ಮುಂಬೈ : ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸರ್ಕಾರದ ಬಂಡಾಯ ಬಾವುಟ ಹಾರಿಸಿರುವ ಶಿವಸೇನೆಯ ಶಾಸಕರನ್ನು ಅನರ್ಹಗೊಳಿಸದಂತೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಬಂಡಾಯ ನಾಯಕ ಏಕನಾಥ್ ಶಿಂಧೆ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್, ಅನರ್ಹತೆಯ ಕ್ರಮವನ್ನು ತೆಗೆದುಕೊಳ್ಳದಂತೆ ಸೂಚನೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿದೆ.
ಏಕನಾಥ್ ಶಿಂಧೆ ಮತ್ತು ಇತರ 15 ಬಂಡಾಯ ಶಾಸಕರಿಗೆ ನೀಡಲಾದ ಅನರ್ಹತೆ ನೋಟಿಸ್ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಶಿಂಧೆ ಬಣಕ್ಕೆ ತಾತ್ಕಾಲಿಕ ರಿಲೀಫ್ ಕೊಟ್ಟಿದೆ. ಉಪ ಸ್ಪೀಕರ್ ನರಹರಿ ಜಿರ್ವಾಲ್, ಮುಖ್ಯ ಸಚೇತಕ ಸುನಿಲ್ ಪ್ರಭು, ಶಾಸಕಾಂಗ ಪಕ್ಷದ ನಾಯಕ ಅನಿಲ್ ಚೌಧರಿ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟವು ಶಾಸಕರ ಬೆಂಬಲವನ್ನು ಕಳೆದುಕೊಂಡಿದೆ. ಶಿವಸೇನೆಯ 55 ಶಾಸಕರಲ್ಲಿ 38 ಶಾಸಕರು ಮೈತ್ರಿಕೂಟಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆ ಮೂಲಕ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆದುಕೊಂಡಿದ್ದಾರೆ. ಈಗ ಮೈತ್ರಿ ಸರ್ಕಾರವು ಸದನದಲ್ಲಿ ಬಹುಮತ ಕಳೆದುಕೊಂಡಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇತ್ತ, ಶಿವಸೇನೆ ಕಾರ್ಯಕರ್ತರು ರೆಬೆಲ್ಸ್ ವಿರುದ್ಧ ಕಿಡಿ ಕಾರುತ್ತಿದ್ದಾರೆ.
ನೀವು ಬಾಂಬೆ ಹೈಕೋರ್ಟ್ ಅನ್ನು ಮೊದಲು ಏಕೆ ಸಂಪರ್ಕಿಸಲಿಲ್ಲ ಎಂದು ಬಂಡಾಯ ಶಾಸಕರ ಪರ ವಕೀಲರಿಗೆ ಸುಪ್ರೀಂಕೋರ್ಟ್ ಪ್ರಶ್ನೆ ಮಾಡಿತು. ಈ ವೇಳೆ ಉತ್ತರ ನೀಡಿದ ವಕೀಲ ಎನ್.ಕೆ.ಕೌಲ್, ಬಂಡಾಯ ಶಾಸಕರ ಮನೆ ಮತ್ತು ಆಸ್ತಿಗಳಿಗೆ ತೀವ್ರ ಬೆದರಿಕೆ ಒಡ್ಡಲಾಗುತ್ತಿದೆ. ಈ ಹಂತದಲ್ಲಿ ಬಾಂಬೆಯಲ್ಲಿನ ವಾತಾವರಣವು ಶಾಸಕರ ಹಕ್ಕು ಮಂಡನೆಗೆ ಪೂರಕವಾಗಿಲ್ಲ ಎಂದಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಲಾದ ಪ್ರತ್ಯೇಕ ಅರ್ಜಿಯಲ್ಲಿ ಏಕನಾಥ್ ಶಿಂಧೆ ತಮ್ಮ ಬಣದ ಶಾಸಕರ ಜೀವಕ್ಕೆ ಬೆದರಿಕೆ ಇರುವ ಬಗ್ಗೆ ದೂಷಿಸಲಾಗಿದೆ. ಈ ಅರ್ಜಿಯಲ್ಲಿ ಸಂಜಯ್ ರಾವತ್ ನೀಡಿರುವ ಮೃತ ದೇಹ ಎಂಬ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಪ್ರಬಲ ಸಂಘಟನೆ ಶಿವಸೇನೆ ಇಬ್ಬಾಗವಾಗಿದೆ. ಹಲವಾರು ವರ್ಷದಿಂದ ಸಂಘಟನೆಗೆ ಕೆಲಸ ಮಾಡಿರುವ ಕಾರ್ಯಕರ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷದಲ್ಲಿ ಗೊಂದಲ ಮೂಡಿರುವುದರಿಂದ ಮುಂಬೈನ ಉದ್ದವ್ ಠಾಕ್ರೆ ನಿವಾಸಕ್ಕೆ ರಾಜ್ಯದ ಹಲವೆಡೆಯಿಂದ ಶಿವಸೇನೆ ಕಾರ್ಯರ್ತರು ಆಗಮಿಸುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ಜೋರಾಗ್ತಿದೆ. ಶಿಂಧೆ ಬಣದ ವಿರುದ್ಧ ಠಾಕ್ರೆ ಸೇನೆ ಆಕ್ರೋಶ ಹೊರ ಹಾಕ್ತಿದೆ. ಸಿಎಂ ಉದ್ಧವ್ ಠಾಕ್ರೆ ಮನೆ ಬಳಿ ಶಿವಸೇನೆ ಕಾರ್ಯಕರ್ತರು ಬರ್ತಾನೆ ಇದ್ದಾರೆ.. ಈ ಮಧ್ಯೆ, ಸುಪ್ರೀಂ ಕೋರ್ಟ್ ಅಂಗಳದಲ್ಲಿ ಪ್ರಕರಣದ ಚಂಡು ಇದ್ದು, ಜುಲೈ 11ರಂದು ಏನ್ ತೀರ್ಪು ಬರುತ್ತೆ ಅಂತ ಕಾದು ನೋಡ್ಬೇಕು.
ಸಿದ್ದೇಶ್ ಪುಠಾಣೆ, ಪವರ್ ಟಿವಿ ಮುಂಬೈ