೆಯುತ್ತಿವೆ. ಅನ್ಯ ಪಕ್ಷಗಳಿಂದ ಹಾಲಿ ಮಾಜಿ ಶಾಸಕರು ಬರುತ್ತಿದ್ದಾರೆ. ಮತ್ತೊಂದು ಕಡೆ ಪಕ್ಷ ಕಟ್ಟಿದ ಹಿರಿಯ ನಾಯಕರು ಕಾಂಗ್ರೆಸ್ ತೊರೆಯಲು ಚಿಂತನೆ ನಡೆಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷದ ಸದ್ಯದ ಬೆಳವಣಿಗಳು ಬಾರಿ ಕುತೂಹಲ ಮುಡಿಸಿವೆ.

ಬಸವರಾಜ್ ಚರಂತಿಮಠ್ ಪೊಲಿಟಿಕಲ್ ಬ್ಯೂರೊ ಪವರ್ ಟಿವಿ ಬೆಂಗಳೂರು.

RELATED ARTICLES

Related Articles

TRENDING ARTICLES