Friday, November 22, 2024

ಮಕ್ಕಳ ಸಾವನ್ನು ಕಣ್ಣೆದುರೇ ಕಂಡಿದ್ದ ಏಕನಾಥ್ ಶಿಂಧೆ; ಇಂದು ಇಡೀ ಶಿವಸೇನೆಯೇ ಬೆನ್ನಹಿಂದೆ!

ಕಣ್ಣೆದುರೇ ತನ್ನಿಬ್ಬರು ಮಕ್ಕಳು ನದಿಯಲ್ಲಿ ಮುಳುಗಿ ಸಾವು ಕಂಡಿದ್ದನ್ನು ನೋಡಿದ್ದ ಏಕನಾಥ್ ಶಿಂಧೆ, ರಾಜಕೀಯವಲ್ಲ ತನಗೆ ಜೀವನವೇ ಬೇಡ ಎಂದು ಕೂತುಬಿಟ್ಟಿದ್ದರು. ಈ ವೇಳೆ ತಮ್ಮ ರಾಜಕೀಯ ಗುರು ಆನಂದ್ ದಿಘೆ ಅವರ ಮಾತಿಗೆ ಕಟ್ಟುಬಿದ್ದು ರಾಜಕೀಯಕ್ಕೆ ಮರಳಿದ್ದ ಏಕನಾಥ್ ಶಿಂಧೆಗೆ ಇಂದು ಇಡೀ ಶಿವಸೇನೆಯೇ ಅವರ ಬೆನ್ನ ಹಿಂದೆ ನಿಂತಿದೆ ಎಂದರೆ ಅದಕ್ಕೆ ಕಾರಣ ಅವರ ಇಚ್ಛಾಶಕ್ತಿ.

ಬೆಂಗಳೂರು: ಅದು 2000 ಇಸವಿಯ ಜೂನ್ 2. ಏಕನಾಥ್ ಶಿಂಧೆ ಕುಟುಂಬ ಸಮೇತರಾಗಿ ಸತಾರಕ್ಕೆ ಹೋಗಿದ್ದರು. 11 ವರ್ಷದ ಪುತ್ರ ದೀಪೇಶ್, 7 ವರ್ಷದ ಮಗಳು ಶುಭಧ, ಹಿರಿಯ ಮಗ 14 ವರ್ಷದ ಶ್ರೀಕಾಂತ್ ಹಾಗೂ ಪತ್ನಿಯ ಜೊತೆ ತೆರಳಿದ್ದರು. ಆದರೆ, ಅವರ ಕುಟುಂಬ ಈ ಪ್ರವಾಸದಲ್ಲಿ ಕಂಡುಕೇಳರಿಯದ ದುರಂತಕ್ಕೆ ಸಾಕ್ಷಿಯಾಗಿತ್ತು. ಬೋಟಿಂಗ್‌ ಮಾಡಲು ಇಳಿದಿದ್ದ ಏಕನಾಥ್ ಶಿಂಧೆಯ 2ನೇ ಮಗ ದೀಪೇಶ್ ಹಾಗೂ ಮಗಳು ಶುಭಧ ಅವರ ಕಣ್ಣೆದುರೇ ನೀರಿನಲ್ಲಿ ಮುಳುಗಿ ಸಾವು ಕಂಡಿದ್ದರು. ಹಿರಿಯ ಮಗ ಹಾಗೂ ಪತ್ನಿಯನ್ನು ತಬ್ಬಿಕೊಂಡು ಅತ್ತಿದ್ದ ಏಕನಾಥ್ ಶಿಂಧೆಯನ್ನು ಸಮಾಧಾನ ಮಾಡಲು ನೆರೆದಿದ್ದವರಿಗೆ ಯಾರಿಗೂ ಸಾಧ್ಯವಾಗಿರಲಿಲ್ಲ.

ರಾಜಕೀಯದಲ್ಲಿ ಆಗ ತಾನೆ ಅಂಬೆಗಾಲಿಡುತ್ತಿದ್ದ ಏಕನಾಥ್ ಶಿಂಧೆ ಅಂದಿನ ದಿನವನ್ನು ನೆನಪಿಸಿಕೊಂಡರೆ ಈಗಲೂ ಭಾವುಕರಾಗುತ್ತಾರೆ. “ಅದು ನನ್ನ ಜೀವನದ ಕರಾಳ ದಿನವಷ್ಟೇ. ನನ್ನ ಕೈಯಿಂದ ಏನೂ ಮಾಡಲು ಸಾಧ್ಯವಾಗಿರಲಿಲ್ಲ. ರಾಜಕೀಯ ಸೇರಿ ಎಲ್ಲವನ್ನೂ ಬಿಟ್ಟುಬಿಡಬೇಕೆಂದು ಆಗ ನಿರ್ಧರಿಸಿದ್ದೆ’ ಎಂದು ಜೀವನದ ಕರಾಳ ಘಟನೆಯ ಬಗ್ಗೆ ಹೇಳಿದ್ದರು.

ಈ ಘಟನೆ ನಡೆದು 22 ವರ್ಷಗಳಾಗಿವೆ. ಈಗ ಏಕನಾಥ್ ಶಿಂಧೆ, ಇಡೀ ಶಿವಸೇನೆ ಹಾಗೂ ಉದ್ಧವ್ ಠಾಕ್ರೆ ಬುಡವನ್ನೇ ಅಲುಗಾಡಿಸಿದ್ದಾರೆ. ಒಂದು ಕಾಲದಲ್ಲಿ ರಾಜಕೀಯವನ್ನೇ ಬಿಟ್ಟು ಹೋಗಬೇಕು ಎಂದುಕೊಂಡಿದ್ದ ಏಕನಾಥ್ ಶಿಂಧೆ, ಇಂದು ಶಿವಸೇನೆಯ ದೊಡ್ಡ ನಾಯಕರಾಗಿ ಬೆಳೆದಿದ್ದು ಹೇಗೆ? ಇಡೀ ಶಿವಸೇನೆಯ ಎರಡನೇ ಮೂರರಷ್ಟು ಶಾಸಕರು ಏಕನಾಥ್ ಶಿಂಧೆ ಹಿಂದೆ ಹೋಗಿದ್ದೇಗೆ?

1964ರ ಫೆಬ್ರವರಿ 9 ರಂದು ಜನಿಸಿದ ಏಕನಾಥ್ ಶಿಂಧೆ, ಮಹಾರಾಷ್ಟ್ರದ ಸತಾರ ಜಿಲ್ಲೆಯ ಪಾಹರಿ ಜವಳಿಯವರು. ಆದರೆ, ಇವರ ಇಡೀ ಕಾರ್ಯಕ್ಷೇತ್ರ ಥಾಣೆ. ಹಿಂದೊಮ್ಮೆ ಥಾಣೆ ನಗರದಲ್ಲಿ ಆಟೋ ರಿಕ್ಷಾ ಓಡಿಸುವ ಮೂಲಕ ಏಕನಾಥ್ ಶಿಂಧೆ ಜೀವನ ನಡೆಸುತ್ತಿದ್ದರು. ಇವರ ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ ಶಿವಸೇನೆಯ ಬಲಾಢ್ಯ ನಾಯಕ ಆನಂದ್ ದಿಘೆ, ಏಕನಾಥ್ ಶಿಂಧೆಯನ್ನು ಪಕ್ಷಕ್ಕೆ ಸೇರಿಸಿಕೊಂಡರು. ಆರಂಭದಲ್ಲಿ ಶಿವ ಸೇನೆಯ ಶಾಖೆಯ ಚೀಫ್ ಆಗಿದ್ದ ಏಕನಾಥ್ ಶಿಂಧೆ, ಬಳಿಕ ಥಾಣೆಯ ಮುನ್ಸಿಪಲ್ ಕಾರ್ಪೋರೇಟರ್ ಆಗುವವರೆಗೂ ಬೆಳೆದಿದ್ದರು. ಆದರೆ, ಮಗ ಹಾಗೂ ಮಗಳು ಕಣ್ಣೆದುರೇ ನೀರಿನಲ್ಲಿ ಮುಳುಗಿ ಸಾವು ಕಂಡಾಗ ಏಕನಾಥ್ ಶಿಂಧೆ ರಾಜಕೀಯವನ್ನು ತೊರೆಯಬೇಕು ಎಂದು ನಿರ್ಧರಿಸಿದ್ದರು. ಈ ವೇಳೆ ಆನಂದ್ ದಿಘೆ ಮನವೊಲಿಸಿ ಶಿಂಧೆ ಅವರನ್ನು ರಾಜಕೀಯದಲ್ಲಿಯೇ ಉಳಿಯುವಂತೆ ಮಾಡಿದ್ದರು.

