Friday, November 22, 2024

ಕೊಡಗಿನ ಆಹಾರದಲ್ಲಿದೆ ಆರೋಗ್ಯದ ಗುಟ್ಟು

ಕೊಡಗು ಕರ್ನಾಟಕದ ಕಾಶ್ಮೀರ. ಕೊಡಗಿನವರು ಆಚಾರ-ವಿಚಾರಗಳಲ್ಲಿ, ಹಬ್ಬ ಹರಿ ದಿನಗಳಲ್ಲಿ, ಉಡುಗೆ-ತೊಡುಗೆಯಲ್ಲಿ ತಮ್ಮದೆ ಆದ ಸಂಸ್ಕತಿಯನ್ನು ಪಾಲಿಸುತ್ತಾರೆ. ಅದು ಅವರ ಅಡುಗೆಯಲ್ಲಿ ಸಹ ಎದ್ದು ಕಾಣುತ್ತೆ. ಕೊಡಗಿನ ವಿಶೇಷ ಆಹಾರ ಮಾಂಸದ ಊಟ ಮತ್ತು ಮದ್ಯ ಆಗಿದ್ದರೂ ಇದಲ್ಲದೆ ಇನ್ನಿತರ ವಿಶೇಷ ಅಡುಗೆಯಲ್ಲಿ ಸಹ ನಿಸ್ಸೀಮರು.

ಇನ್ನು ಮಳೆಗಾಲ ಎಂದರೆ ಕೊಡಗಿನ ಮಟ್ಟಿಗೆ ವಿಭಿನ್ನ ಅನುಭವ. ಧಾರಾಕಾರವಾಗಿ ಸುರಿಯುವ ಮಳೆಯಲ್ಲಿಯೇ ಕೆಲಸ ಮಾಡಬೇಕಾದ ಅನಿವಾರ್ಯತೆ ಮತ್ತು ಇಡೀ ವಾತಾವರಣವೇ ತೇವಾಂಶದಿಂದ ಕೂಡಿರುವ ಕಾರಣ ದೇಹವನ್ನು ಬೆಚ್ಚಗಿಟ್ಟು ಶೀತಬಾಧೆಯಿಂದ ತಪ್ಪಿಸಿಕೊಳ್ಳಲು ಆಹಾರ ಪದ್ಧತಿಯಲ್ಲಿಯೂ ಬದಲಾವಣೆ ಮಾಡಿಕೊಂಡಿದ್ದು, ತಮ್ಮ ಸುತ್ತಮುತ್ತ ಹಾಗೂ ಕಾಡುಗಳಲ್ಲಿ ದೊರೆಯುವ ಅಣಬೆ, ಬಿದಿರಿನಿಂದ ದೊರೆಯುವ ಕಳಲೆ, ನದಿ, ಹೊಳೆಯಲ್ಲಿ ದೊರೆಯುವ ಏಡಿ, ಕೆಸ ಸೇರಿದಂತೆ ಕೆಲವು ಸೊಪ್ಪುಗಳನ್ನು ಆಹಾರವಾಗಿ ಬಳಸುವ ಮೂಲಕ ದೇಹಕ್ಕೆ ಬೇಕಾದ ಶಕ್ತಿಗಳನ್ನು ಪಡೆದುಕೊಳ್ಳುವುದಲ್ಲದೆ, ತರಕಾರಿಯ ಸಮಸ್ಯೆಯನ್ನು ನೀಗಿಸಿಕೊಳ್ಳುತ್ತಾರೆ.

ಒಂದೇ ಸಮನೆ ಸುರಿಯುವ ಮಳೆಯಿಂದ ತಂಪಾದ ಕೊಡಗಿನಲ್ಲಿ ವೈವಿಧ್ಯಮಯ ತಿನಿಸುಗಳುಂಟು. ಅಕ್ಕಿಯ ಖಾದ್ಯಗಳಿಗೆ ಇಲ್ಲಿ ಹೆಚ್ಚಿನ ಪ್ರಾಧಾನ್ಯತೆ. ಅಕ್ಕಿ ರೊಟ್ಟಿ ಮತ್ತು ಕಡಂಬುಟ್ಟು ಬೆಳಗಿನ ವಿಶೇಷತಿಂಡಿ. ಅಕ್ಕಿ ರೊಟ್ಟಿಗೆ ಕೆಸುವಿನ ಎಲೆಯ ಚಟ್ನಿ,ಕಳಲೆ ಪಲ್ಯದ ಸಾಥ್ ನಾಲಗೆಯ ರುಚಿ ಹೆಚ್ಚಿಸುತ್ತದೆ. ಮಾತ್ರವಲ್ಲ, ಅಡುಗೆಗೆ ಬಳಸುವ ಸೊಪ್ಪು, ತರಕಾರಿಗಳ ಔಷಧೀಯ ಗುಣಗಳನ್ನು ಹೊಂದಿರುತ್ತವೆ.

ಮಳೆಗಾಲದಲ್ಲಿ ಥಂಡಿ ಹಿಡಿದ ದೇಹದ ಉಷ್ಣಾಂಶ ಹೆಚ್ಚಿಸುತ್ತವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ. ಕೊಡಗಿನವರು ಹವಾಮಾನಕ್ಕೆ ತಕ್ಕಂತೆ ಆಹಾರ ಸೇವಿಸುತ್ತಾರೆ. ಅಂತೆಯೇ ಆಷಾಢ ಮಾಸದಲ್ಲಿ (ಕೊಡಗಿನಲ್ಲಿ ಕಕ್ಕಡ ತಿಂಗಳು) ಹದಿನೆಂಟನೇ ದಿನದಂದು ವಿಶೇಷವಾದ ಔಷಧೀಯ ಸೊಪ್ಪು-ಮದ್ದುಸೊಪ್ಪನ್ನು ಬಳಸಿ ಪಾಯಸ ತಯಾರಿಸುತ್ತಾರೆ. ಇದಕ್ಕೆ ಮದ್ದುಸೊಪ್ಪಿನ ಪಾಯಸ ಎಂದೇ ಹೆಸರು. ಆ ದಿನ ಎಲ್ಲರ ಮನೆಗಳಲ್ಲೂ ಈ ಪಾಯಸ ಮಾಡಿ ಸವಿಯುತ್ತಾರೆ. ದೇಹದ ಆರೋಗ್ಯ ಕಾಪಾಡಿಕೊಳ್ಳಲು ಹಿರಿಯರು ರೂಢಿಸಿಕೊಂಡ ಸಂಪ್ರದಾಯವಿದು. ಒಟ್ಟಿನಲ್ಲಿ ಕೊಡಗಿನ ತಿನಿಸು ತಿನ್ನಲೂ ರುಚಿ. ಆರೋಗ್ಯಕ್ಕೂ ಮೂಲ.

ಮಳೆಗಾಲದಲ್ಲಿ ಕಾಡುಗಳಿಂದ ಅಡುಗೆಗೆ ತರಕಾರಿ, ಸೊಪ್ಪುಗಳನ್ನು ಬಳಸುತ್ತಿದ್ದರಲ್ಲದೆ, ಜ್ವರ, ಶೀತವಾದರೆ ಇಲ್ಲಿ ಸಿಗುವ ಸಸ್ಯಗಳಿಂದಲೇ ಕಷಾಯ ತಯಾರಿಸಿ ಕುಡಿದು ಕಾಯಿಲೆ ವಾಸಿ ಮಾಡಿಕೊಳ್ಳುತ್ತಿದ್ದರು. ಮಳೆಗಾಲದಲ್ಲಿ ಬಿದಿರಿನಿಂದ ಬರುವ ಮೊಳಕೆ (ಕಳಲೆ) ಮುಖ್ಯ ತರಕಾರಿಯಾಗಿತ್ತು. ಅವತ್ತಿನ ದಿನಗಳಲ್ಲಿ ಮುಂಗಾರು ಮಳೆ ಪ್ರಾರಂಭವಾಗಿ ಧೋ ಎಂದು ಸುರಿಯುತ್ತಿದ್ದರೆ, ನದಿ ದಡದಲ್ಲಿ, ಕಾಡಿನ ನಡುವೆ, ಗದ್ದೆ ಬದಿಯಲ್ಲಿ ಹೀಗೆ ಎಲ್ಲೆಂದರಲ್ಲಿ ಬೆಳೆದು ನಿಂತಿದ್ದ ಬಿದಿರು ಮೆಳೆಗಳಿಂದ ಕಳೆಲೆ ಕಡಿದು ತಂದು ತರಕಾರಿಯಾಗಿ ಬಳಸುತ್ತಿದ್ದರು.

ಈಗಲೂ ಕಳಲೆಗೆ ಬೇಡಿಕೆ ಕಡಿಮೆಯಾಗಿಲ್ಲ ಕೊಡಗಿನಲ್ಲಿ ಮಳೆಗಾಲದಲ್ಲಿ ಕಣಿಲೆ ಪ್ರಮುಖ ತರಕಾರಿಯಾಗಿ ಬಳಕೆಯಾಗಲು ಕಾರಣವೂ ಇತ್ತು. ಮಳೆ ಪ್ರಾರಂಭವಾಗಿ ಇಡೀ ವಾತಾವರಣವೇ ಶೀತಮಯ ಆಗಿರುತ್ತಿದ್ದುದರಿಂದ ದೇಹವನ್ನು ಬಿಸಿಯಾಗಿಡಲು ಉಷ್ಣವಾಗಿರುವಂತಹ ಆಹಾರವೇ ಬೇಕಾಗುತ್ತಿತ್ತು. ಹಾಗಾಗಿ ಕಳಲೆ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದರಿಂದ ಅದರಲ್ಲಿ ಉಷ್ಣದ ಗುಣಾಂಶ ಹೆಚ್ಚಾಗಿರುತ್ತಿದ್ದರಿಂದ ಜನಪ್ರಿಯವಾಗಿದ್ದು, ಈಗ ಬಿದಿರು ಮೆಳೆಗಳು ಮೊದಲಿನಷ್ಟು ಇಲ್ಲವಾದುದ್ದರಿಂದ ಇದ್ದಲ್ಲಿಂದ ತಂದು ಸೇವಿಸುತ್ತಾರೆ.

ಇನ್ನು ಕಾಡು, ತೋಟಗಳಲ್ಲಿ ಮರಗಳ ಬುಡದಲ್ಲಿ ಮತ್ತು ಕೊಂಬೆಗಳಲ್ಲಿ, ನೆಲದಲ್ಲಿ ಅಲ್ಲಲ್ಲಿ ಬೆಳೆಯುವ ಮರ ಕೆಸವನ್ನು ಬಳಸಿ ಪತ್ರೊಡೆ ಮಾಡಿ ತಿನ್ನುತ್ತಾರೆ. ಇನ್ನು ಹೊಳೆ, ನದಿ, ನೀರಿನಾಶ್ರಯವಿರುವ ಪ್ರದೇಶಗಳಲ್ಲಿ ಬೆಳೆಯುವ ಕೆಸದ ದಂಟು, ಬೇರು, ಚಿಗುರನ್ನು ಸಾರು ಮಾಡುತ್ತಾರೆ. ಇದರಲ್ಲಿ ಹೆಚ್ಚಿನ ಉಷ್ಣಾಂಶವಿರುವ ಕಾರಣದಿಂದ ನಮ್ಮ ದೇಹದಲ್ಲಿರುವ ಶೀತಾಂಶವನ್ನು ದೂರ ಮಾಡಿ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ.

ಎಲ್ಲೆಂದರಲ್ಲಿ ಹುಟ್ಟುವ ಅಣಬೆಗಳು ಗದ್ದೆ ಬಯಲು, ತೋಟಗಳಲ್ಲಿ ಹಲವು ಬಗೆಯ ಅಣಬೆಗಳು ಮಳೆಗಾಲದಲ್ಲಿ ಹುಟ್ಟುತ್ತವೆ. ಇವುಗಳ ಆಕಾರ, ರುಚಿಯಲ್ಲಿಯೂ ವಿಭಿನ್ನವಾಗಿರುತ್ತವೆ. ನೂರಾರು ಬಗೆಯ ಅಣಬೆಗಳು ಅಲ್ಲಲ್ಲಿ ಕಂಡು ಬಂದರೂ ಅವುಗಳಲ್ಲಿ ಕೆಲವೊಂದನ್ನು ಮಾತ್ರ ಸೇವನೆಗೆ ಬಳಸಲಾಗುತ್ತದೆ. ಯಾವ ಜಾತಿಯ ಅಣಬೆಯನ್ನು ಸೇವಿಸಬಹುದು ಎಂಬುದು ಇಲ್ಲಿನವರಿಗೆ ಗೊತ್ತಿರುತ್ತವೆ. ಅಂತಹುಗಳನ್ನು ಮಾತ್ರ ಬಳಸುತ್ತಾರೆ. ಯಾವ ಸಸ್ಯಗಳು ಆರೋಗ್ಯಕ್ಕೆ ಹಿತಕಾರಿಯಾಗಿದ್ದವೋ ಅವುಗಳನ್ನು ಎಲ್ಲರೂ ಸೇವಿಸಲು ಅನುಕೂಲವಾಗುವಂತೆ ಸಂಪ್ರದಾಯ ಮಾಡಿದರು. ಅಷ್ಟೇ ಅಲ್ಲದೆ ಅದನ್ನು ಪಾಲಿಸುತ್ತಾ ಬಂದರು. ಅದರಂತೆ ಕೊಡಗಿನಲ್ಲಿ ಮಳೆಗಾಲದಲ್ಲಿ ಇಂತಹದ್ದೇ ಆಹಾರವನ್ನು ಸೇವಿಸಬೇಕೆನ್ನುವ ಸಂಪ್ರದಾಯಗಳು ಇವತ್ತಿಗೂ ಜನರ ಆರೋಗ್ಯ ಕಾಪಾಡುತ್ತಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಲೀನಾಶ್ರೀ, ಪವರ್​​ ಟಿವಿ

RELATED ARTICLES

Related Articles

TRENDING ARTICLES