ಮಂಗಳೂರು : ಕೆಲ ದಿನಗಳ ಹಿಂದೆ ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಹತ್ಯೆಗೆ ದುಷ್ಕರ್ಮಿಗಳು ಸ್ಕೆಚ್ ಹಾಕಿದ್ರು. ಇದೀಗ ಗೃಹ ಇಲಾಖೆಯ ಸೂಚನೆಯಂತೆ ಗುಣರಂಜನ್ ಶೆಟ್ಟಿ ಕೊಲೆ ಸ್ಕೆಚ್ ಪ್ರಕರಣವನ್ನು ಮಂಗಳೂರು ಪೊಲೀಸರು ತನಿಖೆಗೆ ಎತ್ತಿಕೊಂಡಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಪ್ರಕರಣವನ್ನು ಸಿಸಿಬಿಗೆ ವಹಿಸಿದ್ದು, ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ವಿಚಾರಣೆ ಆರಂಭಿಸಿದ್ದಾರೆ.
ಈ ಹಿಂದೆ ಭೂಗತ ಡಾನ್ ಮುತ್ತಪ್ಪ ರೈ ಜೊತೆಗಿದ್ದಾಗ ಗುಣರಂಜನ್ ಶೆಟ್ಟಿ ಮತ್ತು ಪುತ್ತೂರಿನ ಮನ್ವಿತ್ ರೈ ಜೊತೆಗಿದ್ದರು.2 ವರ್ಷಗಳ ಹಿಂದೆ ಸಂಪರ್ಕ ಕಡಿದುಕೊಂಡಿದ್ದ ಮನ್ವಿತ್ ರೈ ಈಗ ವಿದೇಶದಲ್ಲಿದ್ದಾನೆ. ಥಾಯ್ಲೆಂಡ್ ನಲ್ಲಿ ನೆಲೆಸಿರುವ ಮನ್ವಿತ್ ರೈ, ಗುಣರಂಜನ್ ಶೆಟ್ಟಿ ಹತ್ಯೆಗೆ ಸ್ಕೆಚ್ ಹಾಕಿದ್ದಾನೆ ಎಂದು ವದಂತಿ ಹರಡಿತ್ತು. ಆದರೆ, ಈ ಬಗ್ಗೆ ಆಡಿಯೋ ಮೂಲಕ ಸ್ಪಷ್ಟನೆ ನೀಡಿದ್ದ ಮನ್ವಿತ್ ರೈ, ತನಗೂ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗುಣರಂಜನ್, ತಾನೇನೂ ಮನ್ವಿತ್ ರೈ ಹೆಸರು ಹೇಳಿಲ್ಲ. ಆ ಬಗ್ಗೆ ಹೊರಗಡೆ ಹೇಳಿಕೊಂಡಿದ್ದು ಯಾಕೆಂದು ಗೊತ್ತಿಲ್ಲ. ಅವನೇ ಹೇಳಬೇಕು ಎಂದಿದ್ದಾರೆ. ಜೊತೆಗೆ ಯಾರೋ ತಾನಲ್ಲ ಎಂದು ಹೇಳಿಕೊಂಡರೆ ನಾನೇನು ಮಾಡೋಕ್ಕಾಗುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ.
ವಿಚಾರಣೆ ಆರಂಭಿಸಿರುವ ಪೊಲೀಸರು ಆರೋಪ ಕೇಳಿಬಂದವರನ್ನೆಲ್ಲ ತನಿಖೆ ನಡೆಸುತ್ತೇವೆ ಎಂದಿದ್ದಾರೆ. ಖಚಿತವಾಗಿ ಯಾರ ಹೆಸರನ್ನೂ ಹೇಳಿಕೊಂಡಿಲ್ಲ. ಆದರೆ, ಗುಣರಂಜನ್ ಶೆಟ್ಟಿ ಸಾರ್ವಜನಿಕ ವ್ಯಕ್ತಿಯಾಗಿರುವುದರಿಂದ ನಿಷ್ಠುರ ಇದ್ದವರ ಹೆಸರನ್ನು ಹೇಳಿದ್ದಾರೆ. ಎಲ್ಲರನ್ನೂ ಕರೆಸಿ ಅವರಿಂದ ಮಾಹಿತಿ ಸಂಗ್ರಹ ಮಾಡಬೇಕಾಗುತ್ತದೆ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.
ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಗುಣರಂಜನ್ ಶೆಟ್ಟಿ, ಮುತ್ತಪ್ಪ ರೈ ನಿಧನದ ಬಳಿಕ ಬೆಂಗಳೂರಿನಲ್ಲಿಯೇ ಉದ್ಯಮ ಮಾಡಿಕೊಂಡಿದ್ದಾರೆ. ಇದೀಗ ಅವರನ್ನೇ ಕೊಲೆಗೈಯಲು ಈ ಹಿಂದೆ ಮುತ್ತಪ್ಪ ರೈ ಜೊತೆಗಿದ್ದವರೇ ಸ್ಕೆಚ್ ಹಾಕಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಬೇಕಷ್ಟೆ.
ಗಿರಿಧರ್ ಶೆಟ್ಟಿ, ಪವರ್ ಟಿವಿ ಮಂಗಳೂರು