ಬೆಂಗಳೂರು : ಶಿಕ್ಷಕರು ಮಕ್ಕಳ ಮೇಲೆ ಹಲ್ಲೆ ನಡೆಸಬಾರದು ಎಂದು ಈಗಾಗಲೇ ಆದೇಶ ಇದೆ. ಆದ್ರೂ ಅದನ್ನು ಗಾಳಿಗೆ ತೂರಿ ಮಕ್ಕಳಿಗೆ ಮನಬಂದಂತೆ ಥಳಿಸಿರುವ ಘಟನೆ ಮೂಡಲಪಾಳ್ಯದ ಆರ್ಕಿಡ್ ಬ್ಲೂ ಬೆಲ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದಿದೆ. RTE ಅಡಿ 6 ನೇ ತರಗತಿ ಓದುತ್ತಿರುವ ತನ್ಮಯ್ ಎಂಬ ಬಾಲಕನ ಮೇಲೆ ಶುಕ್ರವಾರ ಗಣಿತ ಶಿಕ್ಷಕ ಮಾದೇಶ್ ನೋಟ್ ಬುಕ್ ತಂದಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.ಮಗು ಆಸ್ಪತ್ರೆಗೆ ದಾಖಲಾಗುವಂತೆ ದನಕ್ಕೆ ಹೊಡೆದಂತೆ ಹೊಡೆದಿದ್ದಾನೆ.
ಇನ್ನು ವಿದ್ಯಾರ್ಥಿ ತನ್ಮಯ್ ಪೋಷಕರು ಕಡುಬಡವರಾಗಿದ್ದು, ಕನಕನಗರದಲ್ಲಿ ವಾಸವಾಗಿದ್ದಾರೆ.ವಿದ್ಯಾರ್ಥಿಯ ತಂದೆ ಬಸ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಾರೆ, ತಾಯಿ ಮನೆಕೆಲಸ ಮಾಡಿ ಮಗುವನ್ನ ಸಾಕುತ್ತಿದ್ದಾರೆ. ಎಲ್ಲರಂತೆ ನಮ್ಮ ಮಗುನೂ ಪ್ರತಿಷ್ಠಿತ ಶಾಲೆಯಲ್ಲಿ ಓದಲಿ ಎಂದು ಶಾಲೆಗೆ ಸೇರಿಸಿದ್ದಾರೆ.ಆದ್ರೆ,ಇಲ್ಲಿ ಶಾಲೆಯ ಆಡಳಿತ ಮಂಡಳಿಯವರು ಮಗುವಿನ ಜೊತೆ ತುಚ್ಛವಾಗಿ ನಡೆದುಕೊಂಡಿದ್ದಾರೆ.ಆದ್ರಲ್ಲೂ ಗಣಿತ ಶಿಕ್ಷಕ ಮಾದೇಶ್ ನಿತ್ಯ ಸ್ಲಂ ಹುಡುಗ ಅಂತಾ ನಿಂದನೆ ಮಾಡುವುದಲ್ಲದೇ, ಮಗುವಿಗೆ ಅವಮಾನವಾಗುವಂತೆ ನಡೆದುಕೊಂಡಿದ್ದಾನೆ. ಸಲ್ಲದಕ್ಕೆ ಶುಕ್ರವಾರ ನೋಟ್ಸ್ ತರ್ಲಿಲ್ಲ ಅನ್ನುವುದನ್ನೇ ನೆಪ ಮಾಡಿಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾನೆಂದು ಪೋಷಕರು ಕಣ್ಣೀರಿಟ್ಟಿದ್ದಾರೆ.
