ವಿಜಯಪುರ : ಒಣದ್ರಾಕ್ಷಿ ಖರೀದಿಸಿ ಬ್ಯಾಂಕ್ ಖಾತೆಗೆ ಹಣ ಹಾಕೋದಾಗಿ ನಂಬಿಸಿ ಗುಜರಾತ್ ಮತ್ತು ರಾಜಸ್ಥಾನ ಮೂಲದ ವ್ಯಾಪಾರಿಗಳು ವಂಚಿಸಿ ಪರಾರಿಯಾಗಿದ್ದಾರೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಿದ್ದಸಿರಿ ಕೋಲ್ಡ್ ಸ್ಟೋರೇಜ್‌ನ ಮ್ಯಾನೇಜರ್ ಸಂತೋಷ್ ಕುಮಾರ ಸಿದ್ರಾಮ ಗುಂಜಟಗಿ, ಜಾಕೀರ್ ಹಾಜಿಲಾಲ್ ಭಾಗವಾನ್, ತೌಫೀಕ್ ಸಲೀಂ ಹಾಗೂ ಅಬ್ದುಲ್ ಖಾದರ್, ಮಹ್ಮದ್ ಖಾಸೀಮ್ ಎಂಬುವವರಿಗೆ ವಂಚಕರು ಪಂಗನಾಮ ಹಾಕಿ ಎಸ್ಕೇಪ್ ಆಗಿದ್ದಾರೆ. ಹೀಗಾಗಿ ವ್ಯಾಪಾರಿಗಳು ಆರೋಪಿಗಳ ವಿರುದ್ಧ ವಿಜಯಪುರ ನಗರದ ಎಂಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇನ್ನೂ ಗುಜರಾತ್ ಮತ್ತು ರಾಜಸ್ಥಾನ್ ಮೂಲದ ಕಮಲಕುಮಾರ ಸೋಹನಲಾಲ್, ಕೃನಾಲಕುಮಾರ ಮಹೇಂದ್ರಕುಮಾರ ಪಟೇಲ, ನೀಲ ದಿನೇಶ್ ಬಾಯಿ ಪಟೇಲ ಸೇರಿದಂತೆ 11 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಸಿದ್ದಸಿರಿ ಸಂಸ್ಥೆಯ ಸಿದ್ದಸಿರಿ ಕೋಲ್ಡ್ ಸ್ಟೋರೇಜ್‌ನಿಂದ 20 ಲಕ್ಷಕ್ಕೂ ಅಧಿಕ ಮೌಲ್ಯದ 10.423 ಟನ್, ಜಾಕೀರ್ ಹಾಜಿಲಾಲ್ ಭಾಗವಾನ್ ಎಂಬುವರಿಂದ ಒಟ್ಟು 21,59,598 ರೂ.ಮೌಲ್ಯದ 11.54 ಟನ್, ತೌಫಿಕ್ ಅಂಗಡಿ ಅವರಿಂದ 24,29,152 ರೂ. ಮೌಲ್ಯದ 12.755 ಟನ್ ತೂಕದ ಒಣ ದ್ರಾಕ್ಷಿ ಹಾಗೂ ಅಬ್ದುಲ್‌ಖಾದರ್ ಮಹ್ಮದ್ ಅವರಿಂದ 18,91,451 ರೂ.ಮೌಲ್ಯದ 9.440 ಟನ್ ಒಣದ್ರಾಕ್ಷಿ ಖರೀದಿಸಿದ್ದಾರೆ.
ಬೇರೆ ಬೇರೆ ದಿನಗಳಲ್ಲಿ ಒಣದ್ರಾಕ್ಷಿ ಖರೀದಿಸಲಾಗಿದ್ದು, ಒಟ್ಟು 85 ಲಕ್ಷ ರೂಪಾಯಿ ಪಾವತಿಸಬೇಕಿದೆ.
ವಂಚನೆಗೊಳಗಾದ ವ್ಯಾಪಾರಸ್ಥರು ರೈತರ ಬಳಿ ಒಣ ದ್ರಾಕ್ಷಿ ಖರೀದಿಸಿದ್ದು, ರೈತರಿಗೂ ಹಣ ಕೊಡುವುದಿದೆ ಎಂದು ತಿಳಿದು ಬಂದಿದೆ. ಇನ್ನು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಡಿ. ಆನಂದಕುಮಾರ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪೊಲೀಸ್ ಟೀಂ ರಚಿಸಿದ್ದು, ಖಾಕಿ ಟೀಂ ಕಾರ್ಯ ಪ್ರವೃತ್ತವಾಗಿದ್ದು, ಗುಜರಾತ್ನ ಅಹ್ಮದಾಬಾದ್ಗೆ ತೆರಳಿ ಒಣ ದ್ರಾಕ್ಷಿ ಸೀಜ್ ಮಾಡಿದ್ದಾರೆ. ಜೊತೆಗೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇನ್ನು ಈ ಹಿಂದೆಯೂ ಈ ರೀತಿ ವಂಚನೆ ಪ್ರಕರಣ ನಡೆದಿವೆ. ಆದ್ರೆ ಯಾರು ದೂರು ಕೊಟ್ಟಿರಲಿಲ್ಲ. ಇದೀಗ ದೂರು ದಾಖಲಾಗಿದ್ದು, ಪ್ರಕರಣವನ್ನು ರೈತರ ಹಿತದೃಷ್ಟಿಯಿಂದ ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ.
ಸುನೀಲ್ ಭಾಸ್ಕರ್, ಪವರ ಟಿವಿ ವಿಜಯಪುರ.