ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಕೋಟೆಯಲ್ಲಿ ಎಸಿಬಿ ರಣಬೇಟೆಯಾಡಿದೆ. ಜಮೀರ್ ನಿವಾಸ ಸೇರಿ 5 ಕಡೆ ದಾಳಿ ನಡೆಸಿ, ಬೆಳ್ಳಂಬೆಳಗ್ಗೆ ಶಾಕ್ ನೀಡಿದೆ. ಕಾಂಗ್ರೆಸ್ ಶಾಸಕನಿಗೆ ಅಕ್ರಮ ಆಸ್ತಿಯೇ ಉರುಳಾಗುತ್ತಾ..? ಅಥವಾ ಮತ್ತೆ ಮತ್ತೆ ವಿಚಾರಣೆ ಎದುರಿಸಬೇಕಾಗುತ್ತಾ ಅನ್ನೋದೆ ಪ್ರಶ್ನೆಯಾಗಿದೆ.
ಆದಾಯಕ್ಕೂ ಹೆಚ್ಚು ಆಸ್ತಿ ಗಳಿಕೆ ಆರೋಪದಡಿ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ಗೆ ಎಸಿಬಿ ಶಾಕ್ ನೀಡಿದೆ. ಜಮೀರ್ ನಿವಾಸ ಸೇರಿ 5 ಕಡೆಗಳಲ್ಲಿ 40ಕ್ಕೂ ಹೆಚ್ಚು ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಕಳೆದ ವರ್ಷವೂ ಜಮೀರ್ ನಿವಾಸದ ಮೇಲೆ ಐಟಿ ದಾಳಿ ನಡೆಸಿತ್ತು. ಕೆಲ ದಿನಗಳ ಹಿಂದಷ್ಟೇ ಕೆ.ಜಿ.ಎಫ್ ಬಾಬು ಮನೆ ಮೇಲೆ ಇಡಿ ದಾಳಿ ನಡೆಸಿತ್ತು. ಈ ವೇಳೆ ಜಮೀರ್ ಜೊತೆಗಿನ ಹಣದ ವ್ಯವಹಾರದ ಮಾಹಿತಿ ಬಯಲಾಗಿತ್ತು. ಇದೀಗ ಇದರ ಮುಂದುವರಿದ ಭಾಗವಾಗಿ ಎಸಿಬಿ ದಾಳಿ ನಡೆಸಿರುವ ಸಾಧ್ಯತೆ ಇದೆ.
ಎಲ್ಲೆಲ್ಲಿ ಎಸಿಬಿ ದಾಳಿ..?
1. ಕಂಟೋನ್ಮೆಂಟ್ ರಸ್ತೆಯ ಶಾಸಕ ಜಮೀರ್ ಅಹಮದ್ ಖಾನ್ ನಿವಾಸ
2. ರಿಚ್ಮಂಡ್ ಟೌನ್ನ ಸಿಲ್ವರ್ ಓಕ್ ಅಪಾರ್ಟ್ಮೆಂಟ್
3. ಸದಾಶಿವನಗರದಲ್ಲಿರುವ ಅತಿಥಿ ಗೃಹ
4. ಬನಶಂಕರಿಯಲ್ಲಿರುವ ಜಿ.ಕೆ.ಅಸೋಸಿಯೇಟ್ಸ್ ಕಚೇರಿ
5. ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ
ಇನ್ನು ಎಸಿಬಿ ಅಧಿಕಾರಿಗಳು ಎಲ್ಲೆಲ್ಲಿ ದಾಳಿ ನಡೆಸಿದ್ರು ಅನ್ನೋದನ್ನ ನೋಡೋದಾದ್ರೆ, ಕಂಟೋನ್ಮೆಂಟ್ ರಸ್ತೆಯಲ್ಲಿರುವ ಜಮೀರ್ ಅಹಮದ್ ಖಾನ್ ನಿವಾಸ, ರಿಚ್ಮಂಡ್ ಟೌನ್ನ ಸಿಲ್ವರ್ ಓಕ್ ಅಪಾರ್ಟ್ಮೆಂಟ್, ಸದಾಶಿವನಗರದಲ್ಲಿರುವ ಅತಿಥಿ ಗೃಹ, ಬನಶಂಕರಿಯಲ್ಲಿರುವ ಜಿ.ಕೆ. ಅಸೋಸಿಯೇಟ್ಸ್ ಕಚೇರಿ ಹಾಗೂ ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿಯಲ್ಲಿ ಅಧಿಕಾರಿಗಳು ಸುಮಾರು ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ರು.
ಎಸಿಬಿ ದಾಳಿ ನಡೆಸಿದ ಬೆನ್ನಲ್ಲೇ ಜಮೀರ್ ಅಹಮದ್ ಅವರ ಬೆಂಬಲಿಗರು ನಿವಾಸದ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದ್ರು. ಸುಮಾರು 4 ರಿಂದ 5 ತಂಡಗಳು ಆಗಮಿಸಿ ಪ್ರತಿ ಬಾರಿ ಜಮೀರ್ ಅವರನ್ನು ಯಾಕೆ ಟಾರ್ಗೆಟ್ ಮಾಡ್ತೀರಾ..? ಬಿಜೆಪಿ ಸರ್ಕಾರದಲ್ಲಿ ಭ್ರಷ್ಟ ಅಧಿಕಾರಿಗಳು ಇಲ್ವಾ ಅಂತ ಆಕ್ರೋಶ ಹೊರಹಾಕಿದ್ರು.