ಇನ್ನು ತನ್ಮಯ್ ಬಾಯಲ್ಲೇ ಕೇಳಿದ್ರಲ್ಲ ಯಾವ ರೀತಿ ಶಾಲೆಯ ಶಿಕ್ಷಕ ನಡೆದುಕೊಂಡಿದ್ದಾನೆಂದು.ಎಲ್ಲ ಮಕ್ಕಳನ್ನ ಒಂದು ರೀತಿ ನೋಡಿಕೊಂಡ್ರೆ,ಆರ್ ಟಿ ಇ ಅಡಿಯಲ್ಲಿ ಓದುವ ಮಕ್ಕಳನ್ನೇ ಮತ್ತೊಂದು ರೀತಿಯಲ್ಲಿ ನೋಡಿಕೊಳ್ತಾರಂತೆ. ಆದ್ರಲ್ಲೂ ತನ್ಮಯ್ ನ್ನ ಟಾರ್ಗೆಟ್ ಮಾಡಿ ನಿತ್ಯ ಹಿಂಸೆ ಮಾಡ್ತಾರಂತೆ, ಈ ಹಿಂದೆಯೂ ತನ್ಮಯ್‌ಗೆ ಗಣಿತ ಶಿಕ್ಷಕ ಥಳಿಸಿದ್ರಂತೆ, ಇದು ಮೂರನೇ ಬಾರಿಗೆ ವಿದ್ಯಾರ್ಥಿಗೆ ಥಳಿಸಿರುವುದು. ಒಂದು ಕಿವಿ ಸರಿಯಾಗಿ ಕೇಳ್ತಿಲ್ಲ,ಕಣ್ಣು ಸರಿಯಾಗಿ ಕಾಣ್ತಿಲ್ಲ ಆ ರೀತಿ ಅಮಾನುಷವಾಗಿ ಶಿಕ್ಷಕ ಮಾದೇಶ್ ನಡೆದುಕೊಂಡಿದ್ದಾನೆ.ಹೀಗಾಗಿ ಶಿಕ್ಷಕನ ಮೇಲೆ ಪೋಷಕರು ಕಿಡಿ ಕಾರ್ತಿದ್ದಾರೆ.
ಇನ್ನು ಇತ್ತ ಶಾಲೆಯಲ್ಲಿ ವಿಚಾರಿಸಿದ್ರೆ ಅಲ್ಲಿ ಓದಿಸುವ ಪೋಷಕರಿಗೆ ಘಟನೆಯ ಬಗ್ಗೆ ಏನೂ ಗೊತ್ತಿಲ್ಲ. ಶಾಲೆಯಲ್ಲಿ ಆ ರೀತಿ ಯಾವ ಘಟನೆಯೂ ನಡೆಯುವುದಿಲ್ಲ. ನಮ್ಮ ಗಮನಕ್ಕೆ ಇನ್ನು ಇಂತಹ ಘಟನೆ ಬಂದಿಲ್ಲ ಅಂತಾರೆ. ಇತ್ತ ಶಾಲೆಯ ಅಧ್ಯಕ್ಷ ರಾಜೇಶ್ ಅವರನ್ನ ಕೇಳಿದ್ರೆ ಕಾನೂನು ಕ್ರಮ ಕೈಗೊಳ್ಳಲಿ.ನಾವು ಎಲ್ಲಾದಕ್ಕೂ ಬದ್ಧವಾಗಿದ್ದೇವೆ. ಮಗುವಿನ ಆಸ್ಪತ್ರೆಯ ಸಂಪೂರ್ಣ ಖರ್ಚುವೆಚ್ಚ ನಾವೇ ಭರಿಸುತ್ತೇವೆ. ಇದು ಆಗಿರುವುದು ಎಷ್ಟು ಸತ್ಯವೋ ಏನೋ ಗೊತ್ತಿಲ್ಲ ತನಿಖೆಯಾಗಲಿ ಆ ಮೇಲೆ ನಾವು ಕೂಡ ಕ್ರಮ ಕೈಗೊಳ್ತೇವೆ. ಇದು ಆಕಸ್ಮಿಕವಾಗಿ ಆಗಿರುವ ಘಟನೆಯೆಂದು ಹೇಳುವ ಮೂಲಕ ನುಣುಚಿಕೊಳ್ಳುವ ಯತ್ನವನ್ನು ನಡೆಸಿದ್ರು.
ಒಟ್ನಲ್ಲಿ ಶಿಕ್ಷಕರಿರುವುದು ಮಕ್ಕಳಿಗೆ ಬೋಧನೆ ಮಾಡುವುದಕ್ಕೆ. ಮಕ್ಕಳ ಜೀವ ತೆಗೆಯುವುದಕ್ಕೆ ಅಲ್ಲ. ಒಂದು ಮಗು ಅಂತನೂ ಲೆಕ್ಕಿಸದೇ ಈ ಮಟ್ಟಿಗೆ ಹಲ್ಲೆ ನಡೆಸುವುದು ಎಷ್ಟರ ಮಟ್ಟಿಗೆ ಸರಿ.ಇನ್ನಾದ್ರೂ ಶಾಲೆಯ ಆಡಳಿತ ಮಂಡಳಿಯವರು ಶಿಕ್ಷಕನ ಬಗ್ಗೆ ಸೂಕ್ತ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ತಾರಾ? ಕಾದು ನೋಡಬೇಕಿದೆ.
ಸ್ವಾತಿ ಪುಲಗಂಟಿ ಮೆಟ್ರೋ ಬ್ಯುರೋ ಬೆಂಗಳೂರು