ಆನಂದ್ ದಿಘೆ ಸಾವಿನ ಬಳಿಕ ಬದಲಾದ ಅದೃಷ್ಟ: 2001ರ ಆಗಸ್ಟ್ 26 ರಂದು ಶಿವಸೇನೆ ದೊಡ್ಡ ಆಘಾತ ಎದುರಿಸಿತ್ತು. ಪಕ್ಷದ ಪ್ರಭಾವಿ ನಾಯಕ ಆನಂದ್ ದಿಘೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇಂದಿಗೂ ಇದನ್ನು ಕೊಲೆ ಎಂದೇ ಮಹಾರಾಷ್ಟ್ರದಲ್ಲಿ ನಂಬುವವರಿದ್ದಾರೆ. ದಿಘೆ ಅವರ ಸಾವಿನ ಕುರಿತಾಗಿ ಮರಾಠಿ ಭಾಷೆಯಲ್ಲಿ ಧರ್ಮವೀರ್ ಎನ್ನುವ ಚಿತ್ರವೂ ನಿರ್ಮಾಣವಾಗಿತ್ತು. ಧರ್ಮ್ ವೀರ್‌ ಎನ್ನುವ ಹೆಸರಿನಿಂದಲೇ ದಿಘೆ ಗುರುತಿಸಿಕೊಂಡಿದ್ದರು.

ದಿಘೆ ಸಾವಿನ ಬಳಿಕ, ಥಾಣೆಯಲ್ಲಿ ತನ್ನ ವರ್ಚಸ್ಸನ್ನು ಉಳಿಸಿಕೊಳ್ಳಬೇಕಾದಲ್ಲಿ ಶಿವಸೇನೆಗೆ ಪ್ರಖ್ಯಾತ ಮುಖ ಬೇಕಿತ್ತು. ಥಾಣೆಯಲ್ಲಿ ಯಾವುದೇ ಪ್ರಭಾವಿ ನಾಯಕನಿಲ್ಲದೆ ಹಾಗೇ ಬಿಡಲು ಶಿವಸೇನೆ ಸುತಾರಾಂ ಒಪ್ಪಿರಲಿಲ್ಲ. ಯಾಕೆಂದರೆ, ಥಾಣೆ ಮಹಾರಾಷ್ಟ್ರದ ಅತೀದೊಡ್ಡ ಜಿಲ್ಲೆಗಳಲ್ಲಿ ಒಂದು ಮಾತ್ರವಲ್ಲ, ಶಿವಸೇನೆಯ ಶಕ್ತಿಕೇಂದ್ರವೂ ಆಗಿತ್ತು. ಆರಂಭದಿಂದಲೂ ದಿಘೆ ಅವರೊಂದಿಗೆ ಬೆಳೆದಿದ್ದ ಶಿಂಧೆಗೆ ಥಾಣೆಯ ಪಟ್ಟ ನೀಡಲು ಶಿವಸೇನೆ ತೀರ್ಮಾನಿಸಿತ್ತು. ಕೆಲವೇ ವರ್ಷದಲ್ಲಿ ಭಾಳಾ ಸಾಹೇಬ್ ಠಾಕ್ರೆ ಸೇರಿದಂತೆ ಇಡೀ ಶಿವಸೇನೆ ನಾಯಕರು ಅಚ್ಚರಿ ಪಡುವ ರೀತಿಯಲ್ಲಿ ಇಡೀ ಥಾಣೆಯಲ್ಲಿ ತಮ್ಮ ಛಾಪು ಮೂಡಿಸಿಬಿಟ್ಟಿದ್ದರು ಏಕನಾಥ್ ಶಿಂಧೆ.

