ವಿಜಯಪುರ : ಗೂಡ್ಸ್ ವಾಹನವೊಂದು ಪಲ್ಟಿಯಾಗಿ ಹಲವರು ಗಾಯಗೊಂಡ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹೊರವಲಯದ ನಾಲತವಾಡ ರಸ್ತೆಯಲ್ಲಿ ನಡೆದಿದೆ.
ಗಾಯಗೊಂಡವರನ್ನು ಮುದ್ದೇಬಿಹಾಳ ತಾಲೂಕಿನ ಮುರಾಳ ಗ್ರಾಮದವರೆಂದು ಗುರುತಿಸಲಾಗಿದೆ. ಘಟನೆಯಿಂದಾಗಿ ಕೆಲ ಕಾಲ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಕೂಡಲೇ ಅಪಘಾತ ಸ್ಥಳಕ್ಕೆ ಧಾವಿಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರೇಣುಕಾ ಜಕನೂರು ಗಾಯಾಳುಗಳನ್ನ ಪ್ರಥಮ ಚಿಕಿತ್ಸೆಗಾಗಿ ಮುದ್ದೇಬಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್ ಮೂಲಕ ಸಾಗಿಸಿದ್ದಾರೆ. ಅಲ್ಲದೇ ರಸ್ತೆ ಸಂಚಾರ ಸುಗಮವಾಗುವಂತೆ ನೋಡಿಕೊಂಡಿದ್ದಾರೆ.
ಇನ್ನು, ವಿಷಯ ತಿಳಿದು ತಾಲೂಕು ಆಸ್ಪತ್ರೆಗೆ ಧಾವಿಸಿದ ಸ್ಥಳೀಯ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸುವಲ್ಲಿ ನೆರವಾಗಿದ್ದಲ್ಲದೇ, ತೀರ್ವವಾಗಿ ಗಾಯಗೊಂಡಿದ್ದ ಮುರಾಳ ಗ್ರಾಮದ ಅಶೋಕ ಚಲವಾದಿ, ದಾವಲಸಾಬ ಹಾದಿಮನಿ, ಭೀಮನಗೌಡ ಬಿರಾದಾರ ಇವರಿಗೆ ತಲಾ 25 ಸಾವಿರ ಧನಸಹಾಯ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.