Monday, December 23, 2024

ಬೈರಾಗಿಗೆ ಪವರ್ ಟಿವಿ ರೇಟಿಂಗ್: 4/5

ದಿ ವೆಯ್ಟ್ ಈಸ್ ಓವರ್. ಎಲ್ಲೆಲ್ಲೂ ಬೈರಾಗಿಯ ಭಜನೆ ಶುರು. ಅಪ್ಪು ಇಲ್ಲದೆ ರಿಲೀಸ್ ಆದ ಶಿವಣ್ಣನ ಚೊಚ್ಚಲ ಸಿನಿಮಾಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಟಗರು ಶಿವ-ಡಾಲಿ ಮತ್ತೆ ಮ್ಯಾಜಿಕ್ ಮಾಡಿದ್ದಾರೆ. ಇಷ್ಟಕ್ಕೂ ಸಿನಿಮಾ ಹೇಗಿದೆ..? ಸ್ಟೋರಿಲೈನ್ ಏನು..? ಆರ್ಟಿಸ್ಟ್ ಪರ್ಫಾಮೆನ್ಸ್ ಹೆಂಗಿದೆ ಅನ್ನೋದ್ರ ಡಿಟೈಲ್ಡ್ ರಿವ್ಯೂ ರಿಪೋರ್ಟ್​ ನಿಮಗಾಗಿ ಕಾಯ್ತಿದೆ.

ಶಿಳ್ಳೆ ಚಪ್ಪಾಳೆಗಳಿಂದ ‘ಬೈರಾಗಿ’ಗೆ ಸಿಕ್ತು ಗ್ರ್ಯಾಂಡ್ ವೆಲ್ಕಮ್

ಹುಲಿ ಕುಣಿತ.. ಹೂಮಾಲೆ.. ಪಟಾಕಿ.. ಕಟೌಟ್.. ತಮಟೆ

ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್​ರ 123ನೇ ಸಿನಿಮಾ ಬೈರಾಗಿ ಇಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಗಪ್ಪಳಿಸಿದೆ. ರಾಜರತ್ನ ಅಪ್ಪು ಇಲ್ಲದೆ ರಿಲೀಸ್ ಆದ ಶಿವಣ್ಣನ ಮೊದಲ ಸಿನಿಮಾ ಇದಾಗಿದ್ದು, ಫ್ಯಾನ್ಸ್ ಜೊತೆ ಕನ್ನಡ ಸಿನಿರಸಿಕರೂ ಸಹ ಈ ಸಿನಿಮಾನ ಬಹಳ ಆತ್ಮೀಯವಾಗಿ ಸ್ವೀಕರಿಸಿದ್ದಾರೆ.

350ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡ ಈ ಸಿನಿಮಾಗೆ ರಾಜ್ಯದ ಮೂಲೆ ಮೂಲೆಯಿಂದ ಅಭೂತಪೂರ್ವ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಅದ್ರಲ್ಲೂ ಮೆಜೆಸ್ಟಿಕ್​ನ ತ್ರಿವೇಣಿ ಚಿತ್ರಮಂದಿರದಲ್ಲಿ ಮುಗಿಲೆತ್ತರದ ಶಿವಣ್ಣನ ಕಟೌಟ್​ಗೆ ಬೃಹತ್ ಹೂಮಾಲೆ ಹಾಕಿ, ಪಟಾಕಿ ಸಿಡಿಸಿ, ತಮಟೆ ಸದ್ದಿನ ಜೊತೆ ಹುಲಿ ಕುಣಿತದಿಂದ ವಿಶೇಷ ಮೆರುಗು ನೀಡಲಾಯ್ತು. ಫ್ಯಾನ್ಸ್ ಅಕ್ಷರಶಃ ಹುಚ್ಚೆದ್ದು ಕುಣಿದರು.

ಚಿತ್ರ: ಬೈರಾಗಿ

ನಿರ್ದೇಶನ: ವಿಜಯ್ ಮಿಲ್ಟನ್

ನಿರ್ಮಾಣ: ಕೃಷ್ಣ ಸಾರ್ಥಕ್

ಸಂಗೀತ: ಅನೂಪ್ ಸೀಳಿನ್

ಸಿನಿಮಾಟೋಗ್ರಫಿ: ವಿಜಯ್ ಮಿಲ್ಟನ್

ತಾರಾಗಣ: ಡಾ. ಶಿವರಾಜ್​ಕುಮಾರ್, ಡಾಲಿ ಧನಂಜಯ, ಪೃಥ್ವಿ ಅಂಬರ್, ಅಂಜಲಿ, ಯಶಾ ಶಿವಕುಮಾರ್, ಚಿಕ್ಕಣ್ಣ, ಶರತ್ ಲೋಹಿತಾಶ್ವ, ಶಶಿಕುಮಾರ್ ಮುಂತಾದವರು.

ಬೈರಾಗಿ ಸ್ಟೋರಿಲೈನ್ :

ಹುಲಿ ಕುಣಿತದ ಕಲೆಯನ್ನೇ ಆಧರಿಸಿ ಬದುಕು ಕಟ್ಟಿಕೊಂಡ ಶಿವಪ್ಪ ಅನ್ನೋ ವ್ಯಕ್ತಿ ಪೊಲೀಸ್ ಆಫೀಸರ್ ಮೇಲೆ ಕೈ ಮಾಡಿದ ತಪ್ಪಿಗೆ ಹದಿನೈದು ದಿನ ಸೆರೆಮನೆವಾಸ ಅನುಭವಿಸ್ತಾರೆ. ಆದ್ರೆ ಅವ್ರು ಕೈ ಎತ್ತುವುದರ ಹಿಂದೆ ಬಲವಾದ ಕಾರಣ ಇದ್ದೇ ಇರುತ್ತೆ. ಅಲ್ಲದೆ, ಇನ್ಸ್​ಪೆಕ್ಟರ್ ಒಬ್ರ ಜೊತೆ ಸ್ಟೇಷನ್​ನಲ್ಲೇ ಉಳಿದುಕೊಳ್ಳೋ ಶಿವಪ್ಪನಿಗೆ ವಾತಾಪಿಯ ಪರಿಚಯ ಆಗುತ್ತೆ. ಈ ಮಧ್ಯೆ ಊರಿನ ಅಧ್ಯಕ್ಷ ಕಮ್ ಮಾರ್ಷಲ್ ಆರ್ಟ್ಸ್ ಮಾಸ್ಟರ್​​ ಕರ್ಣನ ರಾಜಕೀಯ ವರ್ಚಸ್ಸು. ಸ್ಕೂಲ್ ಟೀಚರ್ ಒಬ್ಬರ ಅಸಹಾಯಕತೆ. ಈ ಮಧ್ಯೆ ಆ ಗ್ರಾಮಕ್ಕೆ ಬರೋ ಮಿನಿಸ್ಟರ್​, ಅಲ್ಲೊಂದು ಮಾಡಬಾರದ ಕೆಲಸ ಮಾಡ್ತಾರೆ. ಅದಕ್ಕೆ ಕರ್ಣನ ಸಾಥ್ ಇರುತ್ತಾ, ಇಲ್ವಾ..? ಆ ಮಿನಿಸ್ಟರ್ ಮಾಡೋ ಆ ಮಹಾ ಎಡವಟ್ ಆದ್ರೂ ಏನು..? ಅನ್ಯಾಯ, ಅಧರ್ಮದ ವಿರುದ್ಧ ಮೂರನೇ ಕಣ್ಣಿಂದ ನೋಡೋ ಶಿವಪ್ಪನ ಶಿವ ತಾಂಡವ ಹೇಗಿರುತ್ತೆ ಅನ್ನೋದೇ ಚಿತ್ರದ ಒನ್​ಲೈನ್ ಸ್ಟೋರಿ.

ಬೈರಾಗಿ ಆರ್ಟಿಸ್ಟ್ ಪರ್ಫಾಮೆನ್ಸ್ :

ಹುಲಿ ಕುಣಿತದ ಕಲಾವಿದ ಶಿವಪ್ಪನಾಗಿ ಶಿವರಾಜ್​ಕುಮಾರ್ ನೈಜ ಹಾಗೂ ಸ್ವಾಭಾವಿಕವಾದಂತಹ ಮನೋಜ್ಞ ಅಭಿನಯ ನೀಡಿದ್ದಾರೆ. ಅಬ್ಬರ ಆಡಂಬರ ಇಲ್ಲದೆ, ಶ್ರೀಸಾಮಾನ್ಯ ಕೂಡ ಅನ್ಯಾಯ, ಅಧರ್ಮಕ್ಕೆ ಸ್ಪಂದಿಸಬಹುದು ಅನ್ನೋದಕ್ಕೆ ಸಾಕ್ಷಿ ಆಗಿದ್ದಾರೆ. ಅವ್ರ ಒಂದೊಂದು ಹಾವ, ಭಾವ, ಹೃದಯ ಸ್ಪರ್ಶಿ ಕೆಲಸಗಳಿಗೆ ಶಿಳ್ಳೆ ಚಪ್ಪಾಳೆಗಳ ಸುರಿಮಳೆಯೇ ಆಗ್ತಿದೆ.

ಆತ್ಮಸಾಕ್ಷಿ ಸಾಯಿಸಿಕೊಂಡ್ರೂ ಪರವಾಗಿಲ್ಲ, ರಾಜಕಾರಣದಲ್ಲಿ ಬೆಳೆಯಬೇಕು ಅನ್ನೋ ಮಹದಾಸೆಯ ಊರಿನ ಅಧ್ಯಕ್ಷ ಕರ್ಣನ ಪಾತ್ರದಲ್ಲಿ ಡಾಲಿ ಧನಂಜಯ ಕಮಾಲ್ ಮಾಡಿದ್ದಾರೆ. ಡಾಲಿಗೆ ಇಲ್ಲಿ ಎರಡು ಶೇಡ್​ಗಳಿದ್ದು, ಟಗರು ನಂತ್ರ ಶಿವಣ್ಣ- ಧನಂಜಯ್ ಮ್ಯಾಜಿಕ್ ಮಾಡಿದ್ದಾರೆ.

ವಾತಾಪಿ ಪಾತ್ರದಲ್ಲಿ ಪೃಥ್ವಿ ಅಂಬರ್ ನಿಜಕ್ಕೂ ನೋಡುಗರ ಮನದಲ್ಲಿ ಉಳಿಯಲಿದ್ದಾರೆ. ಶಿವಣ್ಣ-ಡಾಲಿಯ ಪಾತ್ರಗಳ ಮಧ್ಯೆ ಸೇತುವೆಯಂತೆ ಪೃಥ್ವಿ ಕಾಣಸಿಗಲಿದ್ದು, ಭೇಷ್ ಎನ್ನುವಂತಹ ಅಭಿನಯ ನೀಡಿದ್ದಾರೆ. ಇನ್ನು ಇನ್ಸ್​ಪೆಕ್ಟರ್ ಆಗಿ ಶಶಿಕುಮಾರ್, ಮಿನಿಸ್ಟರ್ ರೋಲ್​ನಲ್ಲಿ ಶರತ್ ಲೋಹಿತಾಶ್ವ, ಸ್ಕೂಲ್ ಮೇಡಂ ಆಗಿ ಅಂಜಲಿ, ಯಶಾ ಶಿವಕುಮಾರ್ ಸೇರಿದಂತೆ ಎಲ್ಲಾ ಕಲಾವಿದರು ಅವರವರ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಬೈರಾಗಿ ಪ್ಲಸ್ ಪಾಯಿಂಟ್ಸ್ :

ಶಿವಣ್ಣ- ಡಾಲಿಯ ಟಗರು ಕಾಂಬೋ

ಪೃಥ್ವಿ ಅಂಬರ್ ಅಭಿನಯ

ಸಮಾಜಕ್ಕೆ ಕನೆಕ್ಟ್ ಆಗೋ ಕಥೆ

ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ

ವಿಜಯ್ ಮಿಲ್ಟನ್ ಕ್ಯಾಮೆರಾ ವರ್ಕ್​

ಎಮೋಷನಲ್ ಕಂಟೆಂಟ್

ಬೈರಾಗಿ ಮೈನಸ್ ಪಾಯಿಂಟ್ಸ್ :

ಬೈರಾಗಿ ಶಿವನ ಅನ್ವರ್ಥ ನಾಮ. ಇಲ್ಲಿ ತಪ್ಪುಗಳನ್ನು ಹುಡುಕೋದೇ ಕಷ್ಟ ಅನ್ನೋ ಅಷ್ಟರ ಮಟ್ಟಿಗೆ ಕಥೆಯನ್ನ ಬ್ಲಂಡ್ ಮಾಡಿ ಸಿನಿಮಾ ಮಾಡಲಾಗಿದೆ. ಆದ್ರೆ ಥಿಯೇಟರ್​ನಲ್ಲಿ ಕೂತು ವೀಕ್ಷಿಸುವಾಗ ಮೊದಲಾರ್ಧ ಕೊಂಚ ಸ್ಲೋ ಅನಿಸಲಿದೆ. ಅಲ್ಲದೆ, ಶಿವಣ್ಣನ ಕಾಸ್ಟ್ಯೂಮ್ಸ್ ಅರಗಿಸಿಕೊಳ್ಳೋದು ಕೊಂಚ ಕಷ್ಟ. ಇವುಗಳನ್ನು ಹೊರತು ಪಡಿಸಿದ್ರೆ ಇದೊಂದು ಭರ್ಜರಿ ಬಾಡೂಟದ ಕಮರ್ಷಿಯಲ್ ಎಂಟರ್​ಟೈನರ್.

ಬೈರಾಗಿಗೆ ಪವರ್ ಟಿವಿ ರೇಟಿಂಗ್: 4/5

ಬೈರಾಗಿ ಫೈನಲ್ ಸ್ಟೇಟ್​ಮೆಂಟ್ :

ಬೈರಾಗಿ ಅಂದ್ರೆ ಸೃಷ್ಠಿಕರ್ತ ಶಿವ. ಆ ಪರಮೇಶ್ವರನು ಸೃಷ್ಠಿಯನ್ನ ಕಾಪಾಡಿಕೊಳ್ಳುವಂತೆ, ಈ ಸಿನಿಮಾದಲ್ಲಿನ ಶಿವಪ್ಪ ಕೂಡ ತನ್ನ ಸಮಾಜವನ್ನು ಅನ್ಯಾಯ, ಅಧರ್ಮಗಳಿಂದ ಕಾಪಾಡಿಕೊಳ್ಳೋ ವ್ಯಕ್ತಿ, ವ್ಯಕ್ತಿತ್ವವಾಗಿ ಹೊರಹೊಮ್ಮಿದ್ದಾರೆ. ಮೂರನೇ ಕಣ್ಣಿಂದ ಎಲ್ಲವನ್ನೂ ಗಮನಿಸೋ ಶಿವಪ್ಪ, ಕೊನೆಗೆ ಶಿವತಾಂಡವ ಆಡೋ ಪರಿ ನಿಜಕ್ಕೂ ಅದ್ಭುತ. ಇನ್ನು ಡಾಲಿ- ಶಿವಣ್ಣ ಕಾಂಬೋ ಹಾವು- ಮುಂಗುಸಿ ಫೈಟ್ ರೀತಿ ಕ್ಲೈಮ್ಯಾಕ್ಸ್​ನಲ್ಲಿ ನೋಡುಗರಿಗೆ ಸಖತ್ ಥ್ರಿಲ್ ಕೊಡ್ತಾರೆ. ದಿಯಾದಂತಹ ಬಿಗ್ ಹಿಟ್ ಕೊಟ್ಟ ಪೃಥ್ವಿ ಅಂಬರ್, ವಾತಾಪಿ ರೋಲ್ ಮಾಡಿರೋದು ಅವ್ರ ಕರಿಯರ್​​ ಗ್ರಾಫ್​​ನ ಮತ್ತಷ್ಟು ಉತ್ತುಂಗಕ್ಕೇರಿಸೋ ಲಕ್ಷಣ ತೋರಿದೆ. ಇದು ಸುತ್ತ ಮುತ್ತಲ ಸಮಾಜದಲ್ಲಿ ನಡೆಯೋ ಅಂತಹ ಕಥಾನಕ. ಜನಕ್ಕೆ ಇದು ಬಹುಬೇಗ ಕನೆಕ್ಟ್ ಆಗಲಿದ್ದು, ಮಸ್ತ್ ಮನರಂಜನೆಯ ಜೊತೆಗೆ ನೋಡುಗರಿಗೆ ಒಂದೊಳ್ಳೆ ಮೆಸೇಜ್ ಕೂಡ ಕೊಟ್ಟು ಕಳುಹಿಸಲಿದೆ. ಒಟ್ಟಾರೆ ಶಿವಣ್ಣ ಕರಿಯರ್​ನಲ್ಲಿ ಇದೊಂದು ಭಿನ್ನ ಅಲೆಯ ಸಿನಿಮಾ ಆಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ 

RELATED ARTICLES

Related Articles

TRENDING ARTICLES