ಇನ್ನು ಸಿಲ್ವರ್ ಓಕ್ ಅಪಾರ್ಟ್ಮೆಂಟ್ನಲ್ಲಿ ಕೂಡ ಶೋಧ ನಡೆಸಿತು. ಬ್ಯಾಂಕ್ ಖಾತೆಗಳು, ಚೆಕ್ ಬುಕ್ಗಳು, ದುಬಾರಿ ಬೆಲೆಯ ವಿದೇಶಿ ಮದ್ಯದ ಬಾಟಲ್ಗಳು ಪತ್ತೆಯಾಗಿವೆ ಎನ್ನಲಾಗಿದೆ. ಮತ್ತೊಂದು ಕಡೆ ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿಯಲ್ಲಿ ಎಸಿಬಿ ಶೋಧ ನಡೆಸಿದ್ದು, ನ್ಯಾಷನಲ್ ಟ್ರಾವೆಲ್ಸ್ ಮೂಲಕ ಆಗುತ್ತಿರುವ ಆರ್ಥಿಕ ವ್ಯವಹಾರಗಳ ಮಾಹಿತಿ ಕಲೆ ಹಾಕಿದ್ರು. ಹಲವು ಖಾಸಗಿ ಕಂಪೆನಿಗಳ ಜೊತೆ ಟೈಯಪ್ ಮಾಡಿಕೊಂಡಿರುವ ಬಗ್ಗೆ ಬಹಿರಂಗವಾಗಿದ್ದು, ನಿತ್ಯ ಟ್ರಾವೆಲ್ಸ್ ಮೂಲಕ ಆಗುತ್ತಿರುವ ಆದಾಯದ ಬಗ್ಗೆ ಸಿಬ್ಬಂದಿ ವರ್ಗದಿಂದ ಮಾಹಿತಿ ಕಲೆ ಹಾಕಿದ್ರು. ಇನ್ನು ದಾಳಿ ನಡುವೆಯೂ ಎಂದಿನಂತೆ ಗ್ರಾಹಕರಿಗೆ ಟಿಕೆಟ್ ಬುಕ್ ಮಾಡಲು ಅವಕಾಶ ಮಾಡಿಕೊಡಲಾಯಿತು.
ನ್ಯಾಷನಲ್ ಟ್ರಾವೆಲ್ಸ್ ಅಧೀನಕ್ಕೆ ಬರುವ ಬಸ್ಗಳ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದ ಅಧಿಕಾರಿಗಳಿಗೆ ಎಲ್ಲಾ ಬಸ್ಗಳು ಶಾಸಕ ಜಮೀರ್ ಹೆಸರಲ್ಲಿ ಇಲ್ಲ ಅನ್ನೋದು ತಿಳಿದುಬಂದಿದೆ. ಹಲವು ಬಸ್ಗಳು ಕುಟುಂಬಸ್ಥರ ಹೆಸರಿನಲ್ಲಿರುವುದಾಗಿ ಪರಿಶೀಲನೆ ವೇಳೆ ತಿಳಿದು ಬಂದಿದೆ. ಅಷ್ಟೇ ಅಲ್ಲದೆ 10ಕ್ಕೂ ಹೆಚ್ಚು ವಿವಿಧ ಬ್ಯಾಂಕ್ ಪಾಸ್ ಬುಕ್ಗಳು, ಚೆಕ್ ಬುಕ್ಗಳು ಲಭ್ಯವಾಗಿದ್ದು, ಯಾವ ಖಾತೆಗಳಲ್ಲಿ ಎಷ್ಟೆಷ್ಟು ಹಣ ಇದೆ ಎಂಬುದರ ಪರಿಶೀಲನೆ ನಡೆಸಲಾಗುತ್ತಿದೆ.
ಒಟ್ಟಿನಲ್ಲಿ ಜಮೀರ್ ಅಹಮದ್ ಖಾನ್ ಅವರ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಎಸಿಬಿ ಅಧಿಕಾರಿಗಳು, ಅವರ ಕೋಟೆಗೆ ಲಗ್ಗೆಯಿಟ್ಟು ಶಾಕ್ ನೀಡಿದ್ದಾರೆ. ಶಾಸಕ ಜಮೀರ್ ED, ACB ಇಕ್ಕಳದಲ್ಲಿ ಸಿಲುಕುತ್ತಾರಾ.. ? ಮತ್ತೆ ಮತ್ತೆ ವಿಚಾರಣೆ ಎದುರಿಸಬೇಕಾಗುತ್ತಾ..? ಕಾಂಗ್ರೆಸ್ ಶಾಸಕನಿಗೆ ಅಕ್ರಮ ಆಸ್ತಿಯೇ ಉರುಳಾಗುತ್ತಾ..? ಅನ್ನೋದು ಕಾದು ನೋಡಬೇಕಿದೆ.
ಸ್ವಾತಿ ಪುಲಗಂಟಿ ಮೆಟ್ರೋ ಬ್ಯೂರೋ ಬೆಂಗಳೂರು