ಕೊಪ್ಪಳ : ಕಿಷ್ಕಿಂದೆಯ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು.. ಈ ಸಂಬಂಧ ಶೀಘ್ರವೇ ಕೆಲಸ ಪ್ರಾರಂಭಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ ಯೋಜನೆ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಈ ಯೋಜನೆಗಾಗಿ ಸುಮಾರು 60 ಎಕರೆ ಭೂಮಿ ಅಗತ್ಯವಿದ್ದು, ಇದರಲ್ಲಿ 58 ಎಕರೆ ಖಾಸಗಿ ಜಮೀನಾಗಿದೆ. ಇದನ್ನು ರೈತರ ಒಪ್ಪಿಗೆಯ ಮೇರೆಗೆ ಭೂಸ್ವಾಧೀನ ಪಡಿಸುವಂತೆ ಅಥವಾ ಕೆಐಎಡಿಬಿ ಮೂಲಕ ಖರೀದಿಸುವ ಮೂಲಕ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಯವರು ಸೂಚಿಸಿದರು.
ಯೋಜನೆಯ ಮೊದಲ ಹಂತದಲ್ಲಿ ಅಂಜನಾದ್ರಿಯ ಸಂಪರ್ಕ ರಸ್ತೆ ಅಭಿವೃದ್ಧಿ, ಪರ್ಯಾಯ ರಸ್ತೆಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಬೇಕು. ರಾಷ್ಟ್ರೀಯ ಹೆದ್ದಾರಿಯಿಂದ ಗಂಗಾವತಿ ವರೆಗಿನ ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಲೋಕೋಪಯೋಗಿ ಇಲಾಖೆಯ ಮೂಲಕ ಕ್ರಮ ವಹಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇದಕ್ಕೆ ವಿಸ್ತೃತ ಯೋಜನಾ ವರದಿಯನ್ನು ಕೂಡಲೇ ಸಿದ್ಧಪಡಿಸುವಂತೆ ಸೂಚಿಸಿದರು. ಇದರೊಂದಿಗೆ ಬೆಟ್ಟದ ಬುಡದಲ್ಲಿ ಯಾತ್ರಿಕರಿಗೆ ಪಾರ್ಕಿಂಗ್ ಮತ್ತಿತರ ಮೂಲಸೌಕರ್ಯ ಒದಗಿಸುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿದರು. ಯೋಜನೆಯ ಆರ್ಥಿಕ ಅನುಮೋದನೆಗಾಗಿ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಸಿಎಂ ಬೊಮ್ಮಾಯಿ ಸೂಚಿಸಿದರು.
ಅಂಜನಾದ್ರಿ ಬೆಟ್ಟಕ್ಕೆ 430 ಮೀಟರ್ ರೋಪ್ ವೇ ನಿರ್ಮಿಸಲು ಪ್ರಸ್ತಾಪಿಸಲಾಗಿದ್ದು, ಈ ಯೋಜನೆಯ ಟೆಂಡರ್ ಪ್ರಕ್ರಿಯೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸುವಂತೆ ಪ್ರವಾಸೋದ್ಯಮ ಇಲಾಖೆಗೆ ಮುಖ್ಯಮಂತ್ರಿಯವರು ಸೂಚಿಸಿದ್ದಾರೆ. ಈ ಯೋಜನೆಯಡಿ ರೋಪ್ ವೇ ಬೇಸ್ನಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಕರ್ಯ, ಸರದಿಯಲ್ಲಿ ಕಾಯುವ ಸಂದರ್ಭ ಬಂದಾಗ ಅಗತ್ಯ ಮೂಲಸೌಕರ್ಯಗಳು, ಪಾರ್ಕಿಂಗ್ ಸೌಲಭ್ಯಗಳನ್ನು ಕಲ್ಪಿಸಲು ಸೂಚಿಸಿದರು. ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬೊಮ್ಮಾಯಿ ಸೂಚಿಸಿದರು. ಜುಲೈ 15 ರೊಳಗೆ ತಾವು ಖುದ್ದು ಅಂಜನಾದ್ರಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಹೌದು, ಅಂಜನಾದ್ರಿ ಈಗ ವಿದೇಶಿಗರ ಹಾಟ್‌ಸ್ಪಾಟ್ ಆಗಿದೆ.. ಇಲ್ಲಿ ದೇಶದ ವಿವಿಧ ಭಾಗಗಳಿಂದಷ್ಟೇ ಅಲ್ಲದೆ, ವಿದೇಶಗಳಿಂದ ಆಂಜನೇಯನ ದರ್ಶನಕ್ಕೆ ಬರ್ತಿದ್ದಾರೆ. ಹೀಗೆ, ಬಂದಿರುವ ಭಗ್ತರು ಮಾರುತಿ ಕೃಪೆಗೆ ಪಾತ್ರರಾಗುತ್ತಿದ್ದಾರೆ.. ಹೀಗೆ ಬಂದ ವಿದೇಶಿ ಮಹಿಳೆ ರಂಗೋಲಿ ಬಿಡಿಸಿ ಎಲ್ಲರ ಗಮನ ಸಳೆದಿದ್ದಾಳೆ.. ಮೌಂಟೇನಿಯಾ ಮೂಲದ ಪ್ರವಾಸಿಗರು ಅಂಜನಾದ್ರಿಯಲ್ಲಿ ರಂಗೋಲಿ ಕಲೆ ಪ್ರದರ್ಶನ ಮಾಡಿದ್ರು.
ಹೌದು, ಹೀಗೆ ಹೆಚ್ಚೆಚ್ಚು ಪ್ರವಾಸಿಗರು ಬರುತ್ತಿದ್ದು ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದೆ.