ರಾಮನಗರ : ಬಿಜೆಪಿ ನಾಯಕರ ನಡವಳಿಕೆ ಅವರು ಮಾಡಿದ್ದೇ ಸರಿ ಅನ್ನೋ ರೀತಿ ಆಗಿದೆ ಎಂದು ರಾಮನಗರದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಡಳಿತ ಪಕ್ಷದ ವಿರುದ್ಧ ಕಿಡಿಕಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಮುಗಿಸಲು ಹೊರಟಿದ್ದರು ಎಂಬ ಸಚಿವ ಅಶ್ವತ್ಥ್ ನಾರಾಯಣ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ರಾಜಕಾರಣದಲ್ಲಿ ತುಂಬಾ ಪಕ್ಷಗಳು ಬಂದು ಹೋಗಿವೆ. ಯಾರು ಯಾರನ್ನ ಮುಗಿಸುತ್ತಾರೋ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಯಾರೂ ಶಾಶ್ವತವಾಗಿಲ್ಲ, ಈ ದೇಶ ವಿಶ್ವದಲ್ಲಿ ಅನೇಕ ಜನರು
ಅವರದ್ದೇ ಆದಂತಹ ಸಾಮ್ರಾಜ್ಯ ಸ್ಥಾಪಿಸಲು ಹೋಗಿ ನೆಲ ಕಚ್ಚಿರುವ ಇತಿಹಾಸ ಇದೆ ಎಂದು ಟಾಂಗ್ ಕೊಟ್ಟಿದ್ದಾರೆ.
ಇನ್ನು ಮುಂದಿನ ದಿನಗಳಲ್ಲಿ ಬಿಜೆಪಿ ನಾಯಕರಿಗೆ ಇತಿಶ್ರೀ ಕಾಲ ಹತ್ತಿರ ಇದೆ. ಮಹಾರಾಷ್ಟ್ರ ನಮ್ಮ ಹಕ್ಕು, ಇಡೀ ದೇಶವೇ ನಮ್ಮ ಹಕ್ಕು ಎನ್ನುವ ಅಶ್ವಥ್ ನಾರಾಯಣಗೂ ಮಹಾರಾಷ್ಟ್ರಗೂ ಏನು ಸಂಬಂಧ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ,