Wednesday, December 25, 2024

ಮಂಗಳೂರಿನಲ್ಲಿ ಭಾರಿ ಮಳೆಗೆ ಜನ ಹೈರಾಣ

ಮಂಗಳೂರು: ಈ ವಿಡಿಯೋ ನೋಡಿದರೆ, ಎಲ್ಲೋ ಹಳ್ಳಿಗಾಡಿನಲ್ಲಿ ನದಿಯಲ್ಲಿ ನೀರು ಉಕ್ಕಿ ಬಂದಿರುವುದು ಅನ್ಕೋಬಹುದು. ಆದರೆ, ಈ ದೃಶ್ಯ ಕಂಡುಬಂದಿದ್ದು ಮಂಗಳೂರು ನಗರದಲ್ಲಿ. ರಾತ್ರಿಯಿಂದೀಚೆಗೆ ನಿರಂತರ ಸುರಿದ ಮಳೆಯಿಂದಾಗಿ ಕಾಂಕ್ರೀಟ್ ರಸ್ತೆಗಳೆಲ್ಲಾ ಕೆರೆಗಳಂತಾಗಿದ್ದವು. ಬೆಳ್ಳಂಬೆಳಗ್ಗೆ ಜನ ಎದ್ದು ನೋಡುತ್ತಲೇ ಮನೆಯೊಳಗೇ ನೀರು ನುಗ್ಗಿತ್ತು. ಸವಾರರು ಅಷ್ಟೊಂದು ನೀರಿನಲ್ಲೂ ವಾಹನಗಳನ್ನು ಚಲಾಯಿಸಲು ಸಾಹಸ ಮಾಡುತ್ತಿದ್ದರು.

ಮಂಗಳೂರಿನ ಕೊಟ್ಟಾರ ಪ್ರದೇಶ ಹಿಂದಿನಿಂದಲೂ ತಗ್ಗು ಪ್ರದೇಶವಾಗಿರುವುದರಿಂದ ಇಲ್ಲಿಂದ ಹಾದು ಹೋಗುವ ಮಂಗಳೂರು – ಉಡುಪಿ ಕಾರವಾರ ಹೆದ್ದಾರಿ ಪೂರ್ತಿ ಮುಳುಗಡೆಯಾಗಿತ್ತು. ಮೇಲ್ಸೇತುವೆಯಲ್ಲಿ ಒಂದು ಬದಿಗೆ ಮಾತ್ರ ವಾಹನ ಚಾಲನೆಗೆ ಅವಕಾಶ ಇದ್ದುದರಿಂದ ಅಲ್ಲಿ ಪೂರ್ತಿ ಟ್ರಾಫಿಕ್ ಬ್ಲಾಕ್ ಆಗಿತ್ತು. ಕೆಲವು ಖಾಸಗಿ ಬಸ್ಸಿನವರು ನೀರಿನ ಮಧ್ಯೆಯೂ ಬಸ್ ಚಲಾಯಿಸುತ್ತಿದ್ದರು. ಇದೇ ವೇಳೆ, ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಿದ್ದರಿಂದ ವಿದ್ಯಾರ್ಥಿಗಳು ಕೂಡ ಕೊಟ್ಟಾರದಲ್ಲಿ ನೀರಿನಲ್ಲಿ ಈಜಾಡುತ್ತಾ ಸಾಗುವ ಸ್ಥಿತಿ ಎದುರಾಗಿತ್ತು.
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಡೀಲ್, ಕಣ್ಣೂರಿನಲ್ಲಿ ಭಾರೀ ಪ್ರಮಾಣದ ಮಳೆ ನೀರು ಹೆದ್ದಾರಿಯಲ್ಲಿ ನಿಂತಿತ್ತು. ಅಲ್ಲಿರುವ ಹೆಸರಾಂತ ಫಸ್ಟ್ ನ್ಯೂರೋ ಹಾಸ್ಪಿಟಲ್ ಒಳಗಡೆಯೂ ನೀರು ನುಗ್ಗಿತ್ತು. ಒಂದೆಡೆ ಸ್ಮಾರ್ಟ್ ಸಿಟಿ ಹೆಸರಲ್ಲಿ ಸಿಕ್ಕ ಸಿಕ್ಕಲ್ಲಿ ಅಗೆದು ಹಾಕಿದ್ದು, ಇದರಿಂದ ಚರಂಡಿ ಬ್ಲಾಕ್ ಆಗಿದ್ದರಿಂದ ಹೆದ್ದಾರಿಯಲ್ಲಿ ನೀರು ನಿಲ್ಲುವಂತಾಗಿತ್ತು. ಮಂಗಳೂರಿನ ಪಂಪ್ವೆಲ್ ಹೆದ್ದಾರಿ ಮಧ್ಯೆಯೂ ನೀರು ನಿಂತಿದ್ದು, ವಾಹನ ಸವಾರರು ಪರದಾಡಿದರು. ಇದಲ್ಲದೆ, ಕೊಟ್ಟಾರ, ಮಾಲೆಮಾರ್, ಕೋಡಿಕಲ್, ಪಡೀಲ್ ಏರಿಯಾದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ್ದು ಆಡಳಿತದ ವಿರುದ್ಧ ಜನ ಹಿಡಿಶಾಪ ಹಾಕಿದರು.

ಭಾರೀ ಮಳೆ ಹಿನ್ನೆಲೆಯಲ್ಲಿ ಶಾಲೆ, ಕಾಲೇಜಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ರಜೆ ಘೋಷಿಸಿತ್ತು. ಮುಂಜಾಗ್ರತಾ ಕ್ರಮವಾಗಿ ಆಯಾ ತಾಲೂಕಿನಲ್ಲಿ ಶಿಕ್ಷಣಾಧಿಕಾರಿಗಳು ಮತ್ತು ತಹಸೀಲ್ದಾರ್ ಪರಿಸ್ಥಿತಿ ಬಗ್ಗೆ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಎಲರ್ಟ್ ಮುಂದುವರಿಸಿದೆ.

ಇನ್ನು ಉತ್ತರಕನ್ನಡ ಜಿಲ್ಲೆಯಲ್ಲೂ ವರುಣನಬ್ಬರ ಜೋರಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ.ತಡರಾತ್ರಿಯಿಂದ ಎಡಬಿಡದೆ ಸುರಿಯುತ್ತಿರುವ ವರುಣನ ಅಬ್ಬರದಿಂದ ಜನಜೀವನ ಅಸ್ತವ್ಯಸ್ತವಾಗಿದೆ.ಜಿಲ್ಲೆಯ ಕರಾವಳಿ,ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.ತಗ್ಗು ಪ್ರದೇಶದ ಜನತೆಯಲ್ಲಿ ಆತಂಕ ಹೆಚ್ಚಾಗಿದ್ದು, ಹೆದ್ದಾರಿಗಳಲ್ಲಿ ವಾಹನ ಸವಾರರು ಪರದಾಡುವಂತಾಗಿದೆ.ಇನ್ನೆರಡು ದಿನ ಜಿಲ್ಲೆಯಲ್ಲಿ ಭಾರೀ ಮಳೆ ಆಗುವ ಸಾಧ್ಯತೆಗಳಿವೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಒಟ್ಟಾರೆ ಮಳೆಯಬ್ಬರಕ್ಕೆ ಕರಾವಳಿ ಪ್ರದೇಶದ ಜನ ತತ್ತರಿಸಿದ್ದಾರೆ.

RELATED ARTICLES

Related Articles

TRENDING ARTICLES