ವಿಜಯಪುರ : ಮುಂದಿನ ಸಿಎಂ ನಾನೇ ಎಂದು ಹೆಚ್ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರು ಕನಸು ಕಾಣೋದರಲ್ಲಿ ತಪ್ಪೇನಿಲ್ಲ. ರಾಜಕಾರಣ ಮಾಡುವವರು ಕನಸು ಕಾಣಲಿ, ದೇವರು ಅವರಿಗೆ ಒಳ್ಳೇದು ಮಾಡಲಿ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿನ ರಾಜಕೀಯ ಬೆಳವಣಿಗೆ ಹಾಗೂ ಆಪರೇಷನ್ ಕಮಲ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಅವರು ಸರ್ಕಾರ ಮಾಡಿದ್ದೇ ತಪ್ಪಾಗಿದೆ. ಕಾಂಗ್ರೆಸ್, ಎನ್ ಸಿ ಪಿ ಹಾಗೂ ಶಿವಸೇನೆ ಸೇರಿ ಸರ್ಕಾರ ಮಾಡಿದಾಗಲೇ ಗೊತ್ತಾಗಿತ್ತು, ಇದು ಕೋಮಾದಲ್ಲಿರುವ ಸರ್ಕಾರ ಬಹಳ ದಿನ ನಡೆಯೋದಿಲ್ಲ ಎಂಬುದು. ಆ ಸರ್ಕಾರ ಇಲ್ಲಿಯವರೆಗೂ ನಡೆದಿದ್ದೇ ದೊಡ್ಡ ವಿಷಯ ಎಂದರು.
ಇನ್ನು ಮಹಾರಾಷ್ಟ್ರದಲ್ಲಿ ಒಬ್ಬರ ಬಳಿ ಸ್ಟೇರಿಂಗ್, ಒಬ್ಬರ ಬಳಿ ಬ್ರೇಕ್, ಒಬ್ಬರ ಬಳಿ ಎಕ್ಸಲೇಟರ್ ಎಂಬಂತಾಗಿದೆ. ಮೂರು ಪಕ್ಷಗಳು ಚುನಾವಣೆಗೆ ಹೋಗಿದ್ದ ವೇಳೆ ಅವರ ಸಿದ್ಧಾಂತಗಳು, ಪ್ರಣಾಳಿಕೆಗಳು ಬೇರೆ ಬೇರೆ ಆಗಿದ್ದವು.ಹಾಗಾಗಿ ಅವರೆಲ್ಲ ಸೇರಿ ಸರ್ಕಾರ ನಡೆಸಿದ್ದೇ ತಪ್ಪಾಗಿದೆ.ತಮ್ಮ ತಮ್ಮಲ್ಲಿನ ಒಡೆಕಿನಿಂದ ಅವರು ಹೊರಗಡೆ ಹೋಗ್ತಿದ್ದಾರೆ.ಇದರಲ್ಲಿ ಬಿಜೆಪಿ ಕೈವಾಡ ಇಲ್ಲ, ಬಿಜೆಪಿಯಿಂದ ಆಪರೇಷನ್ ಕಮಲ ಮಾಡಿಲ್ಲ. ಮುಂದೆ ಏನು ಮಾಡಬೇಕು ಎಂಬುದು ರಾಜ್ಯ ಹಾಗೂ ರಾಷ್ಟ್ರ ನಾಯಕರು ತೀರ್ಮಾನಿಸುತ್ತಾರೆ ಎಂದು ಸ್ಪಷ್ಟನೆ ಕೊಟ್ಟರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ, ಉಮೇಶ ಕತ್ತಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಒಂಭತ್ತು ಬಾರಿ ಚುನಾಯಿತರಾಗಿದ್ದಾರೆ. ಅವರಿಗೆ ಅನುಭವ ಇದೆ, ಅದು ಅವರ ವೈಯಕ್ತಿಕ ವಿಚಾರ. ಇದು ಪಕ್ಷದ್ದಾಗಲಿ ಅಥವಾ ಸರ್ಕಾರದ್ದಲ್ಲ ಎಂದು ಪ್ರತಿಕ್ರಿಯಿಸಿದರು.