Thursday, April 25, 2024

ಕಬ್ಬನ್ ಪಾರ್ಕ್​ನಲ್ಲಿ ಸಾಕು ನಾಯಿಗಳ ಪ್ರವೇಶಕ್ಕೆ ನಿರ್ಬಂಧ

ಬೆಂಗಳೂರು: ಕಬ್ಬನ್ ಪಾರ್ಕ್‌ ನಲ್ಲಿ ಸಾಕು ನಾಯಿಗಳ ವಾಯುವಿಹಾರಕ್ಕೆ ಜುಲೈ 1 ರಿಂದ ನಿರ್ಬಂಧ ಹೇರಲಾಗಿದೆ.

ಸಾರ್ವಜನಿಕರು ನಾಯಿಗಳನ್ನ ವಾಯುವಿಹಾರಕ್ಕಾಗಿ ಕರೆದುಕೊಂಡು ಬರ್ತಾರೆ. ಆದ್ರೆ ರಾಜ್ಯ ಸರ್ಕಾರ ಜುಲೈ 1ರಿಂದ ನಾಯಿಗಳನ್ನ ಕಬ್ಬನ್ ಪಾರ್ಕ್ ಕರೆದುಕೊಂಡು ಬರದಂತೆ ನಿಷೇಧ ಹೇರಲು ಮುಂದಾಗಿದೆ. ನಾಯಿಗಳು ಪದೇ ಪದೇ ತೊಂದರೆ ನೀಡುತ್ತಿರುವ ಬಗ್ಗೆ ವಾಯುವಿಹಾರಿಗಳಿಂದ ದೂರುಗಳು ಸಲ್ಲಿಕೆಯಾಗಿರುವುದರಿಂದ ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಗೆ ಈ ಪ್ರಸ್ತಾವ ಸಲ್ಲಿಸಲಾಗಿದೆ.

ಉದ್ಯಾನಗಳು ಮತ್ತು ಸಾರ್ವಜನಿಕ ಸ್ಥಳಗಳ ನಿಯಮಾವಳಿಗಳ ಅನ್ವಯ ನಿಷೇಧ ಹೇರುವ ಕುರಿತು ಉನ್ನತ ಮಟ್ಟದ ಸಮಿತಿಯು ಮುಂದಿನ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಉನ್ನತ ಮಟ್ಟದ ಸಮಿತಿಯ ಹಿಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದರೂ ನಿರ್ಧಾರ ಕೈಗೊಂಡಿರಲಿಲ್ಲ.

’ಸಾಕುನಾಯಿಗಳಿಗೆ ಕಡ್ಡಾಯವಾಗಿ ಸರಪಳಿ ಹಾಕಬೇಕು ಮತ್ತು ಅವುಗಳ ತ್ಯಾಜ್ಯವನ್ನು ಮಾಲೀಕರೇ ಸ್ವಚ್ಛಗೊಳಿಸಬೇಕು. ಉದ್ಯಾನದ ಹುಲ್ಲು ಹಾಸಿನ ಮೇಲೆ ಸಾಕುನಾಯಿಗಳ ಓಡಾಟ ನಿರ್ಬಂಧಿಸಲಾಗಿದೆ’ ಎನ್ನುವ ಸೂಚನಾ ಫಲಕಗಳನ್ನು ಉದ್ಯಾನದಲ್ಲಿ ಅಳವಡಿಸಲಾಗಿದೆ.

‘ನಿಯಮಗಳನ್ನು ಯಾರೂ ಪಾಲಿಸುತ್ತಿಲ್ಲ. ನಾಯಿಗಳಿಂದ ತೊಂದರೆ ಅನುಭವಿಸಿದ್ದೇವೆ. ಹೀಗಾಗಿ, ಲಾಲ್‌ ಬಾಗ್‌ ರೀತಿಯಲ್ಲಿ ಇಲ್ಲಿಯೂ ಸಾಕು ನಾಯಿಗಳಿಗೆ ನಿಷೇಧ ವಿಧಿಸಬೇಕು‘ ಎಂದು ವಾಯುವಿಹಾರಿಗಳು ಒತ್ತಾಯಿಸಿದ್ದಾರೆ.

‘ನಿಯಮಾವಳಿಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಗಿದೆ. ಆದರೆ, ಕೆಲವರು ಮಾತ್ರ ಪಾಲಿಸುತ್ತಾರೆ. ಸ್ವಚ್ಛತೆ ಕಾಪಾಡುತ್ತಿಲ್ಲ. ನಾಯಿಗಳಿಗೆ ಬೆಲ್ಟ್‌ ಹಾಕುತ್ತಿಲ್ಲ ಮತ್ತು ಎಲ್ಲೆಂದರಲ್ಲಿ ಗಲೀಜು ಮಾಡಿ ಪರಿಸರವನ್ನು ಹಾಳು ಮಾಡಲಾಗುತ್ತಿದೆ. ನಾಯಿಗಳಿಂದ ತೊಂದರೆಗೊಳಗಾದ 70ಕ್ಕೂ ಹೆಚ್ಚು ಮಂದಿ ದೂರು ನೀಡಿದ್ದಾರೆ. ಹೀಗಾಗಿಯೇ ಉದ್ಯಾನದಲ್ಲಿ ನಾಯಿಗಳ ಪ್ರವೇಶವನ್ನು ನಿಷೇಧಿಸುವ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಚ್‌.ಟಿ. ಬಾಲಕೃಷ್ಣ ತಿಳಿಸಿದ್ದಾರೆ.

ನಿಷೇಧದ ಪ್ರಸ್ತಾವಕ್ಕೆ ಪ್ರಾಣಿಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ದಯವಿಟ್ಟು ನಾಯಿಗಳಿಗೆ ನಿಷೇಧ ಹೇರಬೇಡಿ’ ಎಂದು ಪ್ರಾಣಿಪ್ರಿಯರು ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES