ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಕಾಲದಲ್ಲಿ ಸಾಲ ಸುನಾಮಿಯಂತೆ ಬೆಳದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾಡಿದರು.
ನಗರದಲ್ಲಿಂದು ಮೋದಿ ಸರಕಾರ ಎಂಟು ವರ್ಷ ಪೂರೈಕೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಎಂಟು ವರ್ಷ ನೂರೆಂಟು ಸಂಕಷ್ಟ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಬಳಿಕ ಮಾತನಾಡಿದ ಅವರು, ಸ್ವತಂತ್ರ ಬಂದಾಗಿನಿಂದ ಇದ್ದ ಒಟ್ಟು ಸಾಲವನ್ನು ಎಂಟು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಿಸಿದ್ದಾರೆ. 102 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅಂದರೆ ಒಬ್ಬರ ಮೇಲೆ ಸಾಲ 1 ಲಕ್ಷ 70 ಸಾವಿರ ಆಗುತ್ತದೆ. ಇದರಿಂದ ಎಲ್ಲರ ಮೇಲೂ ಸಾಲದ ಹೊರೆ ಹೇರಿದ್ದಾರೆ ಎಂದು ಕಿಡಿಕಾಡಿದರು.
ಇನ್ನು ಕರ್ನಾಟಕದಲ್ಲಿ ಸ್ವತಂತ್ರ ಬಂದಾಗಿನಿಂದ ಎರಡು ಲಕ್ಷ 42 ಸಾವಿರ ಕೋಟಿ ಇತ್ತು. ಈ ವರ್ಷ ಐದು ಲಕ್ಷ ಕೋಟಿ ಆಗಿದೆ. ನಾಲ್ಕು ವರ್ಷದಲ್ಲಿ 3 ಲಕ್ಷ ಕೋಟಿ ಸಾಲ ಮಾಡಿ, ಎಲ್ಲರನ್ನು ಸಾಲದ ಸುಳಿಯಲ್ಲಿ ಸಿಲುಕುವ ರೀತಿ ಮಾಡಿದ್ದಾರೆ. ಇದು ಮೋದಿಯ ಕೆಟ್ಟ ಆರ್ಥಿಕ ನೀತಿಯಿಂದ ಆಗಿದೆ.ಅವರು ಆರ್ಥಿಕ ನಿರ್ವಹಣೆಯಲ್ಲಿ ಮೋದಿ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ರೈತರು ಆದಾಯ ದುಪ್ಪಟ್ಟು ಮಾಡ್ತೇವೆ ಅಂದರು, ಆದರೆ, ಕಳೆದ ವರ್ಷ ರೈತ ವಿರೋಧಿಯ ಮೂರು ಕಾನೂನು ತಂದರು. ರೈತರಿಗೆ ಎಂಎಸ್ಪಿ ನೀಡಲಿಲ್ಲ, ಆದಾಯ ಕುಂಟಿತ ಆಯ್ತು. ಗೊಬ್ಬರ, ಬೀಜಗಳ ಬೆಲೆ ಏರಿಕೆ ಆಯ್ತು. ಇದರಿಂದ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಲಿಲ್ಲ. ರೈತರ ಆದಾಯ ದ್ವಿಗುಣ ಆಗಬೇಕಿತ್ತು. ಪ್ರತಿ ತಿಂಗಳು 20 ರಿಂದ 25 ಸಾವಿರ ಆದಾಯ ಬರಬೇಕಿತ್ತು. ಆದರೆ, ಆದಾಯ ಬರಲೇ ಇಲ್ಲ, ಸಾಲ ಜಾಸ್ತಿ ಆಗಿದೆ. ವ್ಯವಸಾಯದ ಖರ್ಚು ಜಾಸ್ತಿ ಆಗಿದೆ. ಇದು ರೈತರಿಗೆ ಆದ ದೊಡ್ಡ ಅನ್ಯಾಯ ಎಂದು ಕಿಡಿಕಾಡಿದರು.