ಬೆಂಗಳೂರು: ರಾಜ್ಯದಲ್ಲಿ ಒಟ್ಟು 438 ಕಡೆ ನಗರ ಪ್ರಾಥಮಿಕ ಕೇಂದ್ರಗಳನ್ನು (ನಮ್ಮ ಕ್ಲಿನಿಕ್) ಆರಂಭಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಬಿಎಂಪಿಯ ಎಲ್ಲ ವಾರ್ಡ್‌ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ‘ನಮ್ಮ ಕ್ಲಿನಿಕ್’ಗಳನ್ನು ಆರಂಭಿಸಲಾಗುವುದು. ಇದಕ್ಕಾಗಿ 15 ನೇ ಹಣಕಾಸು ಆಯೋಗದ ಅನುದಾನದಡಿ ರೂ.155 ಕೋಟಿ ನೀಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಇಲ್ಲಿ ಕಾರ್ಯ ನಿರ್ವಹಿಸಲು 438 ವೈದ್ಯರು ಮತ್ತು 438 ನರ್ಸ್‌ಗಳ ಹುದ್ದೆಗಳ ಸೃಷ್ಟಿಸಿ, ನೇಮಕ ಮಾಡಿಕೊಳ್ಳಲಾಗುವುದು. ‘ಡಿ’ ದರ್ಜೆಯಡಿ 438 ಸಿಬ್ಬಂದಿಯನ್ನು ತಾತ್ಕಾಲಿಕ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ‘ನಮ್ಮ ಕ್ಲಿನಿಕ್’ಗೆ ತಲಾ ರೂ.36.45 ಲಕ್ಷ ಮತ್ತು ಇತರ ಕಡೆಗಳಲ್ಲಿ ರೂ.34.50 ಲಕ್ಷ ವೆಚ್ಚ ಮಾಡಲಾಗುವುದು. ಜ್ವರ, ನೆಗಡಿ, ಶೀತ ಸಂಬಂಧಿಸಿದಂತೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಇಲ್ಲಿ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯಬಹುದಾಗಿದೆ.
ಮಧುಮೇಹ, ರಕ್ತದೊತ್ತಡದಂತಹ ಸಾಮಾನ್ಯ ಆರೋಗ್ಯ ತಪಾಸಣೆ ಮಾಡಲಾಗುವುದು. ಪ್ರಯೋಗಾಲಯ ಸೇವೆಯೂ ಇಲ್ಲಿ ಇರಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಿದ್ದಾರೆ ಎಂಬ ಮಾಹಿತಿ ನೀಡಿದರು.