Saturday, November 2, 2024

ಟೈಲರ್ ಹತ್ಯೆ ಕೇಸ್​​ ; ರಕ್ಕಸರಷ್ಟೇ ಇಂಥ ಕೃತ್ಯ ಮಾಡಲು ಸಾಧ್ಯ: ಹೆಚ್ಡಿಕೆ

ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್‌ ಮಾಡಿರುವ ಅವರು, ‘ರಾಜಸ್ಥಾನದಲ್ಲಿ ಮುಗ್ಧ ಟೈಲರ್ ಶಿರಚ್ಛೇದ ಮಾಡಿರುವ ಘಟನೆ ನನಗೆ ತೀವ್ರ ಘಾಸಿ ಉಂಟು ಮಾಡಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪೈಶಾಚಿಕ ಕೃತ್ಯ. ಹಿಂಸೆ ಯಾವುದಕ್ಕೂ ಉತ್ತರವಲ್ಲ, ಪರಿಹಾರವೂ ಅಲ್ಲ. ಯಾವ ಧರ್ಮವೂ ಹಿಂಸೆಯನ್ನು ಒಪ್ಪುವುದೂ ಇಲ್ಲ ಎಂದರು.

‘ಕನ್ಹಯ್ಯ ಲಾಲ್ ಅವರನ್ನು ಹತ್ಯೆ ಮಾಡಿರುವುದನ್ನು ಪಕ್ಷಾತೀತವಾಗಿ ಖಂಡಿಸಲೇಬೇಕು. ಪಾತಕಿಗಳಿಗೆ ಕಠಿಣಾತಿ ಕಠಿಣ ಶಿಕ್ಷೆ ವಿಧಿಸಬೇಕು. ಮತ್ತೊಮ್ಮೆ ಇಂಥ ಘಟನೆಗಳು ಮರುಕಳಿಸಲೇಬಾರದು. ರಕ್ಕಸರಷ್ಟೇ ಇಂಥ ಹೇಯ ಕೃತ್ಯ ಎಸಗಲು ಸಾಧ್ಯ. ಕಾನೂನು-ಕಾಯ್ದೆ ಎನ್ನುವುದಕ್ಕಿಂತ ಮನಃಪರಿವರ್ತನೆಯಿಂದಲೇ ಇಂಥ ಕ್ರೂರ ಮನಃಸ್ಥಿತಿಯಿಂದ ಎಲ್ಲರೂ ಹೊರಬೇಕಿದೆ’ ಎಂದು ಹೇಳಿದ್ದಾರೆ.

‘ಕೊಂದು ಉಳಿಸಿಕೊಳ್ಳುವ ಧರ್ಮ ಯಾವುದಿದೆ? ಕೊಲೆ, ಕೋಮುವಾದ, ಅಸಹಿಷ್ಣುತೆ, ದ್ವೇಷದಿಂದ ಧರ್ಮಗಳು ಉಳಿಯುವುದಿಲ್ಲ. ಮಾನವೀಯತೆ ಸತ್ತರಷ್ಟೇ ಕೋಮುವಾದ ವಿಜೃಂಭಿಸುತ್ತದೆ. ದರ್ಪ ಹೆಚ್ಚಿದಷ್ಟೂ ಧರ್ಮಗಳೂ ಅಳಿಯುತ್ತವೆ. ಕನ್ಹಯ್ಯ ಅವರ ಕೊಲೆ ಇಂಥ ದರ್ಪವನ್ನು ನಾಮಾವಶೇಷ ಮಾಡಲಿ’ ಎಂದು ತಿಳಿಸಿದ್ದಾರೆ.

‘ಕನ್ಹಯ್ಯ ಅವರಿಗಾಗಿ ಇಡೀ ಭಾರತ ಕಣ್ಣೀರಿಡುತ್ತಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕರುಣಿಸಲಿ. ಕನ್ಹಯ್ಯ ಅವರ ಸಾವು, ಕೊಂದು ವಿಜೃಂಭಿಸುವ ಕಿರಾತಕ ಮನಃಸ್ಥಿತಿಯನ್ನು ಬದಲಿಸಲಿ. ಅವರ ಕುಟುಂಬದ ಜತೆ ನಾವೆಲ್ಲರೂ ನಿಲ್ಲೋಣ’ ಎಂದು ಎಚ್‌ಡಿಕೆ ಹೇಳಿದ್ದಾರೆ.

 

RELATED ARTICLES

Related Articles

TRENDING ARTICLES