ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶನಿವಾರ ಬೈರಾಗಿ ಪ್ರೀ ರಿಲೀಸ್ ಈವೆಂಟ್ ನಡೆಯಿತು. ಕಾರ್ಯಕ್ರಮ ಆರಂಭದಿಂದಲೂ ಅಪ್ಪು-ಅಪ್ಪು ಎಂಬ ಘೋಷಣೆ ಸಾಮಾನ್ಯವಾಗಿತ್ತು.
ನಟ ಶಿವರಾಜ್ ಕುಮಾರ್ ಮಾತನಾಡುವ ವೇಳೆ ಅಭಿಮಾನಿಗಳು ಒಂದೇ ಸಮನೇ ಅಪ್ಪು-ಅಪ್ಪು ಎಂದು ಘೋಷಣೆ ಕೂಗುತ್ತಿದ್ದರಿಂದ ತಾಳ್ಮೆ ಕಳೆದುಕೊಂಡು ಶಿವಣ್ಣ ‘ ಏಯ್ ಸುಮ್ಮನೆ ಕೂತ್ಕೊಳಪ್ಪ, ಅವನು ನನ್ನ ರಕ್ತ, ನೀನು ಈಗ ನೋಡಿದಿಯಾ, ನಾನು ಅವನನ್ನು ಕೂಸಿನಿಂದಲೂ ನೋಡಿದ್ದೀನಿ, ಪ್ರೀತಿ ಹೃದಯದಲ್ಲಿ ಇರಲಿ- ಕೇವಲ ಗಂಟಲಿನ ಹೊರಗೆ ಮಾತ್ರವಲ್ಲ ಎಂದು ತರಾಟೆಗೆ ತೆಗೆದುಕೊಂಡು ಬುದ್ಧಿವಾದ ಹೇಳಿದರು.
ಚಾಮರಾಜನಗರ ನನ್ನ ತವರುಮನೆ ಇದ್ದಂತೆ, ಇಲ್ಲಿ ಯಾವಾಗಲೂ ಪ್ರೀತಿ ಜಾಸ್ತಿ ಎಂದು ನಟ ಶಿವರಾಜ್ ಕುಮಾರ್ ಹೇಳಿದರು. ಚಾಮರಾಜನಗರ ನಮ್ಮ ಊರು, ಇಲ್ಲಿ ಯಾವಾಗಲೂ ಹೆಚ್ಚು ಪ್ರೀತಿ ಸಿಗಲಿದೆ, ಒಂದು ವಿಭಿನ್ಮ ಕತೆಯ ಸಿನಿಮಾ ಬರುತ್ತಿದ್ದು ಎಲ್ಲರೂ ನೋಡಬೇಕು ಎಂದು ಮನವಿ ಮಾಡಿದರು.
ಆ್ಯಕ್ಷನ್ ಇದೆ, ಅದ್ಭುತವಾದ ಡ್ಯಾನ್ಸ್ ಇದೆ, ಒಳ್ಳೆಯ ಮೆಸೇಜ್ ಇರುವ ಸಿನಿಮಾ ಇದಾಗಿದ್ದು ಖಂಡಿತಾ ಎಲ್ಲರಿಗೂ ಇಷ್ಟವಾಗಲಿದೆ, ಬೈರಾಗಿಯ 25 ನೇ ದಿನ ಸೆಲೆಬ್ರೇಷನ್ ಗೆ ಚಾಮರಾಜನಗರಕ್ಕೆ ಮತ್ತೆ ಬರುತ್ತೇನೆ ಎಂದರು.
ಬೈರಾಗಿ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕಾಗಿ ಚಾಮರಾಜನಗರಕ್ಕೆ ಬಂದಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾರ್ಯಕ್ರಮಕ್ಕೂ ಮುನ್ನ ತಮ್ಮ ತವರಿನ ನೆಲವಾದ ತಮಿಳುನಾಡಿನ ಗಾಜನೂರಿಗೂ ಭೇಟಿ ಕೊಟ್ಟರು.
ಪುನೀತ್ ಅಗಲಿದ ಬಳಿಕ ತವರಿಗೆ ಶಿವರಾಜ್ ಕುಮಾರ್ ಅವರ ಮೊದಲ ಭೇಟಿ ಇದಾಗಿದ್ದು ಕಳೆದ ಬಾರಿ ಪುನೀತ್ ಕುಟುಂಬ ಹಾಗೂ ಶಿವರಾಜ್ ಕುಮಾರ್ ಎರಡೂ ಕುಟುಂಬವೂ ಒಟ್ಟಿಗೆ ಗಾಜನೂರಿಗೆ ಭೇಟಿ ಕೊಟ್ಟಿದ್ದರು. ಇನ್ನು, ಇಂದು ಅತ್ತೆ ನಾಗಮ್ಮ ಅವರ ಆರೋಗ್ಯ ವಿಚಾರಿಸಿದ ಬಳಿಕ ಅಣ್ಣಾವ್ರ ಹಳೇ ಮನೆ, ಅಣ್ಣಾವ್ರು ಧ್ಯಾನ ಮಾಡುತ್ತಿದ್ದ ದೊಡ್ಡ ಆಲದಮರ ಸ್ಥಳಗಳಿಗೆ ಭೇಟಿಕೊಟ್ಟು ಸಂಜೆವರೆಗೂ ರಿಲ್ಯಾಕ್ಸ್ ಮಾಡಿದರು.
ಮಕ್ಕಳು ಯಾರೇ ಬಂದರೂ ಬಾಡೂಟ ವಿಶೇಷ ಆದ್ದರಿಂದ ಶಿವರಾಜ್ ಕುಮಾರ್ ಅವರಿಗೆ ಚಿಕನ್ ಗ್ರೇವಿ, ಮಟನ್ ಸಾರು, ಫಿಶ್ ಫ್ರೈ, ಕಬಾಬ್ನ್ನು ಬಡಿಸಲಾಗಿತ್ತು. ಶಿವಣ್ಣ ಅವರ ಜೊತೆ ಡಾಲಿ ಧನಂಜಯ ಇದ್ದರು.