ತುಮಕೂರು : ಅದೊಂದು ಪುಟ್ಟ ಗ್ರಾಮ, ಆದ್ರೆ ಅಲ್ಲಿನ ಜನತೆ ಶಿಕ್ಷಣಕ್ಕೆ ಕೊಟ್ಟಿರೋ ಮಹತ್ವ ತಿಳಿದರೆ ನಿಮಗೆ ಅಚ್ಚರಿಯಾಗುತ್ತೆ
ಈ ಕಾಲದಲ್ಲೂ ಸರ್ಕಾರಿ ಶಾಲಾ ಉಳಿವಿಗಾಗಿ ಇಡೀ ಗ್ರಾಮವೇ ಹೋರಾಟ ಮಾಡ್ತಾ ಇರೋದು ನಿಜಕ್ಕೂ ಮಾದರಿಯಾಗಿದೆ.
ಭೂಮಿ ಅಳೆಯುತ್ತಿರೋ ಸರ್ವೆಯರ್, ಕಲ್ಲು ಹೊತ್ತು ತಂದು ಜಾಗ ಗುರುತಿಸಿಕೊಳ್ಳುತ್ತಿರೋ ಸಾರ್ವಜನಿಕರು, ಜಾಗದ ಉಳಿವಿಗಾಗಿ ಓಡಾಟ ಮಾಡ್ತೀರೋ ಕೆ.ಆರ್.ಎಸ್ ಪಕ್ಷದ ಹಲವು ಕಾರ್ಯಕರ್ತರು ಇಂತಹದೊಂದು ದೃಶ್ಯ ಕಂಡು ಬಂದಿದ್ದು ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ತಾವರೆಕೆರೆಯಲ್ಲಿ. ಹೌದು ತುರುವೇಕೆರೆ ತಾಲೂಕಿನಲ್ಲಿರೋ ತಾವರೆಕೆರೆಯ ಸರ್ಕಾರಿ ಶಾಲೆಯ ಉಳಿವಿಗಾಗಿ ಇಡೀ ಗ್ರಾಮಸ್ಥರು ಪಣತೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಗ್ರಾಮದ ಸರ್ಕಾರಿ ಶಾಲೆಯ ಹೆಸರಿನಲ್ಲಿ ಬರೋಬರೀ 3 ಎಕರೆ 26 ಕುಂಟೆ ಜಮೀನಿದ್ದು ಅದ್ರಲ್ಲಿ ಸರ್ವೆ ನಂ 6 ರಲ್ಲಿ 3 ಎಕರೆ ಹಾಗೂ ಇತರೆ ಸರ್ವೆ ನಂಬರ್ನಲ್ಲಿ 26 ಕುಂಟೆ ಜಮೀನಿದ್ದು ಸದ್ಯ ಈ ಜಮೀನಿನ ಉಳಿವಿಗಾಗಿ ಮಕ್ಕಳ ಆಟದ ಮೈದಾನ ನಿರ್ಮಾಣ ಮಾಡಲು ಇಡೀ ಗ್ರಾಮಸ್ಥರು ಪಣತೊಟ್ಟು ಕೆಲಸ ಮಾಡುತ್ತಿದ್ದಾರೆ.
ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸರ್ವೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶಾಲೆಗೆ ಸೇರುವ ಅರ್ಧ ಜಾಗವನ್ನು ಗುರುತು ಮಾಡಿದ್ದು ಅರ್ಧ ಭಾಗವನ್ನು ಗುರುತು ಮಾಡದೇ ಮತ್ತೊಮ್ಮೆ ಬರುವುದಾಗಿ ತಿಳಿಸಿದ್ದಾರೆ. ಈಗಾಗಲೇ ಸರ್ವೆ ಮಾಡಿರುವ ಭಾಗದಲ್ಲಿ ಹಲವು ಕಡೆ ಒತ್ತುವರಿಯಾಗಿದ್ದು ಕೆಲವರು ಕಟ್ಟಡ ಕಟ್ಟಿಕೊಂಡಿದ್ರೆ. ಕೆಲವರು ಹುಣಸೇ ಮರ ಬೆಳಸಿದ್ದಾರೆ. ಗ್ರಾಮಸ್ಥರು ಸದ್ಯ ಇದನ್ನ ಉಪಯೋಗಿಸಿಕೊಂಡು ಹುಣಸೇ ಮರ ಬಂದ್ರೆ ಹರಾಜು ಪ್ರಕ್ರಿಯೆ ನಡೆಸಿ ಶಾಲೆ ಅಭಿವೃದ್ಧಿ ಪಡಿಸ್ತೇವೆ ಅಂತಾ ಇದ್ದಾರೆ.
ಸದ್ಯ ಗ್ರಾಮಸ್ಥರಿಗೆ ಸಹಕಾರ ನೀಡಿ ಅಧಿಕಾರಿಗಳು ಒತ್ತುವರಿ ಜಾಗ ತೆರವಿಗೊಳಿಸಿ ಶಾಲೆಯ ಜಾಗ ಉಳಿಸುವುದರ ಜೊತೆಗೆ ಅಭಿವೃದ್ಧಿಗೆ ಸಾಥ್ ನೀಡ್ತಾರಾ ಕಾದು ನೋಡಬೇಕಿದೆ.
ಹೇಮಂತ ಕುಮಾರ್.ಜೆ.ಎಸ್ ಪವರ್ ಟಿವಿ ತುಮಕೂರು