ನಾಲ್ಕು ಬಾರಿ ಥಾಣೆಯ ಶಾಸಕರಾಗಿದ್ದ ಶಿಂಧೆ: ಒಂದಲ್ಲ, ಎರಡಲ್ಲ ಸತತ ನಾಲ್ಕು ಬಾರಿ ಥಾಣೆಯಿಂದ ಏಕನಾಥ್ ಶಿಂಧೆ ವಿಧಾನಸಭೆಗೆ ಆಯ್ಕೆಯಾಗಿದ್ದರು. ಗುರು ಆನಂದ್ ದಿಘೆ ಅವರಂತೆ ಶಿಂಧೆ ಕೂಡ ಕಡಿಮೆ ಸಮಯದಲ್ಲಿಯೇ ಜನತೆಯ ನೆಚ್ಚಿನ ನಾಯಕರಾದರು. 2004ರಲ್ಲಿ ಮೊದಲ ಬಾರಿಗೆ ಶಾಸಕರಾದ ಶಿಂಧೆ ಆ ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. ನೋಡನೋಡುತ್ತಲೇ ತಮ್ಮ ವರ್ಚಸ್ಸನ್ನು ಬೆಳೆಸಿಕೊಂಡ ಶಿಂಧೆ, ಥಾಣೆ ರಾಜನೀತಿಯ ಕೇಂದ್ರಬಿಂದುವಾಗಿ ಗುರುತಿಸಿಕೊಂಡರು.

ಇನ್ನು ಸಚಿವ ಸ್ಥಾನಗಳನ್ನೂ ಶಿಂಧೆ ಸಮರ್ಥವಾಗಿ ನಿಭಾಯಿಸಿದ್ದರು. 2014ರಲ್ಲಿ ಫಡ್ನವಿಸ್ ಸರ್ಕಾರದಲ್ಲಿ ಪಿಡಬ್ಲ್ಯಡಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಅವರು, 2019ರಲ್ಲಿ ಸಾರ್ವಜನಿಕ ಸ್ವಾಸ್ಥ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ನಗರ ವಿಕಾಸ ಇಲಾಖೆಯ ಸಚಿವರಾಗಿದ್ದರು. ಮಹಾರಾಷ್ಟ್ರದಲ್ಲಿ ಸಾಮಾನ್ಯವಾಗಿ ಈ ಎರಡು ಇಲಾಖೆಗಳನ್ನು ಮುಖ್ಯಮಂತ್ರಿ ತಮ್ಮಲ್ಲೇ ಇರಿಸಿಕೊಳ್ಳುತ್ತಾರೆ.

ಇಡೀ ಪ್ರಕರಣದ ಹಿಂದೆ ಶಿಂಧೆ ಪುತ್ರ ಹಾಗೂ ಫಡ್ನವಿಸ್ ಶಾಮೀಲು: ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳುವ ಸಲುವಾಗಿ ವೈದ್ಯನಾಗಿದ್ದ ಪುತ್ರ ಶ್ರೀಕಾಂತ್‌ ಶಿಂಧೆಯನ್ನೂ ರಾಜಕೀಯಕ್ಕೆ ಇಳಿಸಿದ್ದರು. ಕಲ್ಯಾಣದ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಶ್ರೀಕಾಂತ್ ಗೆಲುವು ಸಾಧಿಸಿದ್ದರು. ಏಕನಾಥ್ ಶಿಂಧೆ ಬಂಡಾಯವೇಳಲು ಪ್ರಮುಖ ಕಾರಣ ಅವರ ಪುತ್ರ ಶ್ರೀಕಾಂತ್ ಶಿಂಧೆ ಎಂದು ಹೇಳಲಾಗುತ್ತಿದೆ.

ಬಿಜೆಪಿಯೊಂದಿಗೆ ತಮ್ಮ ರಾಜಕೀಯ ಭವಿಷ್ಯ ಉಜ್ವಲವಾಗಿರಲಿದೆ ಎಂದು ಶ್ರೀಕಾಂತ್ ಭಾವಿಸಿದ್ದಾರೆ. ಇನ್ನು ಬಿಜೆಪಿಯಲ್ಲಿ ಅದರಲ್ಲೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ಏಕನಾಥ್ ಶಿಂಧೆ ಬಂಡಾಯವೇಳುವ ಹಿಂದಿದ್ದಾರೆ. ಉದ್ಧವ್ ಠಾಕ್ರೆಗೆ ಸೆಡ್ಡು ಹೊಡೆಯಬಲ್ಲ ಯಾವುದಾದರೂ ನಾಯಕ ಶಿವಸೇನೆಯಲ್ಲಿ ಇದ್ದಾರೆಂದರೆ ಅದು ಏಕನಾಥ್ ಶಿಂಧೆ ಮಾತ್ರವೇ ಎನ್ನುವುದು ಫಡ್ನವಿಸ್‌ಗೆ ಚೆನ್ನಾಗಿ ಗೊತ್ತಿತ್ತು.

ಹಲವಾರು ವೇದಿಕೆಗಳಲ್ಲಿ ಶಿವಸೇನೆಯಲ್ಲಿ ಏಕನಾಥ್ ಶಿಂಧೆಯನ್ನು ಸೈಡ್‌ ಲೈನ್ ಮಾಡಲಾಗುತ್ತಿದೆ ಎಂದು ಹೇಳಿತ್ತು. ಶಿವಸೇನೆಗೆ ನೀವೆಂದೂ ಮುಖ್ಯರಲ್ಲ, ಠಾಕ್ರೆ ಕುಟುಂಬವೇ ಅವರಿಗೆ ಮುಖ್ಯ ಎನ್ನುವುದನ್ನು ಬಿಜೆಪಿ ಅವರಿಗೆ ಸಾರಿ ಸಾರಿ ಹೇಳುವ ಪ್ರಯತ್ನ ಮಾಡಿತು. ಉದ್ಧವ್ ಠಾಕ್ರೆ ಜೊತೆ ಏಕನಾಥ್ ಶಿಂಧೆ ವೈಮನಸ್ಯ ಹೊಂದಿದ್ದಾರೆ ಎಂದು ಸುದ್ದಿಯಾದಾಗಲೆಲ್ಲಾ, ಉದ್ಧವ್ ಠಾಕ್ರೆ ಇದರ ಬಗ್ಗೆ ಗಮನವೇ ನೀಡದೇ ಇರುತ್ತಿದ್ದದ್ದು ಈಗ ಪರಿಣಾಮ ಬೀರಿದೆ.

ಶಾಸಕರ ಸಮಸ್ಯೆಯನ್ನು ಆಲಿಸಿದ್ದ ಶಿಂಧೆ: ಸಾಮಾನ್ಯವಾಗಿ ಉದ್ಧವ್ ಠಾಕ್ರೆ ಜೊತೆ ಮಾತನಾಡಬೇಕು ಎಂದಾಗ ಶಿಂಧೆ ಅವರಿಗೆ ಸಂದೇಶ ನೀಡುವ ವ್ಯಕ್ತಿಯನ್ನು ಕರೆಯುತ್ತಿದ್ದರು. ಥಾಣೆಯಲ್ಲಿ ಏನಾದರೂ ಸಮಸ್ಯೆ ಉದ್ಭವಿಸಿದಾಗ ಠಾಕ್ರೆ ಕುಟುಂಬದ ಉಪಸ್ಥಿತಿ ಇಲ್ಲದೆಯೇ ಶಿಂಧೆ ಅದನ್ನು ಬಗೆಹರಿಸುತ್ತಿದ್ದರು. ಆದರೆ, ಕಳೆದ ಎರಡು ವರ್ಷದಲ್ಲಿ ಪಕ್ಷದ ಶಾಸಕರೊಂದಿಗೆ ಯಾವುದೇ ಪ್ರಮುಖ ಸಭೆಗಳನ್ನು ನಡೆಸಿರಲಿಲ್ಲ ಮಾತ್ರವಲ್ಲದೆ ಶಾಸಕರ ಭೇಟಿ ನಡೆಸಿರಲಿಲ್ಲ. ಕೋವಿಡ್ ಸಮಯದಲ್ಲಿ ಶಾಸಕರ ನಡುವಿನ ಎಲ್ಲಾ ಸಮಸ್ಯೆಗಳನ್ನು ಎದುರಿಸಲು ನಿಂತಿದ್ದು ಏಕನಾಥ್ ಶಿಂಧೆ. ಕೋವಿಡ್‌ ಸಮಯದಲ್ಲಿ ತಮ್ಮ ಪಕ್ಷದ ಶಾಸಕರನ್ನು ಚೆನ್ನಾಗಿ ನೋಡಿಕೊಂಡ ಏಕನಾಥ್ ಶಿಂಧೆ, ಬಂಡಾಯದ ಸಮಯದಲ್ಲಿ ಈಗ ಎಲ್ಲರ ಬೆಂಬಲವನ್ನು ಪಡೆದುಕೊಳ್ಳುತ್ತಿದ್ದಾರೆ.

RELATED ARTICLES

Related Articles

TRENDING ARTICLES