ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರಕ್ಕೆ ಅವಕಾಶ ಕೊಡಲ್ಲ ಅಂತಾರೆ. ಆದರೆ, ದೂರು ಕೊಟ್ಟರು ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಪ್ರಧಾನಿ ಕಚೇರಿಯಿಂದ ಸಂಪರ್ಕಿಸಿಲ್ಲ. ಕೇಂದ್ರ ಗೃಹ ಇಲಾಖೆಯವರು ಸಂಪರ್ಕಿಸಿದ್ದಾರೆ. ನಾನು ಶುಕ್ರವಾರ ಮೈಸೂರಿನಲ್ಲಿದ್ದೆ. ಅವರು ನಮ್ಮ ಕಚೇರಿಗೆ ಬಂದಿದ್ದರು. ದೂರವಾಣಿ ಮೂಲಕ ನನ್ನ ಜೊತೆ ಮಾತನಾಡಿದರು.ಇಂದು ಭೇಟಿ ಮಾಡೋಣ ಎಂದಿದ್ದರು.
ಅಲ್ಲದೇ ತಮ್ಮ ಬಳಿ ದಾಖಲೆಗಳಿದ್ದರೆ ಕೊಡಿ ಎಂದು ಹೇಳಿದರು. ಇವತ್ತು ಮಾಧ್ಯಮಗಳಲ್ಲಿ ದೊಡ್ಡ ವರದಿಯಾಗಿದೆ. ಹಾಗಾಗಿ ಇವತ್ತು ಭೇಟಿ ಕ್ಯಾನ್ಸಲ್ ಮಾಡಿದ್ದಾರೆ.ಮುಂದಿನ ವಾರ ಭೇಟಿ ಮಾಡೋಣ ಎಂದಿದ್ದಾರೆ. ಅವರು ಭೇಟಿ ಮಾಡಿದರೆ ದಾಖಲೆ ನೀಡ್ತೇನೆ. ನಾನು ಎಲ್ಲ ದಾಖಲೆಗಳನ್ನ ಇಟ್ಟುಕೊಂಡಿದ್ದೇನೆ. ಇವತ್ತು ಕೋರ್ಟ್ ವಿಚಾರಣೆ ಕೂಡ ಇದೆ. ದೂರ ಕೊಟ್ಟ ನಂತರ ಸರ್ಕಾರದ ಕಡೆಯಿಂದ ಗುತ್ತಿಗೆದಾರರಿಗೆ ತೊಂದರೆ ಉಂಟಾಗುತ್ತಿದೆ ಎಂದರು.
ಇನ್ನು ಹೊಸ ಟೆಂಡರ್ ನೀಡ್ತಿಲ್ಲ, ಹಳೆಯ ಬಿಲ್ ಕೊಡ್ತಿಲ್ಲ. ನನ್ನ ದೂರಿನಿಂದ ಅವರಿಗೆ ತೊಂದರೆಯಾಗಿದೆ. ಇದರ ಬಗ್ಗೆ ನನ್ನ ಗಮನಕ್ಕೆ ತಂದಿದ್ದಾರೆ. ಆದರೆ ಇನ್ನೂ ಯಾರಿಗೂ ದೂರು ಕೊಟ್ಟಿಲ್ಲ. ಮತ್ತೊಮ್ಮೆ ಪ್ರಧಾನಿಯವರಿಗೆ ಪತ್ರ ಬರೆಯುತ್ತೇನೆ. ದಾಖಲೆ ಸಮೇತ ಅವರಿಗೆ ಪತ್ರ ಬರೆಯುವೆ ಎಂದು ತಿಳಿಸಿದರು.