Wednesday, January 22, 2025

ಎಲ್ಲೆಲ್ಲೂ ರಕ್ಕಮ್ಮನ್ನದ್ದೇ ಕಿಕ್ಕು.. ವಿಕ್ರಾಂತ್ ರೋಣನಿಗೆ ಲಕ್ಕು

ಒಂದ್ಕಡೆ ರಕ್ಕಮ್ಮನ ಕಿಕ್ಕು.. ಮತ್ತೊಂದ್ಕಡೆ ರೋಣನ ಮಸಲತ್ತು.. ಇವೆರಡೂ ಕಾರಣಗಳಿಂದಾಗಿ ವಿಕ್ರಾಂತ್ ರೋಣನ ಕ್ರೇಜ್ ಮುಗಿಲು ಮುಟ್ಟುತ್ತಿದೆ. ಎಲ್ಲೇ ಹೋದ್ರೂ ಕಿಚ್ಚನಿಗೆ ಗ್ರ್ಯಾಂಡ್ ವೆಲ್ಕಮ್. ಟ್ರೆಂಡ್ ಸೆಟ್ ಮಾಡೋಕೆ ಹೊರಟಿರೋ ವಿಆರ್​ ಚಿತ್ರದ ಸ್ಟೋರಿಲೈನ್​ನ ಕಿಚ್ಚನಿಗೆ ನೀಡಿದ್ಯಾರು..? ಫ್ಲಾಪ್ ಸಿನಿಮಾ ನೋಡಿ ಸುದೀಪ್ ಸ್ಫೂರ್ತಿ ಆಗಿದ್ದಾದ್ರು ಯಾಕೆ ಅನ್ನೋದ್ರ ಸ್ಪೆಷಲ್ ಸ್ಟೋರಿಯನ್ನು ಎಳೆ ಎಳೆಯಾಗಿ ಬಿಚ್ಚಿಡ್ತೀವಿ ನೀವೇ ಓದಿ

ರಿಲೀಸ್​ಗೆ 30ದಿನ.. ಪ್ಯಾನ್ ಇಂಡಿಯಾ ಪ್ರೊಮೋಷನ್ಸ್

ಸೌತ್ ಸಿನಿದುನಿಯಾದಲ್ಲಿ ಪ್ಯಾನ್ ಇಂಡಿಯಾ ಮೂವಿಗಳ ಕಾನ್ಸೆಪ್ಟ್ ಬರೋಕೂ ಮೊದ್ಲೇ ಆಲ್ ಇಂಡಿಯಾ ಕಟೌಟ್ ಆಗಿ ರಾರಾಜಿಸಿದ, ಈ ಜನರೇಷನ್​ನ ಏಕೈಕ ಕನ್ನಡದ ಸ್ಟಾರ್ ಅಂದ್ರೆ ಅದು ಕಿಚ್ಚ ಸುದೀಪ್. ಯೆಸ್​.. ಕನ್ನಡದಲ್ಲಷ್ಟೇ ಅಲ್ಲದೆ, ಪಕ್ಕದ ತೆಲುಗು, ತಮಿಳು ಹಾಗೂ ಹಿಂದಿಯಲ್ಲೂ ಛಾಪನ್ನೊತ್ತಿರೋ ಸುದೀಪ್, ಕರುನಾಡ ದೀಪದ ಬೆಳಕನ್ನ ದೇಶದುದ್ದಗಲಕ್ಕೂ ಹಬ್ಬಿದ್ದಾರೆ.

ಇದೀಗ ಅವ್ರ ಕರಿಯರ್​ನ ಮೋಸ್ಟ್ ಪ್ರೆಸ್ಟೀಜಿಯಸ್ ಮೂವಿ ವಿಕ್ರಾಂತ್ ರೋಣ ರಿಲೀಸ್​ಗೆ ದಿನಗಣನೆ ಶುರುವಾಗಿದೆ. ಇಂದಿಗೆ ಎಕ್ಸಾಕ್ಟ್ ಆಗಿ ಒಂದು ತಿಂಗಳಿಗೆ ರೋಣ ಬಿಗ್​ಸ್ಕ್ರೀನ್ ಆವರಿಸಿಕೊಳ್ಳಲಿದೆ. ಚಿತ್ರದ ಕಾನ್ಸೆಪ್ಟ್, ಕಥೆ, ಟೈಟಲ್, ಪಾತ್ರಗಳು ಹಾಗೂ ಮೇಕಿಂಗ್ ಪ್ಯಾಟ್ರನ್ ಹೀಗೆ ಎಲ್ಲವೂ ಸಿನಿರಸಿಕರ ನಾಡಿಮಿಡಿತ ಹೆಚ್ಚಿಸಿವೆ. ಕಾರಣ ಇದೊಂದು ವಿನೂತನ ಪ್ರಯತ್ನ ಹಾಗೂ ಪ್ರಯೋಗವೂ ಹೌದು.

ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಇಂಗ್ಲೀಷ್​ನಲ್ಲೂ ತಯಾರಾಗ್ತಿರೋ ಈ ಚಿತ್ರದಿಂದ ಕಿಚ್ಚನ ನಟನಾ ಗತ್ತು, ಇಡೀ ವಿಶ್ವಕ್ಕೆ ಗೊತ್ತಾಗೋ ಸಮಯ ಬರ್ತಿದೆ. ಅದ್ರಲ್ಲೂ ರಾ ರಾ ರಕ್ಕಮ್ಮ ಹಾಡಿನಿಂದ ಜಾಕ್ವೆಲಿನ್ ಸಿಕ್ಕಾಪಟ್ಟೆ ಕಿಕ್ ಕೊಡ್ತಿದ್ದಾರೆ. ಎಲ್ಲೆಲ್ಲೂ ರಕ್ಕಮ್ಮನದ್ದೇ ಕಿಕ್ಕು ಗುರು ಅನ್ನೋ ರೇಂಜ್​ಗೆ ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡ್ತಿದೆ ರೋಣ.

ರೀಸೆಂಟ್ ಆಗಿ ವಿಕ್ರಾಂತ್ ರೋಣ ಟೀಂ ಕೂಡ ಮುಂಬೈ, ಚೆನ್ನೈ, ಕೊಚ್ಚಿ ಹಾಗೂ ಹೈದ್ರಾಬಾದ್ ಹೀಗೆ ಪ್ಯಾನ್ ಇಂಡಿಯಾ ಪ್ರೊಮೋಷನ್ಸ್​​ ಮಾಡಿ ಎಲ್ಲರ ಹುಬ್ಬೇರಿಸಿತು. ರೋಣ ಕಾಲಿಟ್ಟಲ್ಲೆಲ್ಲಾ ಭರ್ಜರಿ ವೆಲ್ಕಮ್ ಜೊತೆಗೆ ಸಿನಿಮಾದ ಟ್ರೈಲರ್​ಗೆ ಬೊಂಬಾಟ್ ರೆಸ್ಪಾನ್ಸ್ ಸಿಕ್ಕಿತು. ಇದ್ರಿಂದ ಬಾಕ್ಸ್ ಆಫೀಸ್ ರೂಲ್ ಮಾಡಲಿದ್ದಾನೆ ರೋಣ ಅನ್ನೋದು ಈಗಾಗ್ಲೇ ಪರಭಾಷಿಗರಿಗೂ ಮನದಟ್ಟಾಗಿದೆ. ಆದ್ರೆ ಇಷ್ಟೆಲ್ಲಾ ಹಂಗಾಮ ಮಾಡ್ತಿರೋ ವಿಕ್ರಾಂತ್ ರೋಣ ಚಿತ್ರದ ಕಥೆಯನ್ನ ಕಿಚ್ಚನಿಗೆ ರೆಫರ್ ಮಾಡಿದ್ಯಾರು..? ಡೈರೆಕ್ಟರ್​ಗೆ ಸುದೀಪ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾದ್ರು ಹೇಗೆ ಅನ್ನೋದ್ರ ಇಂಟರೆಸ್ಟಿಂಗ್ ಮ್ಯಾಟರ್ ಹೇಳ್ತೀವಿ ನೋಡಿ.

ಸುದೀಪ್​ಗೆ ರೋಣ ಕಥೆ ರೆಫರ್ ಮಾಡಿದ್ದೇ ಪತ್ನಿ ಪ್ರಿಯಾ..!
ರಂಗಿತರಂಗ ಅಲ್ಲ.. ರಾಜರಥ ನೋಡಿ ಇಂಪ್ರೆಸ್ ಆದ ಕಿಚ್ಚ

ಪರಭಾಷಾ ಚಿತ್ರಗಳಲ್ಲಿ ನಟಿಸೋ ಮೂಲಕ ಕನ್ನಡದ ರಾಯಭಾರಿಯಾಗಿ ಕಿಚ್ಚನ ನಡೆ ನಿಜಕ್ಕೂ ಹೆಮ್ಮೆ ತರಿಸುವಂತಿತ್ತು. ಆದ್ರೆ ಇಡೀ ವಿಶ್ವವೇ ಮೆಚ್ಚೋ ಅಂತಹ ಒಂದು ಸಿನಿಮಾ ಮಾಡಿ, ಆ ಮೂಲಕ ನಮ್ಮ ಕನ್ನಡದ ಕೀರ್ತಿ ಪತಾಕೆಯನ್ನ ಮತ್ತಷ್ಟು ಎತ್ತರದಲ್ಲಿ ಹಾರಿಸೋ ಅಂತಹ ಕಾರ್ಯಕ್ಕೆ ಕೈ ಹಾಕಿದ್ರು ಸುದೀಪ್. ಆಗ ಅವ್ರ ಕನಸುಗಳಿಗೆ ನೀರೆರೆದಿದ್ದೇ ಆತ್ಮೀಯ ಗೆಳೆಯ ಕಮ್ ನಿರ್ಮಾಪಕ ಜಾಕ್ ಮಂಜು ಹಾಗೂ ನಿರ್ದೇಶಕ ಅನೂಪ್ ಭಂಡಾರಿ.

ಯೆಸ್.. ವಿಕ್ರಾಂತ್ ರೋಣ ಸಿನಿಮಾನ ದೊಡ್ಡ ಮಟ್ಟದಲ್ಲಿ ಮಾಡ್ಬೇಕು. ಅದ್ರ ಮೇಕಿಂಗ್ ನೆಕ್ಸ್ಟ್ ಲೆವೆಲ್​ಗಿರಬೇಕು ಅನ್ನೋದು ಇವ್ರ ಆಶಯವಾಗಿತ್ತು. ಅದನ್ನೀಗ ಸಾಕಾರಗೊಳಿಸಿದ್ದಾರೆ ಕೂಡ. ಆದ್ರೆ ಕಿಚ್ಚನಿಗೆ ವಿಕ್ರಾಂತ್ ರೋಣ ಕಥೆಯನ್ನ ರೆಫರ್ ಮಾಡಿದ್ದು ಅವ್ರ ಅರ್ಧಾಂಗಿ ಪ್ರಿಯಾ ಸುದೀಪ್ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಇದನ್ನ ರೀಸೆಂಟ್ ಆಗಿ ಸ್ವತಃ ಕಿಚ್ಚ ಸುದೀಪ್ ಅವ್ರೇ ಬಹಿರಂಗಪಡಿಸಿದ್ರು.
ಅದೇ ಕಾರಣಕ್ಕೆ ಪ್ರಿಯಾ ಸುದೀಪ್ ಹಿಂದೆ ಬೇರಾವ ಸಿನಿಮಾಗೂ ತೋರಿಸದೇ ಇರೋ ಅಷ್ಟು ಮುತುವರ್ಜಿ ಈ ಸಿನಿಮಾ ಮೇಲೆ ತೋರಿಸ್ತಿದ್ದಾರೆ. ಮೇಕಿಂಗ್, ಎಕ್ಸಿಗ್ಯೂಷನ್, ಪ್ರೊಮೋಷನ್ಸ್ ಹೀಗೆ ಎಲ್ಲಾ ವಿಚಾರದಲ್ಲೂ ಮುಂದೆ ನಿಂತು ಆರಡಿ ಕಟೌಟ್​ಗೆ ಸಾಥ್ ನೀಡ್ತಿದ್ದಾರೆ.

ಮತ್ತೊಂದು ಇಂಟರೆಸ್ಟಿಂಗ್​ ವಿಚಾರ ಅಂದ್ರೆ ಅನೂಪ್ ಭಂಡಾರಿಗೆ ಕಿಚ್ಚ ಈ ಆಫರ್ ನೀಡಿರೋದು ರಂಗಿತರಂಗ ನೋಡಿ ಅಲ್ಲ. ರಾಜರಥ ನೋಡಿ ಇಂಪ್ರೆಸ್ ಆಗಿ. ಅರೇ ಅದು ಫ್ಲಾಪ್ ಮೂವಿ ಅಲ್ವಾ ಅಂತ ಹುಬ್ಬೇರಿಸಬೇಡಿ. ಒಬ್ಬ ಟೆಕ್ನಿಷಿಯನ್ ಯಾವಾಗ್ಲೂ ಸೋತ ಸಿನಿಮಾಗಳಿಗೇನೇ ಹೆಚ್ಚು ಸೆಳೆಯಲ್ಪಡುತ್ತಾರೆ. ಡೈರೆಕ್ಟರ್ ಅನೂಪ್ ಭಂಡಾರಿ ವಿಚಾರದಲ್ಲೂ ಕಿಚ್ಚ ಅದೇ ಮಾಡಿದ್ರು.

ಅದೇನೇ ಇರಲಿ.. ಒಬ್ಬ ನಟ, ನಿರ್ದೇಶಕ, ನಿರೂಪಕ ಹಾಗೂ ಗಾಯಕನಾಗಿ ಸುದೀಪ್ ಇಲ್ಲಿಯವರೆಗೂ ಗುರ್ತಿಸಿಕೊಂಡಿದ್ರೂ ಸಹ, ಗುಮ್ಮನ ಕಥೆ ಮೂಲಕ ಡೈರೆಕ್ಟರ್ಸ್​ ಆರ್ಟಿಸ್ಟ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ರೋಣನ ಆ ಫ್ಯಾಂಟಮ್ ವರ್ಲ್ಡ್​ ರಹಸ್ಯ ಜುಲೈ 28ಕ್ಕೆ ತೆರೆದುಕೊಳ್ಳಲಿದ್ದು, ಕ್ಯೂರಿಯಾಸಿಟಿಯ ಬೆಟ್ಟ, ದಿನದಿಂದ ದಿನಕ್ಕೆ ಮುಗಿಲೆತ್ತರಕ್ಕೆ ಬೆಳೆಯುತ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES