ಮಂಗಳೂರು : ಅಧಿಕಾರಿಯೊಬ್ಬ ಮನಸ್ಸು ಮಾಡಿದರೆ ಸಮಾಜಕ್ಕೆ, ಬಡವರಿಗೆ ಹೇಗೆ ಸಹಾಯ ಆಗಬಹುದು ಎಂಬುದಕ್ಕೆ ನಿದರ್ಶನ ಆಗಬಲ್ಲ ಕತೆಯಿದು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಶಿಕ್ಷಣಾಧಿಕಾರಿ ಲೋಕೇಶ್, ದಲಿತ ಸಮುದಾಯದ ಬಡ ಮಹಿಳೆಯ ಕುಟುಂಬಕ್ಕೆ ದಾನಿಗಳ ಸಹಾಯ ಪಡೆದು ಮನೆಯನ್ನೇ ಕಟ್ಟಿಕೊಟ್ಟಿದ್ದಾರೆ.
ಇನ್ನು, ಎರಡು ವರ್ಷಗಳ ಹಿಂದೆ ಶಿಕ್ಷಣ ಇಲಾಖೆಯ ಮನೆ- ಮನ ಭೇಟಿ ಯೋಜನೆಯಡಿ ಎಸ್ಸೆಸ್ಸೆಲ್ಸಿ ಓದುತ್ತಿರುವ ಬಡ ಮಕ್ಕಳ ಮನೆಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ಪುತ್ತೂರಿನ ಪೆರ್ವತ್ತೋಡಿಯ ಸುನಂದಾ ಎಂಬ ವಿಧವೆ ಮಹಿಳೆಯ ಕಿರಿಯ ಮಗಳು ಆಗ ಎಸ್ಸೆಸ್ಸೆಲ್ಸಿ ಓದುತ್ತಿದ್ದಳು. ಹೀಗಾಗಿ ಶಿಕ್ಷಣಾಧಿಕಾರಿ ನೇತೃತ್ವದ ತಂಡ ಅವರ ಮನೆಗೆ ತೆರಳಿ, ಅಲ್ಲಿನ ಬಡತನ ಕಂಡು ಮರುಗಿದ್ದರು. ಉಳಿಯೋದಕ್ಕೆ ಸರಿಯಾದ ಮನೆ ಇಲ್ಲದಿದ್ದರೂ, ಇಬ್ಬರು ಹೆಣ್ಣು ಮಕ್ಕಳನ್ನು ಕಷ್ಟದಿಂದ ಓದಿಸುತ್ತಿದ್ದ ಮಹಿಳೆಯ ದಿಟ್ಟತನ ನೋಡಿದ ಶಿಕ್ಷಣಾಧಿಕಾರಿ ಲೋಕೇಶ್ ಮತ್ತು ಕೊಂಬೆಟ್ಟು ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ ಗೀತಾಮಣಿ, ಅವರಿಗೊಂದು ಮನೆ ಕಟ್ಟಿಕೊಡಲು ನಿರ್ಧರಿಸಿದ್ದರು.
ಅದಲ್ಲದೇ, ಸ್ಥಳೀಯ ದಾನಿಗಳು, ರೋಟರಿ ಕ್ಲಬ್ ಸಹಯೋಗದಲ್ಲಿ ಒಂದೂವರೆ ವರ್ಷದ ಪ್ರಯತ್ನದಿಂದ ಮನೆ ಕಟ್ಟಡ ನಿರ್ಮಿಸಿದ್ದು ನಾಡಿದ್ದು ಜುಲೈ ಒಂದರಂದು ಮನೆಯನ್ನು ಅಧಿಕೃತ ಹಸ್ತಾಂತರ ಮಾಡಲಿದ್ದಾರೆ. ಇವರ ಬಡತನ ನೋಡಿ ಹಕ್ಕುಪತ್ರ ದೊರಕಿಸುತ್ತೇವೆ, ಮನೆ ನಿರ್ಮಿಸಿ ಕೊಡುತ್ತೇವೆ ಎಂದು ರಾಜಕಾರಣಿಗಳು ಭರವಸೆ ನೀಡಿದ್ದರೂ, ಅದು ಈಡೇರಿರಲಿಲ್ಲ. ಈಗ ಶಿಕ್ಷಣಾಧಿಕಾರಿಯೊಬ್ಬ ಬಡ ಮಹಿಳೆಯ ಕುಟುಂಬಕ್ಕೆ ಆಸರೆಯಾಗಿ ನಿಂತು ಮನೆ ಕಟ್ಟಿಕೊಟ್ಟಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.