Friday, November 22, 2024

ಭೂಮಿ ಕಬಳಿಸಲು DC ಸಹಿಯೇ ನಕಲು..!

ಕೋಲಾರ : ಭೂಗಳ್ಳರು ಭೂಮಿ ಕಬಳಿಸಲು ಕೋಲಾರ ಜಿಲ್ಲಾಧಿಕಾರಿ ಸಹಿಯನ್ನೇ ನಕಲು ಮಾಡಿದ್ದಾರೆ. ಕೋಲಾರ ತಾಲ್ಲೂಕಿನ ಆಲಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ನರಸಾಪುರ ಕೈಗಾರಿಕಾ ವಲಯದಲ್ಲಿ ಭೂಮಿಗೆ ಚಿನ್ನದ ಬೆಲೆ ಇದೆ. ಪರಿಣಾಮ ಖಾಸಗಿ ಕಂಪನಿಯೊಂದಕ್ಕೆ ಸರಕಾರಿ ಜಮೀನು ಮಂಜೂರು ಮಾಡಲು ತಹಶೀಲ್ದಾರ್ ಕಚೇರಿಯ ಅಧಿಕಾರಿಗಳೇ ಜಿಲ್ಲಾಧಿಕಾರಿ ಸಹಿ ನಕಲು ಮಾಡಿ ಕೋಟ್ಯಂತರ ರೂಪಾಯಿ ಹಣ ಹೊಡೆಯಲು ಮುಂದಾಗಿದ್ದ ಪ್ರಕರಣ ಬಯಲಾಗಿದೆ. ಸನ್‌ಲಾರ್ಜ್ ಪ್ರಾಪರ್ಟಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ತಾಲೂಕಿನ ವಕ್ಕಲೇರಿ ಹೋಬಳಿಯ ಆಲಹಳ್ಳಿ ಗ್ರಾಮದ ಹಲವು ಸರ್ವೆ ಸಂಖ್ಯೆಯಲ್ಲಿರುವ ಹಿಡುವಳಿ ಜಮೀನುಗಳನ್ನು ಕೈಗಾರಿಕಾ ಉದ್ದೇಶಕ್ಕಾಗಿ ಖರೀದಿಸಿದ್ದಾರೆ.

ಸನ್‌ಲಾರ್ಜಿ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಈ ಜಮೀನುಗಳ ಮಧ್ಯದಲ್ಲಿ ಸರ್ವೆ ಸಂಖ್ಯೆ ೧೨೭ರಲ್ಲಿ ೩.೨೩ ಎಕರೆ ಸರಕಾರಿ ಖರಾಬು ಜಮೀನು ಇದ್ದು ಲ್ಯಾಂಡ್ ಲಾಕ್ಡ್ ಲ್ಯಾಂಡ್ ಆಗಿರುತ್ತದೆ. ಈ ಕಂಪನಿಗೆ ಜಮೀನು ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲವೆಂದು ಸರಕಾರವೇ ಪ್ರಸ್ತಾವನೆಯನ್ನು ತಿರಸ್ಕರಿಸಿದರೂ, ತಹಸೀಲ್ದಾರ್ ಕಚೇರಿ ಅಧಿಕಾರಿಗಳು, ಸಿಬ್ಬಂದಿ ಮಾತ್ರ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಲೆಟರ್ ಹೆಡ್ ಹಾಗೂ ಜಿಲ್ಲಾಧಿಕಾರಿಗಳ ಸಹಿಯನ್ನು ನಕಲು ಮಾಡಿ ಕೈಚಳಕ ತೋರಿದ್ದಾರೆ.

ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಪತ್ರ ಬಂದಿರುವ ರೀತಿ ನಕಲಿ ದಾಖಲೆಯನ್ನು ಸೃಷ್ಟಿಸಿರುವ ಅಧಿಕಾರಿಗಳು, ಜಮೀನು ಮಂಜೂರು ಮಾಡಲು ಅವಕಾಶವಿದ್ದು, ತಹಸೀಲ್ದಾರ್ ಅವರ ಮುಂದಿನ ಕ್ರಮಕ್ಕಾಗಿ ಹಿಂದಿರುಗಿಸಿದೆ ಅಂತಾ ಉಲ್ಲೇಖಿಸಿ ಸ್ಕ್ಯಾನ್ ಮಾಡಿ ಜಿಲ್ಲಾಧಿಕಾರಿಗಳ ಸಹಿಯನ್ನ ಮುದ್ರಿಸಿರುವುದು ದಾಖಲೆಗಳಿಂದ ಬೆಳಕಿಗೆ ಬಂದಿದೆ.

ಪೋರ್ಜರಿ ಪ್ರಕರಣ ಬಯಲಾಗಿದ್ದು ಹೇಗೆ ಅನ್ನೋದನ್ನ ನೋಡೋದಾದ್ರೆ, ಕಡತ ಬಹುತೇಕ ಅಂತಿಮ ಹಂತಕ್ಕೆ ಬಂದು ಕಂಪನಿಯವರಿಂದ ಶೇಕಡಾ ೫೦ರಷ್ಟು ಹಣ ಕಟ್ಟಿಸಿಕೊಳ್ಳಲು ನೋಟಿಸ್ ನೀಡಬೇಕಾಗಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಡತವನ್ನ ತಹಸೀಲ್ದಾರ್‌ಗೆ ಕಳುಹಿಸಿದ್ದರು. ಈ ವೇಳೆ ಕಡತವನ್ನು ಪರಿಶೀಲಿಸಿದ ವೇಳೆ ನಾಗರಾಜ್ ಅವ್ರಿಗೆ ಜಿಲ್ಲಾಧಿಕಾರಿಗಳ ಸಹಿಯ ಬಗ್ಗೆ ಸಂಶಯ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆದ್ರೆ, ನಕಲಿ ದಾಖಲೆಗಳನ್ನ ಸೃಷ್ಟಿಸಿರುವ ಬಗ್ಗೆ ಕಂಪನಿಗೆ ಯಾವುದೇ ಮಾಹಿತಿಯೂ ಇಲ್ಲ ಹಾಗೂ ಸಂಬಂಧವೂ ಇಲ್ಲವೆಂದು ಕಂಪೆನಿಯ ನಿರ್ದೇಶಕರು ಕೋಲಾರ ತಹಸೀಲ್ದಾರ್ ಅವ್ರಿಗೆ ಜೂನ್ ೧೬ರಂದು ಪತ್ರ ಬರೆದು ಸ್ಪಷ್ಟಪಡಿಸಿದ್ದಾರೆ.

ಒಟ್ನಲ್ಲಿ, ಕೋಲಾರ ತಹಶೀಲ್ದಾರ್ ಕಚೇರಿಯಲ್ಲಿರುವ ಭ್ರಷ್ಟ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಂದ ಬಂದಿರುವ ಕಡತಕ್ಕೆ ಪರ್ಯಾಯವಾಗಿ ಮತ್ತೊಂದು ಪತ್ರವನ್ನ ಸಿದ್ದಪಡಿಸಿ ಪೋರ್ಜರಿ ಮಾಡಿದ್ದಾರೆ. ಜಮೀನು ಮಂಜೂರಿಗೆ ಕೆಲ ಖಾಸಗಿ ವ್ಯಕ್ತಿಗಳು, ತಾಲ್ಲೂಕು ಕಚೇರಿ ಸಿಬ್ಬಂದಿ ಶಾಮೀಲಾಗಿದ್ದು, ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದ್ರೆ, ಪ್ರಕರಣವನ್ನ ಸೂತ್ರದಾರರು ಯಾರು ಅನ್ನೋದನ್ನ ಪೊಲೀಸರು ಪತ್ತೆ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ

RELATED ARTICLES

Related Articles

TRENDING ARTICLES