Monday, January 27, 2025

ಭಾರೀ ಮಳೆಗೆ ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿ

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಭಾರೀ ಮಳೆಯಿಂದಾಗಿ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅವಾಂತರಗಳೇ ಸೃಷ್ಟಿಯಾಗಿದೆ. ಹಲವೆಡೆ ಮರಗಳು ಧರೆಗುರುಳಿ ಜನರು ಪರದಾಡುವಂತಾಗಿದೆ. ಜಿಲ್ಲೆಯ ನದಿಗಳು ಅಪಾಯದ ಮಟ್ಟಮೀರಿ ಹರಿಯುತ್ತಿದ್ದು, ಹಳ್ಳ ಕೊಳ್ಳಗಳು ಭರ್ತಿಯಾಗಿವೆ. ಹೊಸಪೇಟೆ ಗ್ರಾಮದಲ್ಲಿ 1ನೇ ತರಗತಿಯ ಬಾಲಕಿ ಹಳ್ಳದಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ. ಸುಪ್ರಿತಾ ಎಂಬ ಬಾಲಕಿ ತನ್ನ ಅಣ್ಣನ ಜೊತೆ ಶಾಲೆ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಕಾಲು ಕೆಸರಾಯಿತು ಎಂದು ಹಳ್ಳದಲ್ಲಿ ಕಾಲು ತೊಳೆದುಕೊಳ್ಳಲು ಹೋಗಿದ್ದರು. ಆ ವೇಳೆ ಸುಪ್ರಿತಾ ನೀರಲ್ಲಿ ಕೊಚ್ಚಿ ಹೋಗಿದ್ದು, ಅಗ್ನಿಶಾಮಕ ಸಿಬ್ಬಂದಿಯ ತಂಡ ಶೋಧ ಕಾರ್ಯ ನಡೆಸುತ್ತಿದೆ.

ಇನ್ನು ಉತ್ತರಕನ್ನಡದಲ್ಲೂ ಭಾರಿ ಮಳೆ ಸುರಿಯುತ್ತಿದ್ದು, ಕಾರವಾರ ತಾಲೂಕಿನ ಅರಗಾ ಗ್ರಾಮದಲ್ಲಿ 30ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಹೊನ್ನಾವರ ತಾಲೂಕಿನ ಹಳದೀಪುರದ ಬಗ್ರಾಣಿ ಕ್ರಾಸ್​ನಲ್ಲಿ ಬೃಹದಾಕಾರದ ಅಶ್ವಥ ಮರವೊಂದು ಮನೆಯ ಮೇಲೆ ಬಿದ್ದು 6 ಮಂದಿ ಗಾಯಗೊಂಡಿದ್ದಾರೆ. ಗಂಗಾವಳಿ ಹಾಗೂ ಅಘನಾಶಿನಿ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಜನ್ರು ಆತಂಕದಲ್ಲಿದ್ದಾರೆ. ಜಿಲ್ಲೆಯಲ್ಲಿ ಇನ್ನೂ 3-4 ದಿನಗಳ ಕಾಲ ಗಾಳಿ ಸಹಿತ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜುಲೈ 8ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕರಾವಳಿಯಲ್ಲಿ ವರುಣನ ಅಬ್ಬರ ಮುಂದುವರೆದಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಮುಂಜಾಗ್ರತೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ, ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗಿದ್ದರಿಂದ ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಪ್ರವಾಹ ಸ್ಥಿತಿ ಎದುರಾಗಿದೆ. ಕುಮಾರಧಾರ, ನೇತ್ರಾವತಿ ನದಿಗಳು ತುಂಬಿ ಹರಿಯುತ್ತಿದ್ದು, ನದಿಪಾತ್ರದ ಮನೆಗಳಿಗೆ ನೀರು ನುಗ್ಗಿದೆ. ಕುಕ್ಕೆ ಸುಬ್ರಹ್ಮಣ್ಯ ಬಳಿಯ ಸ್ನಾನಘಟ್ಟ ಮುಳುಗಡೆಯಾಗಿದ್ದು, ಅಪಾಯದ ಮಟ್ಟ ತಲುಪಿದೆ. ಇತ್ತ ಕೊಡಗಿನಲ್ಲಿ ಬಂಡೆಗಳು ರಸ್ತೆಗೆ ಉರುಳಿ ಆತಂಕ ಹೆಚ್ಚಿಸಿದೆ. ಭಾಗಮಂಡಲ – ತಲಕಾವೇರಿ ರಸ್ತೆ ಮಾರ್ಗದಲ್ಲಿ ಜನರು ಜೀವ ಕೈಯಲ್ಲಿ ಹಿಡಿಸು ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಇನ್ನು ನೆರೆಯ ಮಹಾರಾಷ್ಟ್ರದ ಕೊಂಕಣ ಭಾಗದಲ್ಲೂ ಧಾರಾಕಾರ ಮಳೆಯಾಗಿದೆ. ಚಿಕ್ಕೋಡಿ ತಾಲೂಕಿನ ಕೃಷ್ಣಾ, ದೂದಗಂಗಾ, ವೇದಗಂಗಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಲವು ಬ್ಯಾರೇಜಗಳು ಜಲವೃತವಾಗಿದೆ. ಕೊಯ್ನಾ ಡ್ಯಾಂನಲ್ಲಿ 2 ಟಿಎಂಸಿ ನೀರು ಸಂಗ್ರಹವಾಗಿದ್ದು, ಪ್ರವಾಹದ ಆತಂಕ ಎದುರಾಗಿದೆ.

ಬ್ಯೂರೋ ರಿಪೋರ್ಟ್​​​​ ಪವರ್​​​ ಟಿವಿ

RELATED ARTICLES

Related Articles

TRENDING ARTICLES