ಕೊಪ್ಪಳ: ಸರ್ಕಾರಿ ನೌಕರರಂದ್ರೆ ನಾನಾಯ್ತು ನನ್ನ ಕೆಲಸವಾಯ್ತು. ಉಳಿದೋರು ಏನಾದ್ರೆ ನನಗೇನು ಅನ್ನೋರೇ ಹೆಚ್ಚು. ಇಲಾಖೆಯಲ್ಲಿನ ಕರ್ಮಕಾಂಡದ ಕುರಿತು ಧ್ವನಿ ಎತ್ತುವುದು ತೀರಾ ಅಪರೂಪ. ಆದ್ರೆ, ಇಲ್ಲೊಬ್ಬ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಲಂಚಾವತಾರ ಬಯಲಿಗೆಳೆದಿದ್ದಕ್ಕೆ ಅದೇ ಇಲಾಖೆ ಅಧಿಕಾರಿಗಳು ಜೀವ ಬೆದರಿಕೆ ಹಾಕಿದ್ದಾರೆ.
ಬಡವರು ಹಾಗೂ ಸಾರ್ವಜನಿಕರ ಅನುಕೂಲಕ್ಕೆ ಸರ್ಕಾರ ಸುಸಜ್ಜಿತ ಆಸ್ಪತ್ರೆಗಳನ್ನು ನಿರ್ಮಿಸುವ ಜೊತೆಗೆ ಅಗತ್ಯ ಸೌಲಭ್ಯಗಳನ್ನು ನೀಡಿದೆ. ಆದ್ರೆ, ಸರ್ಕಾರಿ ವೈದ್ಯಾಧಿಕಾರಿಗಳು ಹೆರಿಗೆ, ರಕ್ತ ಪರೀಕ್ಷೆಗೆಂದು ನಿತ್ಯ ಬಡವರ ಬಳಿ ಸಾವಿರಾರು ರೂ.ವಸೂಲಿಗಿಳಿದಿದ್ದಾರೆ. ಈ ಕುರಿತು ಕೊಪ್ಪಳ ತಾಲೂಕಿನ ಹಿರೇಸಿಂಧೋಗಿ ಆಸ್ಪತ್ರೆ ರೋಗಿಗಳೇ ಅಧಿಕಾರಿ ಬಳಿ ಅಳಲು ತೋಡಿಕೊಂಡಿದ್ದಾರೆ.
ದಾಖಲೆ ಸಹಿತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ರವೀಂದ್ರನಾಥ ಕೊಪ್ಪಳ ಡಿಸಿ ಹಾಗೂ ಜಿ.ಪಂ. ಸಿಇಒಗೆ ವರದಿ ಸಲ್ಲಿಸಿದ್ದಾರೆ. ಅಲ್ಲದೆ, ಡಿಸಿ, ಸಿಇಒ ಸಭೆಯಲ್ಲಿ DHO ಡಾ. ಅಲಕಾನಂದ ಮಳಗಿ ಕರ್ತವ್ಯ ಲೋಪದ ವಿರುದ್ಧ ಧ್ವನಿ ಎತ್ತಿದ್ದೇ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗೆ ಮುಳುವಾಗಿದೆ. ಸರ್ಕಾರದ ಕೆಲಸವನ್ನು ನಿಷ್ಠೆಯಿಂದ ಮಾಡೋದು ತಪ್ಪಾ ಎನ್ನುವಂತಾಗಿದೆ.
ಇದೇ ಜೂ.16ರಂದು ಡಿಸಿ ಹಾಗೂ ಜಿ.ಪಂ. ಸಿಇಒ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ರವೀಂದ್ರನಾಥ, DHO ಡಾ. ಅಲಕಾನಂದಾ ಮಳಗಿಯ ಕರ್ತವ್ಯ ಲೋಪದ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಇದಾದ ಮರುದಿನವೇ DHO ಅಲಕಾನಂದಾ ಮಳಗಿ, ಕುಷ್ಟಗಿ ಅರವಳಿಕೆ ತಜ್ಞ ವಿರುಪಾಕ್ಷಪ್ಪ ಹಳ್ಳಳ್ಳಿ, ಹಿರೇಸಿಂಧೋಗಿಯ ಸ್ತ್ರೀರೋಗ ತಜ್ಞ ಹಾಗೂ ಡಾ. ರಮೇಶ್ ಎನ್ನುವವರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ.ಇವರೆಲ್ಲರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರವೀಂದ್ರನಾಥ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಒಟ್ಟಿನಲ್ಲಿ ಎಲ್ಲಾ ತಿಳಿದಿದ್ದರೂ, ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿರುವುದು ನಾಚಿಕೆಗೇಡಿನ ಸಂಗತಿ. ಇನ್ನಾದರೂ ಲಂಚಬಾಕ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗುತ್ತಾ ಎನ್ನುವುದು ಯಕ್ಷ ಪ್ರಶ್ನೆ.
ಶುಕ್ರಾಜ ಕುಮಾರ್ ಪವರ್ ಟಿವಿ ಕೊಪ್ಪಳ